ಸನ್ಮಾರ್ಗ ವಾರ್ತೆ
✍️ ಖದೀಜ ನುಸ್ರತ್
ಅಲ್ಲಾಹನು ಇಷ್ಟಪಡದ ಗುಣಗಳು ಯಾವುದೆಂದು ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ಸರಿಯಾಗಿ ಅರಿತಿರಬೇಕು ಮತ್ತು ಅದರಿಂದ ದೂರವಿರಲು ಸಾಧ್ಯವಾದಷ್ಟು ನಿಷ್ಕಳಂಕವಾಗಿ ಪ್ರಯತ್ನಿಸಬೇಕು. ಅವನು ಮನುಷ್ಯನ ಸಂಕಲ್ಪ, ಮಾತು, ವರ್ತನೆ, ಕರ್ಮ ಮತ್ತು ಹೃದಯವನ್ನು ನೋಡಿ ಅಂತ್ಯ ದಿನದಂದು ಎಲ್ಲಾ ಕರ್ಮಗಳಿಗೆ ಪ್ರತಿಫಲ ನೀಡುತ್ತಾನೆ.
ಮನುಷ್ಯನು ತನ್ನ ಕರ್ಮ, ಮಾತಿನಿಂದ ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದೆಂಬುದು ಸತ್ಯವಿಶ್ವಾಸದ ಬೇಡಿಕೆಯಾಗಿದೆ. ಅಂತಹ ಗುಣಗಳು ಯಾವುದೆಂದು ಪವಿತ್ರ ಕುರ್ ಆನ್ ಮತ್ತು ಹದೀಸ್ಗಳಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.
ದುರ್ವ್ಯಯ (ಇಸ್ರಾಫ್)
“ದುರ್ವ್ಯಯ ಮಾಡಬೇಡಿರಿ. ದುರ್ವ್ಯಯ ಮಾಡುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್- 6:141)
ದುಂದುವೆಚ್ಚ, ಅದ್ದೂರಿಯ ಮತ್ತು ಅನಿಸ್ಲಾಮಿಕ ಆಚರಣೆಗಳು ಸಮಾಜದಲ್ಲಿ ಎಲ್ಲಾ ಕೆಡುಕಿಗೆ ಕಾರಣವಾಗುತ್ತದೆ. ಅದು ಪರಲೋಕ ಜೀವನವನ್ನು ಕಡೆಗಣಿಸಿ ಲೌಖಿಕ ಜೀವನದ ಸುಖ ಸೌಕರ್ಯಕ್ಕಾಗಿ ಹೆಚ್ಚಿನ ಸಮಯವನ್ನು ಕಳೆಯುವಂತೆ ಪ್ರೊತ್ಸಾಹಿಸುತ್ತದೆ. ಅನ್ನಪಾನೀಯ, ವಸ್ತ್ರ, ಮನೆ ಹಾಗೂ ಮತ್ತಿತರ ಅಗತ್ಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಮಿತವಾಗಿ ಖರ್ಚು ಮಾಡುವವರಿಗೆ ಮಾತ್ರ ದಾನ ಧರ್ಮ, ಬಡವರ ಹಕ್ಕನ್ನು ನೀಡಿ ಶಾಂತಿ ಸಮಾಧಾನದೊಂದಿಗೆ ಜೀವಿಸಲು ಸಾಧ್ಯವಾಗುತ್ತದೆ.
ಅಹಂಭಾವ (ಇಸ್ತಿಕ್ ಬಾರ್)
“ಅಹಂಭಾವದಲ್ಲಿ ಸಿಲುಕಿರುವವರನ್ನು ಖಂಡಿತವಾಗಿಯೂ ಅಲ್ಲಾಹನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್- 16:23)
ಜ್ಞಾನ, ಮನೆ, ಕಾರು, ವ್ಯಾಪಾರ, ವಿದ್ಯಾಭ್ಯಾಸ, ಕುಟುಂಬ, ಸಂಪತ್ತು, ಸೌಕರ್ಯ, ಪ್ರತಿಭೆ, ಆರಾಧನೆಗಳ ಬಗ್ಗೆ ಹೆಮ್ಮೆ ಪಡುವುದು, ಒರಟು ಸ್ವಭಾವ, ಇತರರಿಗಿಂತ ತಾನು ಶ್ರೇಷ್ಠನೆಂದು ಭಾವಿಸಿಕೊಳ್ಳುವುದು, ತನ್ನ ಸುತ್ತಮುತ್ತಲಿನವರು ತನಗಿಂತ ನೀಚರೆಂದು ಭಾವಿಸುವುದು ಅಹಂಕಾರವಾಗಿದೆ. ಅಹಂಭಾವ ಎಂಬ ಒಂದೇ ವ್ಯಾಧಿಯ ಕಾರಣದಿಂದ ಅದೆಷ್ಟೋ ಜನಾಂಗಗಳು ಸತ್ಯಸ್ವೀಕಾರದ ಭಾಗ್ಯವನ್ನು ಕಳೆದುಕೊಂಡಿದೆ ಮತ್ತು ಸಂಪೂರ್ಣ ನಾಶವಾದ ಇತಿಹಾಸವಿದೆ.
ದುರಭಿಮಾನ ಹಾಗೂ ಅಹಂಕಾರ(ಮುಖ್ತಾಲ್ ಫಖೂರ್)
“ದುರಭಿಮಾನ ಹಾಗೂ ಅಹಂಕಾರ ಪಡುವವನನ್ನು ಅಲ್ಲಾಹನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್- 31: 18)
ಸಂಪತ್ತು, ಅಧಿಕಾರ, ಸ್ಥಾನಮಾನ, ಸೌಂದರ್ಯ, ಪಾಂಡಿತ್ಯ ಉತ್ತಮ ಕುಟುಂಬ ಎಲ್ಲವೂ ಅಲ್ಲಾಹನು ನೀಡಿದ ಅನುಗ್ರಹಗಳಾಗಿದೆ. ಅವುಗಳಿಗೆ ವಿನಮ್ರರಾಗುತ್ತಾ ಕೃತಜ್ಞತೆ ಸಲ್ಲಿಸಬೇಕು. ಅವುಗಳು ಹೆಮ್ಮೆ ಮತ್ತು ಜಂಬಕೊಚ್ಚಿಕೊಳ್ಳುವ ಸಾಧನವಲ್ಲ. ಇತರರನ್ನು ತುಚ್ಛವಾಗಿ ಕಾಣುವುದು, ಇತರರ ಒಳಿತುಗಳನ್ನು ಕ್ಷುಲ್ಲಕವಾಗಿ ಪರಿಗಣಿಸುವುದು ದುರಭಿಮಾನವಾಗಿದೆ. ಮಾತುಕತೆ, ವರ್ತನೆ, ವ್ಯವಹಾರಗಳಲ್ಲೆಲ್ಲ ದುರಭಿಮಾನವು ಪ್ರಕಟವಾಗುತ್ತದೆ.
ಅತಿರೇಕ (ಉದ್ವಾನ್)
“ಅಲ್ಲಾಹನಿಗೆ ಅತಿರೇಕವೆಸಗುವವರು ಎಷ್ಟು ಮಾತ್ರಕ್ಕೂ ಮೆಚ್ಚುಗೆಯವರಲ್ಲ.” (ಪವಿತ್ರ ಕುರ್ಆನ್- 5: 87)
ಹರಾಮ್ನ್ನು ಹಲಾಲ್ ಗೊಳಿಸುವುದು, ಅಲ್ಲಾಹನು ಶುದ್ಧವೆಂದು ಹೇಳಿರುವ ವಸ್ತುಗಳನ್ನು ನಿಷಿದ್ಧವೆಂದು ವರ್ಜಿಸುವುದು ಎಲ್ಲವೂ ಅತಿರೇಕ ಕಾರ್ಯಗಳಾಗಿದೆ. ಶುದ್ಧ ವಸ್ತುಗಳ ಬಳಕೆಯಲ್ಲಿ ದುಂದು ಮತ್ತು ದುರ್ವ್ಯಯವೂ ಅತಿರೇಕವೇ ಆಗಿದೆ. ಅತಿರೇಕ ಎಂದರೆ ಅಲ್ಲಾಹನ ಆಜ್ಞೆ ಅಥವಾ ಕಾನೂನಿಗೆ ವಿರುದ್ಧವಾಗಿ ನಡೆಯುವುದಾಗಿದೆ. ನ್ಯಾಯ ಮತ್ತು ಮಾನವ ಸಭ್ಯತೆಯ ಮಿತಿಯನ್ನು ದಾಟುವುದು. ಅಲ್ಲಾಹನು ಭೂಮಿಯ ಮೇಲೆ ನಿರ್ಮಿಸಿದ ವ್ಯವಸ್ಥೆಯು ಪ್ರತಿಯೊಂದಕ್ಕೂ ಪರಸ್ಪರ ಸಂಬಂಧವನ್ನು ಹೊಂದಿದೆ. ಕೆಲವು ಜನರ ಅತಿರೇಕದಿಂದ ಇಂದು ಭೂಮಿಯ ಮೇಲೆ ಅನೇಕ ಜನರು ತಿನ್ನಲು ಸರಿಯಾದ ಆಹಾರವಿಲ್ಲದೇ, ವಾಸಿಸಲು ಸರಿಯಾದ ಮನೆಯಿಲ್ಲದೇ, ಧರಿಸಲು ಸರಿಯಾದ ವಸ್ತ್ರಗಳಿಲ್ಲದೇ ಕೊಳಚೆ ಪ್ರದೇಶಗಳಲ್ಲಿ ನರಳುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಜನರ ಹಕ್ಕುಗಳ ದೌರ್ಜನ್ಯಗಳು ಮತ್ತು ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳ ಅಸಮಪರ್ಕವಾದ ನಿರ್ವಹಣೆಯಿಂದಾಗಿ ಜನರ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ. ಮಾನವನು ತನ್ನ ಐಶಾರಾಮ ಜೀವನದಿಂದಾಗಿ ಪರಿಸರ ಮಾಲಿನ್ಯವಾಗಿದೆ ಮತ್ತು ಪದೇ ಪದೇ ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಸಾಮಾಜಿಕ ಅಸಮಾನತೆ, ಆರ್ಥಿಕ ಸಂಕಷ್ಟಗಳು ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಿದೆ.
ಅಕ್ರಮ (ಝುಲ್ಮ್)
“ಅಲ್ಲಾಹನು ಅಕ್ರಮಿಗಳನ್ನು ಎಂದೆಂದಿಗೂ ಪ್ರೀತಿಸುವುದಿಲ್ಲ.” (ಪವಿತ್ರ ಕುರ್ಆನ್- 3: 57)
ಅಕ್ರಮವು ಸತ್ಯವಿಶ್ವಾಸವನ್ನು ನಾಶಪಡಿಸಿ ಹೃದಯವನ್ನು ಕತ್ತಲೆಗೊಳಿಸುತ್ತದೆ. ಸ್ವಾರ್ಥ, ಸಂಕುಚಿತವಾದ ಮತ್ತು ಅಹಂಭಾವವು ಮನುಷ್ಯನನ್ನು ಅಕ್ರಮ- ಅನ್ಯಾಯಗಳನ್ನೆಸಗಲು ಇತರರ ಹಕ್ಕುಗಳನ್ನು ಕಸಿದುಕೊಳ್ಳಲು, ಕಳ್ಳತನ, ಲಂಚ, ದ್ರೋಹವೆಸಗಲು ಪ್ರೇರೇಪಿಸುತ್ತದೆ. ಅಕ್ರಮವು ಪುನರುತ್ಥಾನ ದಿನದಂದು ಅಂಧಕಾರಗಳ ರೂಪದಲ್ಲಿ ಪ್ರತ್ಯಕ್ಷವಾಗುವುದು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವರು.
ಕ್ಷೋಭೆ (ಫಸಾದ್)
“ಅಲ್ಲಾಹನು ಕ್ಷೋಭೆಯುಂಟು ಮಾಡುವವರನ್ನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್- 5: 64)
ಫಸಾದ್ ಎಂಬುದು ವಿಶಾಲಾರ್ಥವಿರುವ ಪದವಾಗಿದೆ. ಭ್ರಷ್ಟಾಚಾರ, ಭೂಮಿಯಲ್ಲಿ ಕಿಡಿಗೇಡಿತನವನ್ನು ಹರಡುವುದು, ದೇಶದ್ರೋಹ, ಹಿಂಸೆ, ಭಯೋತ್ಪಾದನೆ, ದುಷ್ಟತನ, ಭಯಾನಕ ರಕ್ತಸಿಕ್ತ ಅಪರಾಧಗಳು, ಧರ್ಮ ಮತ್ತು ಆರಾಧಾನಾಲಯದ ಹೆಸರಿನಲ್ಲಿ ಕೋಮು ಗಲಭೆಗಳನ್ನು ಉಂಟು ಮಾಡಿ ಸಾರ್ವಜನಿಕ ಶಾಂತಿ ಭಂಗ ಮಾಡುವುದು. ಫಸಾದ್ ಎಂದರೆ ವಿಷಯಗಳನ್ನು ಕೆಟ್ಟದಾಗಿ ಮಾಡುವುದು ಮತ್ತು ಇಸ್ಲಾಹ್ ಎಂದರೆ ಸರಿಪಡಿಸುವುದು, ಸುಧಾರಿಸುವುದು ಅಥವಾ ಕ್ರಮಬದ್ಧಗೊಳಿಸುವುದು ಎಂದರ್ಥ. ಭೂಮಿಯನ್ನು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸರಿಯಾದ ಕ್ರಮದಲ್ಲಿ ಸೃಷ್ಟಿಸಲಾಗಿದೆ. ಆಧ್ಯಾತ್ಮಿಕವಾಗಿ ಅವನ ಸಂದೇಶವಾಹಕರು ಮತ್ತು ಗ್ರಂಥಗಳನ್ನು ಕಳುಹಿಸುವ ಮೂಲಕ ನೈತಿಕ ಸುಧಾರಣೆಯ ಮಾರ್ಗದರ್ಶನವನ್ನು ನೀಡಲಾಗಿದೆ. ಪಾಪ, ಅವಿಧೇಯತೆ, ಕಳ್ಳತನ, ದರೋಡೆ, ಕೊಲೆ, ಅಸಭ್ಯತೆಯ ಮೂಲಕ ಕ್ಷೋಭೆಯನ್ನುಂಟು ಮಾಡಬಾರದು.
ವಂಚನೆ (ಖಿಯಾನಃ)
“ಖಂಡಿತವಾಗಿಯೂ ಅಲ್ಲಾಹ್ ಯಾವುದೇ ವಿಶ್ವಾಸಘಾತುಕ ಕೃತಘ್ನನನ್ನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್- 22: 38)
ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹ ಸತ್ಯವಿಶ್ವಾಸದ ಮೂಲಭೂತ ಬೇಡಿಕೆಯಾಗಿರುತ್ತದೆ. ಸತ್ಯವಿಶ್ವಾಸಿಗಳು ನಿಷ್ಠಾವಂತರೂ, ವಿಶ್ವಾಸರ್ಹರೂ ಆಗಿರಬೇಕು. ವಂಚನೆಯು ಕಪಟ ವಿಶ್ವಾಸಿಯ ಗುಣಲಕ್ಷಣವಾಗಿದೆ. ವಾಗ್ದಾನವನ್ನು ಪೂರೈಸದಿರುವುದು, ಕರಾರು ಮುರಿಯುವುದು, ದ್ರೋಹ ಮಾಡುವುದು, ಸುಳ್ಳು ಹೇಳುವುದು, ಗುಪ್ತ ವಿಷಯಗಳನ್ನು ಹೊರಗಿನವರೊಂದಿಗೆ ಹೇಳುವುದು ಎಲ್ಲವೂ ವಂಚನೆಯಾಗಿರುತ್ತದೆ. ವೈಯಕ್ತಿಕ ಸಂಪತ್ತು, ನೈಸರ್ಗಿಕ ಸಂಪತ್ತುಗಳು, ಸಂಘ ಸಂಸ್ಥೆಗಳ ಖಜಾನೆ, ಹೊಣೆಗಾರಿಕೆ, ಜವಾಬ್ದಾರಿಗಳು, ಮನುಷ್ಯನ ಅಂಗಾಂಗಗಳು, ಮನುಷ್ಯನ ಮನ ಮಸ್ತಿಷ್ಕಗಳ ಶಕ್ತಿ ಸಾಮರ್ಥ್ಯಗಳು ಅವನ ಸ್ವಾಧೀನವಿರುವ ಅಮಾನತ್ತುಗಳಾಗಿವೆ. ಅವುಗಳನ್ನು ದುರುಪಯೋಗಪಡಿಸುವ ಮೂಲಕ ವಿಶ್ವಾಸಘಾತಕವೆಸಗುತ್ತಾನೆ. ಈ ವಂಚನಾತ್ಮಕ ಮನೋವೃತ್ತಿಯು ಅಕ್ರಮ ಮತ್ತು ಪಾಪಗಳಲ್ಲಿ ಪ್ರಕಟವಾಗುತ್ತದೆ. ನಿಮಗೆ ವಂಚನೆ ಮಾಡಿದವರಿಗೂ ನೀವು ವಂಚನೆ ಮಾಡಬೇಡಿರಿ ಎಂದು ಇಸ್ಲಾಂ ಧರ್ಮವು ಕಲಿಸುತ್ತದೆ.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ನೀವು ನಿಮ್ಮ ಸಹೋದರನಿಗೆ ಒಂದು ಮಾತು ಹೇಳಿದ್ದು, ಅವನು ನಿಮ್ಮನ್ನು ಸತ್ಯವಂತನೆಂದು ತಿಳಿದಿರುವಾಗ, ನೀವು ಹೇಳಿದ ಮಾತು ಸುಳ್ಳಾಗಿದ್ದರೆ ಅದು ದೊಡ್ಡ ವಂಚನೆಯಾಗಿದೆ.” (ವರದಿ: ಸುಫ್ಯಾನ್ ಬಿನ್ ಹುಸೈದ್ ಹದ್ರಮೀ(ರ), ಅಬೂ ದಾವೂದ್)
ಕೆಡುಕುಗಳನ್ನು ಬಹಿರಂಗಗೊಳಿಸುವುದು
“ಮನುಷ್ಯನು ಅವಾಚ್ಯ ಪದಗಳನ್ನುಚರಿಸುವುದನ್ನು ಅಲ್ಲಾಹನು ಇಷ್ಟಪಡುವುದಿಲ್ಲ.” (ಪವಿತ್ರ ಕುರ್ಆನ್- 4: 148)
ಮನುಷ್ಯನ ಮಾನ ಮರ್ಯಾದೆಯು ಗೌರವಪೂರ್ವಕವಾಗಿದೆ. ಇನ್ನೊಬ್ಬರಿಗೆ ಬಯ್ಯುವುದು, ಸ್ವತಃ ತಮ್ಮ ಅಥವಾ ಇನ್ನೊಬ್ಬರ ಕುಂದುಕೊರತೆ, ಕೆಟ್ಟಕಾರ್ಯಗಳನ್ನು ಬಹಿರಂಗಪಡಿಸುವುದು ಅಲ್ಲಾಹನಿಗೆ ಇಷ್ಟವಲ್ಲ. ತಪ್ಪುಗಳನ್ನು ಬಹಿರಂಗ ಪಡಿಸುವುದಕ್ಕಿಂತ ಕ್ಷಮಿಸಿ ಬಿಡುವುದು ಉತ್ತಮ. ಕ್ಷಮಾ ನೀತಿಯನ್ನು ಅನುಸರಿಸುವ ದಾಸರಿಗೆ ಅಲ್ಲಾಹನು ಗೌರವವನ್ನು ಹೆಚ್ಚಿಸುತ್ತಾನೆ.












