ಡಿಜಿಟಲ್‌ ಅರೆಸ್ಟ್ ; 51 ಲಕ್ಷ ಕಳಕೊಂಡ ವ್ಯಕ್ತಿ – ಏನದು ಡಿಜಿಟಲ್ ಬಂಧನ, ನಿಮಗೂ ಈ ಭೀತಿ ಬರಬಹುದು

0
674

ಸನ್ಮಾರ್ಗ ವಾರ್ತೆ

ಚಂಡೀಗಢ: ಚಂಡೀಗಢ ನಿವಾಸಿ ಹರಿನಾಥ್ ಅವರು ಸೈಬರ್ ವಂಚಕರ ಬಲೆಗೆ ಬಿದ್ದು 51 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಅಕ್ಟೋಬರ್ 2 ರಿಂದ 24 ರವರೆಗೆ, 22 ದಿನಗಳ ಕಾಲ ಹರಿನಾಥ್ ಈ ವಂಚಕರ ನಿಯಂತ್ರಣದಲ್ಲಿದ್ದು, ಎಲ್ಲಾ ಸಮಯದಲ್ಲೂ ವೀಡಿಯೋ ಕರೆಗಳಲ್ಲಿ ತೊಡಗಿಸಿಕೊಂಡಿರಬೇಕಾಯಿತು. ಬಾತ್ ರೂಮಿಗೆ ಹೋಗುವ ಮುನ್ನ ಮೊಬೈಲ್ ದೂರ ಇಡುವಂತೆ ಕೂಡ ಕಟ್ಟುನಿಟ್ಟಿನ ಸೂಚನೆಯನ್ನು ವಂಚಕರು ನೀಡಿದ್ದರು.

ವಂಚಕರು ಅವರಿಂದ ಒಟ್ಟು 51 ಲಕ್ಷ 2 ಸಾವಿರ ರೂಪಾಯಿಯನ್ನು ದೋಚಿದ್ದು, ಈ ಅವಧಿಯಲ್ಲಿ ಅವರು ತಮ್ಮ ಬ್ಯಾಂಕಿನ ಖಾತೆಗಳಿಂದ ಲಕ್ಷಗಟ್ಟಲೆ ಹಣ ವರ್ಗಾಯಿಸಲು ಒತ್ತಡಕ್ಕೆ ಒಳಗಾಗಿದ್ದರು.

ಚಂಡೀಗಢದಲ್ಲಿ 2017ರಲ್ಲಿ ಫೋಟೋ ಸಂಪಾದಕನ ಕೆಲಸಕ್ಕಾಗಿ ಬಂದಿದ್ದ ಹರಿನಾಥ್, ಕೊರೋನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡರು. ಇಂದಿಗೂ ನಿರುದ್ಯೋಗಿಯಾಗಿಯಾಗಿದ್ದಾರೆ. ಅವರ ಪತ್ನಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದು, ಮನೆ ಬಾಡಿಗೆ ಮತ್ತು ಮಕ್ಕಳಿಗೆ ಪಾಠ ಮಾಡುವ ಮೂಲಕ ಕುಟುಂಬವನ್ನು ನಡೆಸುತ್ತಿದ್ದಾರೆ.

ವಂಚನೆ ಹೇಗೆ ನಡೆಯಿತು?

ಅಕ್ಟೋಬರ್ 2 ರಂದು, ಹರಿನಾಥ್‌ನ್ನು ಟೆಲಿಕಾಂ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬಳು ಕರೆ ಮಾಡಿ, ಮುಂಬೈನಲ್ಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ತೆಗೆದು ದೂರು ದಾಖಲಾಗಿದೆ ಎಂದು ಹೇಳಿದರು. ನಂತರ, ನಕಲಿ ಪೊಲೀಸ್ ಅಧಿಕಾರಿಯೊಬ್ಬರಿಂದ ಕರೆ ಮಾಡಿ “ನೀವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ” ಎಂದು ಆರೋಪಿಸಿದರು.

ನಕಲಿ ಅಧಿಕಾರಿಗಳ ಬೆದರಿಕೆ

ನಕಲಿ ಅಧಿಕಾರಿಗಳು “ನರೇಶ್ ಗೋಯಲ್ ಎಂಬ ವ್ಯಕ್ತಿಗೆ ವಂಚನೆ ಮಾಡಲಾಗಿದೆ, ನೀವು ಸಂಶಯಾಸ್ಪದ ವ್ಯಕ್ತಿ” ಎಂದು ಹೇಳಿ, ಶೀಘ್ರ ಬಂಧನದ ಬೆದರಿಕೆಯನ್ನು ನೀಡಿದರು. ಈ ಆರೋಪದ ಭಯದಿಂದ ಹರಿನಾಥ್ ತಕ್ಷಣವೇ ತನಿಖೆಗೆ ಸಹಕರಿಸಲು ಒಪ್ಪಿದರು.

ನಕಲಿ ಸಿಬಿಐ ಅಧಿಕಾರಿಯ ತಂತ್ರ

ನಕಲಿ ಸಿಬಿಐ ಅಧಿಕಾರಿಯೊಬ್ಬರ ಮೂಲಕ ಹರಿನಾಥ್ ಅವರನ್ನು ಮುಂಬೈಗೆ ಬರಲು ಹೇಳಿ, ನಂತರ “ನೀವು ಮನೆಯಲ್ಲಿಯೇ ಇದ್ದು ತನಿಖೆಗೆ ಸಹಕರಿಸಿ” ಎಂದು ಹೇಳಿದರು.

ಭಯದಿಂದ ಹರಿನಾಥ್ ವಂಚಕರ ಬಲಿಗೆ ಬಿದ್ದು, 22 ದಿನಗಳ ಕಾಲ ವೀಡಿಯೋ ಕರೆಗಳಲ್ಲಿ ನಿರಂತರವಾಗಿ ಅವರಲ್ಲಿ ತನಿಖೆಗೆ ಸಹಕರಿಸಿದ್ದು, ಇದರಿಂದ ಅವರ ಹಣ ಸಂಪೂರ್ಣ ವಂಚಿಸಲ್ಪಟ್ಟಿತು.

“ನೀವು ನಿರಪರಾಧಿ ಎನಿಸಿದರೆ ನಿಮ್ಮನ್ನು ಬಿಟ್ಟು ಬಿಡಲಾಗುತ್ತದೆ” ಎಂದು ನಂಬಿಸಿದ ವಂಚಕರು ಮತ್ತೆ ಮತ್ತೆ ಬ್ಯಾಂಕ್‌ಗೆ ತೆರಳಿ, ಹಣ ವರ್ಗಾಯಿಸುವಂತೆ ಒತ್ತಾಯಿಸಿದರು. FD ಮುರಿದು, ಏಕಕಾಲದಲ್ಲಿ ಬಹಳಷ್ಟು ಹಣ ಕಳೆದುಕೊಂಡರೂ ಆರ್‌ಬಿಐ ಅಥವಾ ಸಿಬಿಐ ವಾಟ್ಸಾಪ್ ಮೂಲಕ ನನ್ನನ್ನು ಸಂಪರ್ಕಿಸುತ್ತವೆ ಎಂಬುದರ ಬಗ್ಗೆ ನನಗೆ ಅನುಮಾನವಿಲ್ಲದೆ, ಅವರ ಸೂಚನೆಗಳಿಗೆ ಹೆದರಿದ್ದೇ ನನ್ನ ತಪ್ಪು. ಭಯದಿಂದ ಅವರ ಮಾತುಗಳನ್ನು ನಂಬಿ, ಅವಸರದಲ್ಲಿ ಎಲ್ಲವನ್ನೂ ಮಾಡುತ್ತಲೇ ಇದ್ದೆ” ಎಂದು ಹೇಳಿದ್ದಾರೆ.

51 ಲಕ್ಷ ಎಲ್ಲಿಂದ ಬಂತು?

ಚಂಡೀಗಢದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹರಿನಾಥ್, ತಮ್ಮನ್ನು ವಂಚಿಸಿರುವ ದುಷ್ಕರ್ಮಿಗಳಿಗೆ ಎಲ್ಲ ಹಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ಪಾಣಿಪತ್‌ನಲ್ಲಿ ಹೊಂದಿದ್ದ ಎರಡು ಫ್ಲಾಟ್‌ಗಳನ್ನು ಮಾರಾಟ ಮಾಡಿ, ಎಲ್ಲ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಉದ್ಯೋಗ ಬಿಟ್ಟ ನಂತರ, 4-5 ಲಕ್ಷ ರೂ. ಉಳಿತಾಯ ಹೊಂದಿದ್ದು, ತಮ್ಮ ಕಾರನ್ನು 1.71 ಲಕ್ಷ ರೂ.ಗೆ ಮಾರಾಟ ಮಾಡಿದರು. ಇದಲ್ಲದೆ, ಅವರ ಬಳಿ ಇನ್ನೂ 12-13 ಲಕ್ಷ ರೂ. ಉಳಿದಿದ್ದು, ಮತ್ತೊಂದು ಫ್ಲಾಟ್ ಮಾರಾಟಕ್ಕೂ ಮುಂದಾಗಿದ್ದಾರೆ.

ಡಿಜಿಟಲ್ ಅರೆಸ್ಟ್ ಎಂದರೇನು?

ಇದು ಆನ್‌ಲೈನ್ ವಂಚನೆಯ ಹೊಸ ತಂತ್ರವಾಗಿದ್ದು, ಇಲ್ಲಿ ವಂಚಕರು ಪೊಲೀಸ್ ಅಥವಾ ಸರ್ಕಾರಿ ನೌಕರರಂತೆ ನಟಿಸಿ, ವೀಡಿಯೊ ಕರೆಗಳ ಮೂಲಕ ಜನರನ್ನು ಹೆದರಿಸುತ್ತಾರೆ. ಈ ವಂಚಕರು ವೀಡಿಯೋ ಕರೆಗೆ ಅನುಸರಿಸಿ ವ್ಯಕ್ತಿಯ ಚಲನವಲನಗಳ ಮೇಲೆ ನಿಗಾ ಇಟ್ಟು, ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಮಾತನಾಡುತ್ತಾರೆ ಎಂಬುದನ್ನು ಗಮನಿಸುತ್ತಾರೆ. ಈ ಮೂಲಕ ಅವರನ್ನು ಕಟ್ಟುನಿಟ್ಟಾಗಿ ಗೃಹಬಂಧನದಂತಹ ಸ್ಥಿತಿಯಲ್ಲಿ ಇಡುತ್ತಾರೆ. ಪೊಲೀಸ್ ಬಂಧನದ ಭಯ ತೋರಿಸಿ, ಜನರನ್ನು ಅವರ ಮಾತಿಗೆ ಒಪ್ಪಿಸುತ್ತಾರೆ, ನಂತರ ಹಂತ ಹಂತವಾಗಿ ತನಿಖೆ ಹೆಸರಿನಲ್ಲಿ ಹಣವನ್ನು ವರ್ಗಾಯಿಸಲು ಒತ್ತಾಯಿಸುತ್ತಾರೆ. “ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ,” ಎಂದು ಹರಿನಾಥ್ ಸಲಹೆ ನೀಡುತ್ತಾ, ಅಂತಹ ಸಂದರ್ಭ ಉಂಟಾದರೆ ತಕ್ಷಣ ಕುಟುಂಬದವರಲ್ಲಿ ಮಾಹಿತಿ ಹಂಚುವ ಕೆಲಸ ಮಾಡಬೇಕು ಎಂದಿದ್ದಾರೆ.

ಮೂಲ : ಬಿಬಿಸಿ ಹಿಂದಿ
ಅನುವಾದ : ಸನ್ಮಾರ್ಗ ಡೆಸ್ಕ್