ಆಕ್ರಮಣ ರಾಜಕೀಯದ ವಿರುದ್ಧ ಒಂದು ಹೆಜ್ಜೆ

0
346

ಸನ್ಮಾರ್ಗ ವಾರ್ತೆ

✍️ ಶಾಝಿಲ್ ಉಸ್ಮಾನ್

ಇಸ್ರೇಲ್ ಯಹ್ಯಾ ಸಿನ್‌ವಾರ್‌ರ ಹತ್ಯೆ ಮಾಡಿತು. ಇಸ್ರೇಲಿನ ಘಾತುಕತನದ ಹಿಂದೆ ಬೆಂಬಲವಾಗಿ ನಿಂತ ಶಕ್ತಿಗಳು ತಂತ್ರಜ್ಞಾನವನ್ನು ಯಥೇಚ್ಛವಾಗಿ ಬಳಕೆ ಮಾಡಿ ಅವರು ಕೊಟ್ಟ ಆಯುಧಗಳನ್ನು ಉಪಯೋಗಿಸಿ ಪತ್ತೆ ಹಚ್ಚಲು ಸಾಧ್ಯವಾಗದ 61 ವರ್ಷ ವಯಸ್ಸಿನ ವ್ಯಕ್ತಿಯನ್ನು ಅಕಸ್ಮಿಕವಾಗಿ ಹತ್ಯೆ ಮಾಡಿದ ಬಳಿಕ ಇಸ್ರೇಲ್ ಗೆಲುವನ್ನು ಆಚರಿಸುತ್ತಿದೆ. ಟೆಲ್ ಅವೀವ್‌ನ ಬೀದಿಗಳಲ್ಲಿ ಸಿಹಿ ಹಂಚಿದ್ದು ಕುಣಿದು ಕುಪ್ಪಳಿಸಿದ್ದನ್ನು ಜಗತ್ತು ನೋಡಿದೆ. ಅಮೆರಿಕದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕೂಡ ಒಬ್ಬ ಮನುಷ್ಯನ ಸಾವನ್ನು ಬಹುದೊಡ್ಡ ಘಟನೆಯಾಗಿ ಬಿಂಬಿಸಿದ್ದಾರೆ.

ಒಂದು ದೇಶವನ್ನು, ಅಲ್ಲಿನ ಅಸಹಾಯಕರಾದ ಮನುಷ್ಯರನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಸಾಮೂಹಿಕ ಹತ್ಯೆ ಮಾಡಿಯೂ ಗುರಿಯನ್ನು ಸಾಧಿಸದ ಝಿಯೊನಿಸ್ಟ್ ಇಸ್ರೇಲಿಗೆ ಮತ್ತು ಅದರ ಹಿಂಬಾಲಕ ಬೆಂಬಲಿಗರಿಗೆ ಯಹ್ಯಾ ಸಿನ್‌ವಾರ್ ಇಹಲೋಕ ತೊರೆದು ಹೋಗಿದ್ದೇ ಒಂದು ದೊಡ್ಡ ಮಹಾ ಘಟನೆಯಾಯಿತು!

ಆದರೆ ಗಾಝದಲ್ಲಿ ಒಬ್ಬನೇ ಒಬ್ಬ ಸಿನ್‌ವಾರ್ ಇರುವುದು ಎಂದು ಅವರು ತಿಳ್ಕೊಂಡದ್ದು ಬಹಳ ದೊಡ್ಡ ಮೂರ್ಖತನ? ಯಾಕೆಂದರೆ ಅಲ್ಲಿ ಎಷ್ಟು ಸಿನ್‌ವಾರ್‌ಗಳಿಲ್ಲ. ಅವರಂತಹ ಎಷ್ಟು ಹೋರಾಟದ ಛಾತಿಯವರಿಲ್ಲ? ಈ ಛಾತಿ ಸುಮ್ಮನೆ ಬಂದಿಲ್ಲ. ತಂಟೆಕೋರ ಇಸ್ರೇಲ್ ಫೆಲೆಸ್ತೀನಿ ಜನರಿಗೆ ನಿರಂತರ ಕೊಟ್ಟ ಕೀಟಲೆ ಪ್ರತಿಯೊಬ್ಬ ಫೆಲೆಸ್ತೀನಿನಲ್ಲಿ ಸಿನ್ವಾರ್‌ರ ಪ್ರತಿರೂಪವನ್ನು ಮತ್ತು ಹೋರಾಟದ ಛಾತಿಯನ್ನು ಇಷ್ಟರಲ್ಲೇ ಬೆಳೆಸಿದೆ ಎಂಬುದನ್ನು ಸಿನ್‌ವಾರಿಲ್ಲದ ಗಾಝದ ಹೋರಾಟ ತೋರಿಸಿಕೊಡುತ್ತಿದೆ. ಇಸ್ರೇಲಿನ ಕಮಾಂಡರ್‌ಗಳನ್ನು ಹಮಾಸ್‌ನ ಗೆರಿಲ್ಲ ಯೋಧರು ಟ್ರಾಫ್‌ಗೆ ಸಿಕ್ಕಿಸಿ ಕೊಂದು ಹಾಕುತ್ತಿದ್ದಾರೆ.

ಹಾಗಂತ ಇದಕ್ಕೆ ಹಮಾಸ್ ಸಂಭ್ರಮಿಸಿಲ್ಲ. ಸಾವಿಗೆ ಸಂಭ್ರಮಿಸುವುದು ಧೂರ್ತರ ಲಕ್ಷಣ ಎಂದು ಅದಕ್ಕೆ ಗೊತ್ತಿದೆ. ಅದರಂತೆ ಎಲ್ಲ ಧೂರ್ತರ ಅವಸಾನ ತೀರ ದಯನೀಯವಾಗಿರುತ್ತದೆ ಎಂದೂ ಅದಕ್ಕೆ ಗೊತ್ತಿದೆ.

ಯಾಕೆಂದರೆ ಹಮಾಸ್ ಹೇಳಿಕೊಂಡಿರುವಂತೆ ಅದು ಆಖಿರತ್‌ನಲ್ಲಿ ವಿಶ್ವಾಸವಿಟ್ಟಿದೆ. ಇಲ್ಲಿಗಿಂತ ತಮ್ಮ ಪ್ರತಿಫಲವನ್ನು ಪರಲೋಕದಲ್ಲಿ ಬಯಸಿದವರ ತಂಡ ಅದು.

ಆದರೂ ನಾಯಕರ ಸಾವು ಯಾವ ಸಂಘಟನೆಗೂ ಆಘಾತ ಸೃಷ್ಟಿಸುವುದು ಅಸಹಜವಲ್ಲ. ಆದರೆ ಹಮಾಸ್‌ನಲ್ಲಿ ಒಬ್ಬನ ನಂತರ ಇನ್ನೊಬ್ಬ ನಾಯಕತ್ವದ ಆ ಹೊಣೆ ಎತ್ತಿಕೊಂಡು ಮುಂದೆ ಬರುತ್ತಾರೆ. ಹಮಾಸ್‌ಗೆ ಹೋರಾಟ ಒಂದು ಉದ್ದೇಶ. ಗುರಿ. ಆ ಗುರಿಯೆಡೆಗೆ ಸಾಗುವುದು ಮುಖ್ಯ. ಆ ಹಾದಿಯಲ್ಲಾಗುವ ಸಾವು ನೋವು ಎರಡನೆಯ ಪರಿಗಣನೆಯದು. ಗುರಿಗೆ ಪ್ರಥಮ ಆದ್ಯತೆ.

ಆದುದರಿಂದ ಒಬ್ಬನ ನಂತರ ಇನ್ನೊಬ್ಬನನ್ನು ಆಂದೋಲನಗಳು ಮೊದಲೇ ಸೃಷ್ಟಿಸಿರುತ್ತವೆ. ಯಹ್ಯಾ ಸಿನ್‌ವಾರ್ ಮುಂದೇನು? ಹಮಾಸ್ ಸೋತು ಶರಣಾಗುತ್ತದೆ ಎಂದು ತಿಳಿದುಕೊಂಡವರಿಗೆ ಲೆಕ್ಕ ತಪ್ಪಿದೆ. ಸಾವನ್ನೇ ಜೀವನದಲ್ಲಿ ಮಹಾ ಯಶಸ್ಸೆಂದು ಲೆಕ್ಕ ಮಾಡುವ ಶಿಕ್ಷಣ ಹಮಾಸ್‌ನಲ್ಲಿ ಇದೆ. ಭೌತಿಕವಾದಿಗಳು ಲೋಕದ ವಿಜಯವನ್ನು ಲೆಕ್ಕ ಹಾಕುತ್ತಾರೆ. ಹಮಾಸ್ ಸೋಲು ಗೆಲುವಿನ ಎರಡರ ಪರಿಣಾಮದ ಹಿಂದೆ ದೇವ ವಿಧಿ ಇದೆ ಎಂದು ತಿಳಿದುಕೊಂಡವರಿರುವ ಸಂಘಟನೆ ಎಂದು ಅದರ ಇತಿಹಾಸ ಹೇಳುತ್ತದೆ. ಭೌತಿಕವಾದಿ ಇಸ್ರೇಲಿನ ಸಾಮ್ರಾಜ್ಯ ವಿಸ್ತರಣೆಯಲ್ಲಿ ಎಲ್ಲ ಪರಿಣಾಮವು ಅವರ ಕೈಯಲ್ಲಿದೆ ಎಂಬಂತೆ ವರ್ತನೆಯಿತ್ತು. ಆದರೆ ಲೆಬನಾನಿನ ಡ್ರೋನ್ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆಯನ್ನು ಹುಡುಕಿ ಕೊಂಡು ಹೋಗಿ ಸ್ಫೋಟಗೊಂಡ ನಂತರ ನಾವು ವಿಜೇತರಲ್ಲ, ಇಷ್ಟೆಲ್ಲ ತಂತ್ರಜ್ಞಾನ ಇಟ್ಟುಕೊಂಡು ಐರನ್ ಡೋಮ್ ಎಂಬ ರಕ್ಷಣಾ ಕವಚ ಇದ್ದರೂ ಲೆಬನಾನಿನ ಡ್ರೋನ್ ಬೆಂಜಮಿನ್ ನೆತನ್ಯಾಹುವನ್ನು ನಿರ್ವಿಘ್ನವಾಗಿ ಹುಡುಕಿ ಕೊಂಡು ಹೋಗಿ ಸ್ಫೋಟಿಸಿತು. ಅಡೆ ತಡೆಯಿಲ್ಲದೆ ಗಾಳಿ ನುಸುಳಿಕೊಂಡು ಹೋದಂತೆ ಇದಿತ್ತಲ್ಲ.

ಸಿನ್‌ವಾರ್ ಆಗಲಿ ಹಮಾಸ್ ಆಗಲಿ ಒಂದೋ ಸಾವು ಅಲ್ಲದಿದ್ದರೆ ಸ್ವಾತಂತ್ರ್ಯ ಎಂದು ದೃಢ ನಿರ್ಧಾರ ಹೊಂದಿದವರು. ಈ ತತ್ವ ಜೀವನದ ಗುರಿಯಾಗಿ ಮಾಡಿಕೊಂಡು ಹಮಾಸ್‌ನ ಯೋಧರು ಹೋರಾಡಿ ಜೀವ ಕಳಕೊಂಡರು. ಆದುದರಿಂದ ಸೈನಿಕ ಕಾರ್ಯಾಚರಣೆಯಿಂದ ಇಸ್ರೇಲಿಗೆ ಆದ ಯಾವ ಗುರಿಯನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಮಾಸ್ ಹಿಡಿದು ಇಟ್ಟುಕೊಂಡ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲೂ ಸಾಧ್ಯವಾಗಲಿಲ್ಲ. ಅವರಿಗೆ ಆ ಉದ್ದೇಶವೇ ಇಲ್ಲ. ಯಹ್ಯಾ ಸಿನ್‌ವಾರ್, ಇಸ್ಮಾಯೀಲ್ ಹನಿಯ್ಯ ಅವರ ಗುರಿಯಾಗಿದ್ದಾರೆ ಎಂದು ಇಸ್ರೇಲಿನ ಮಹಾಜನತೆಗೆ ಅರ್ಥವಾಗಿ ಬೀದಿಗಿಳಿದು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತಿದ್ದಾರೆ.

ಒಂದು ಕಡೆ ಹೀಗಾದರೆ, ಇನ್ನೊಂದು ಕಡೆ ಹಮಾಸನ್ನು ಇಲ್ಲದಾಗಿಸಲು ಹೊರಟು ಇಸ್ರೇಲಿನ ಸೈನಿಕರ ಹೋರಾಟದ ಶಕ್ತಿಯೇ ಸೋರಿ ಹೋಗುತ್ತಿದೆ. ಅವರು ಬೇಸತ್ತಿದ್ದಾರೆ. ಉಲ್ಲಸಿತರಾಗಿಲ್ಲ. ಯಾಕೆಂದರೆ ಒಂದು ವರ್ಷದ ಹಿಂದೆ ಯಾವ ಆಸಕ್ತಿಯಲ್ಲಿ ಹೊರಟರೋ ಅದರಲ್ಲಿ ಒಂದು ಗುರಿಯನ್ನೂ ಅವರು ಈವರೆಗೂ ಸಾಧಿಸಿಲ್ಲ. ಸಾಧ್ಯವೂ ಇಲ್ಲ ಎಂದು ಇಸ್ರೇಲಿನ ಐಡಿಎಫ್‌ಗೆ ಮನವರಿಕೆಯಾಗಿದೆ. ಆದುದರಿಂದ ತಮ್ಮ ಸೈನಿಕರ ನಿರಾಸಕ್ತಿಗೆ ಮದ್ದು ಅವರಲಿಲ್ಲ.

ಲೆಬನಾನಿನ ಹಿಝ್ಬುಲ್ಲವನ್ನು ನಿವಾರಿಸುವುದು, ಹಮಾಸನ್ನು ಸಂಪೂರ್ಣ ನಾಶಮಾಡುವುದು ಮತ್ತು ಹಮಾಸ್ ಇಟ್ಟುಕೊಂಡ ನೂರಾರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದು ಇಸ್ರೇಲ್ ಗುರಿಯಲ್ಲವೇ? ಗಾಝದ 45 ಸಾವಿರದಷ್ಟು ಮಂದಿ ಜೀವ ಕಳಕೊಂಡಿದ್ದಾರೆ. ಲಕ್ಷಕ್ಕಿಂತ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹೀಗಿರುವಾಗ ಈ ಒತ್ತೆಯಾಳುಗಳು ಜೀವಂತ ಇದ್ದಾರೆ ಎನ್ನುವ ಗ್ಯಾರಂಟಿ ಯಾರಿಗೂ ನೀಡಲು ಸಾಧ್ಯವಾಗದು. ಹೀಗಾಗಿ ಒತ್ತೆಯಾಳುಗಳನ್ನು ಬಿಡಿಸುವುದು ನನಸಾಗದ ಗುರಿಯಾಗಿಯೇ ಇಸ್ರೇಲಿನ ಪಾಲಿಗೆ ಉಳಿಯಲಿದೆ ಎಂಬ ಸತ್ಯ ಕ್ರಮೇಣ ಇಸ್ರೇಲಿನ ಮಹಾಜನತೆಯಲ್ಲಿ ಆಕ್ರೋಶದ ಘಟ ಸ್ಫೋಟಕ್ಕೂ ಕಾರಣವಾಗಬಹುದು.

ಯಹ್ಯಾ ಸಿನ್‌ವಾರ್ ಇಲ್ಲದ ಗಾಝ ಇನ್ನಷ್ಟು ತೀವ್ರಗೊಂಡಿದ್ದು ಹೌದು. ಈಗ ಯುದ್ಧ ಅಕ್ರಮ ಒತ್ತುವರಿ ಮಾಡಿ ಯಹೂದಿಗಳನ್ನು ಇರಿಸಿದ ಸ್ಥಳದ ವಿನಾಶದೆಡೆಗೆ ಸಾಗುತ್ತಿದೆ. ಲೆಬನಾನಿನ ಹಿಝ್ಬುಲ್ಲ ಇಸ್ರೇಲ್ ಫೆಲೆಸ್ತೀನಿಯನ್ನು ಆಕ್ರಮಿಸಿ ತಮ್ಮವರಿಗೆ ಮನೆ ಕಟ್ಟಿ ಕೊಟ್ಟ ನಿವಾಸಗಳನ್ನು ಪುಡಿಗುಟ್ಟುತ್ತಿವೆ. ಉತ್ತರ ಇಸ್ರೇಲಿನಿಂದ ಓಡಿಹೋದ ಯಹೂದಿಗಳು ಮತ್ತೊಮ್ಮೆ ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಉದ್ಯೋಗ ಇಲ್ಲ ಆದಾಯ ಇಲ್ಲ ಅಂತ ಹೇಳುತ್ತಿದ್ದಾರೆ. ಆದರೆ ಇಸ್ರೇಲ್ ಗಾಝದ ಮೇಲೆ ಬಾಂಬು ಸುರಿಸಿದಾಗ ಅಲ್ಲಿಂದ ಬೇರೆಡೆಗೆ ಹೋದ ಫೆಲೆಸ್ತೀನಿಯರು ಬಾಂಬು ಹಾಕಿ ಪುಡಿಗುಟ್ಟಿದ ಮನೆಯತ್ತ ಮರಳಲು ಸಿದ್ಧರಾಗಿದ್ದರು ಎಂಬುದನ್ನು ನೆನಪಿಸಿಕೊಂಡರೆ ಗಾಝಾದ ಮಂದಿಯ ಧೈರ್ಯ ಎಷ್ಟು ಉನ್ನತವಾದದ್ದು ಎಂದು ನಿಮಗೂ ಮನವರಿಕೆಯಾಗಬಹುದು. ಹೇಡಿತನ ಒಂದೆಡೆ ಶೌರ್ಯ ಇನ್ನೊಂದೆಡೆ.

ಆದುದರಿಂದ ಹಮಾಸ್ ಯಹ್ಯಾ ಸಿನ್‌ವಾರ್‌ರನ್ನು ಕಳಕೊಂಡದ್ದು ಒಬ್ಬ ಯೋಧನನ್ನು ಕಳಕೊಂಡತೆ ಮಾತ್ರ ಎಂದು ಸ್ಪಷ್ಟಪಡಿಸುತ್ತದೆ. ಹೋರಾಟದ ಕಣ ಬಿಟ್ಟು ಓಡಿ ಹೋಗಿಲ್ಲ. ಗಾಝದಲ್ಲಿ ಝಿಯೊನಿಸ್ಟ್ ಕಮಾಂಡರ್‌ಗಳಿಗೆ ಗುರಿಯಿಡುತ್ತಿದೆ. ಅದರ ಯೋಧರು ಇಸ್ರೇಲಿನ ಸೈನಿಕರನ್ನು ಟ್ರಾಪ್‌ನಲ್ಲಿ ಸಿಲುಕಿಸುತ್ತಿದ್ದಾರೆ. ಸಿನ್‌ವಾರ್ ಇಲ್ಲದ ಹಮಾಸ್ ನಲ್ಲಿ ಈ ಛಾತಿ ಎಲ್ಲಿಂದ ಬಂತು? ಸರಳ ಉತ್ತರ- ಅವರ ಅಚಲ ವಿಶ್ವಾಸ.