ಇಸ್ಲಾಮ್‌ನಲ್ಲಿ ಮಹಿಳೆ: ಆರೋಪ ಮತ್ತು ವಾಸ್ತವ

0
196

✍️ ಡಾ. ಅಬ್ದುಲ್ ಹಫೀಝ್‌ ನದ್ವಿ

ಇಸ್ಲಾಮ್ ಸ್ತ್ರೀ ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬರಿಗೂ ಅವರ ಅರ್ಹತೆಯನುಸಾರ ಹಕ್ಕುಗಳನ್ನು ನೀಡುವುದು ನ್ಯಾಯವಾಗಿದೆ. ಗಂಜಿಊಟ ಮಾಡುವವನಿಗೆ ಸಮಾನತೆಯ ಹೆಸರಲ್ಲಿ ಬಿರಿಯಾನಿ ತಿನ್ನಿಸಬಹುದು. ಸ್ವಲ್ಪ ಸಮಯದ ಬಳಿಕ ಹೊಟ್ಟೆ ತುಂಬಿದವನನ್ನು ಒತ್ತಾಯದಿಂದ ಉಣ್ಣಿಸುವುದು ಸಮತ್ವವಾಗಬಹುದು ಆದರೆ ಅದು ನ್ಯಾಯವಾಗದು.

ಹಲವು ವಿಚಾರಗಳಲ್ಲಿ ನ್ಯಾಯವನ್ನು ಇಸ್ಲಾಮ್ ಅದರ ತಳಹದಿಯಲ್ಲಿ ಕಲಿಸುತ್ತದೆ. ವ್ಯಕ್ತಿಯ ಗೌರವ ಮತ್ತು ನ್ಯಾಯವನ್ನು ಇಸ್ಲಾಮ್ ಅಂಗೀಕರಿಸುತ್ತದೆ. ಆದರೆ ಪ್ರತಿಯೋರ್ವರ ಗುಣ ಸ್ವಭಾವಗಳಿಗನುಗುಣವಾಗಿ ನಿಯಮಗಳಲ್ಲಿ ಕೆಲವು ವ್ಯತ್ಯಾಸವಿದೆ. ಪುರುಷರಿಗೂ ಮಹಿಳೆಯರಿಗೂ ಅವರ ಸಮಾನತೆಯನ್ನು ಪ್ರತಿಪಾದಿಸುವ ಕೆಲವು ಕುರ್‌ಆನ್ ವಚನ ಮತ್ತು ಹದೀಸ್‌ಗಳ ವಿವರಣೆಗಳು ಹೀಗಿದೆ:

  1. ಮಾನವನ ದರ್ಜೆಗಿರುವ ಸಮಾನತೆ: 

ಅಲ್ಲಾಹನು ಹೇಳುತ್ತಾನೆ – “ಜನರೇ ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು, ಅದೇ ಜೀವದಿಂದ ಜೋಡಿಯನ್ನುಂಟು ಮಾಡಿದನು”(4:1) ಈ ಕುರ್‌ಆನ್‌ನ ಈ ವಚನವು ಅಲ್ಲಾಹನು ಪುರುಷ ಮತ್ತು ಸ್ತ್ರೀಯನ್ನು ಒಂದೇ ಜೀವದಿಂದ ಸೃಷ್ಟಿಸಿದನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರಿಂದ ಅವರು ಸಮಾನವಾದ ದೈವಿಕವಾದ ಮಾನ್ಯತೆ ಮತ್ತು ದರ್ಜೆಯುಳ್ಳ ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

  1. ಪ್ರತಿಫಲ ಮತ್ತು ಪುಣ್ಯದಲ್ಲಿಯೂ ಸಮಾನರು:

ಅಲ್ಲಾಹನು ಹೇಳುತ್ತಾನೆ – “ಪುರುಷನಾಗಿರಲಿ ಸ್ತ್ರೀಯಾಗಲಿ ಯಾರು ಸತ್ಕರ್ಮವೆಸಗುವರೋ ಅವರು ಸತ್ಯವಿಶ್ವಾಸಿಯಾಗಿದ್ದರೆ ಅವರಿಗೆ ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು. ಮತ್ತು ಇಂತಹವರಿಗೆ (ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರವಾಗಿ ಪ್ರತಿಫಲ ನೀಡುವೆವು.” (16: 97) ಈ ವಚನವು ಅಲ್ಲಾಹನಲ್ಲಿ ವಿಶ್ವಾಸ ಅರ್ಪಿಸಿ ಸತ್ಕರ್ಮವನ್ನೆಸಗುವ ಸ್ತ್ರೀ-ಪುರುಷರಿಗೆ ಸಮಾನ ಪ್ರತಿಫಲ ಮತ್ತು ಅನುಗ್ರಹಗಳು ಲಭ್ಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

  1. ಧಾರ್ಮಿಕ ಮತ್ತು ನೈತಿಕ ಜವಾಬ್ದಾರಿಯಲ್ಲಿ ಸಮಾನತೆ:

ಅಲ್ಲಾಹನು ಹೇಳುತ್ತಾನೆ – “ನಿಶ್ಚಯವಾಗಿಯೂ ಮುಸ್ಲಿಮರೂ ಸತ್ಯವಿಶ್ವಾಸಿಗಳೂ, ಆಜ್ಞಾಪಾಲಕರೂ ಸತ್ಯಸಂಧರೂ, ಸಹನಶೀಲರೂ, ವಿನಮ್ರರೂ, ದಾನಶೀಲರೂ ಉಪವಾಸ ವೃತವನ್ನಾಚರಿಸುವವರೂ ತಮ್ಮ ಗುಪ್ತಾಂಗಗಳ ರಕ್ಷಣೆ ಮಾಡಿಕೊಳ್ಳುವವರೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರೂ ಆದ ಎಲ್ಲಾ ಪುರುಷರು ಮತ್ತು ಸ್ತ್ರೀಯರಿಗೆ ಅಲ್ಲಾಹನು ಕ್ಷಮೆ ಮತ್ತು ಅತಿ ದೊಡ್ಡ ಸತ್ಫಲವನ್ನು ಸಿದ್ಧಗೊಳಿಸಿಬಿಟ್ಟಿದ್ದಾನೆ” (33: 35). ಈ ವಚನದಲ್ಲಿ ಪುರುಷರಿಗೂ ಸ್ತ್ರೀಯರಿಗೂ ಅಲ್ಲಾಹನ ಮುಂದೆ ಸಮಾನವಾದ ಧಾರ್ಮಿಕ ಮತ್ತು ನೈತಿಕವಾದ ಜವಾಬ್ದಾರಿಗಳಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

  1. ಹಕ್ಕು ಮತ್ತು ಕರ್ತವ್ಯಗಳಲ್ಲಿ ಸಮಾನತೆ: 

ಅಲ್ಲಾಹನು ಹೇಳುತ್ತಾನೆ – “ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವಂತೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಚಿತ ಹಕ್ಕು ಇದೆ” (2: 228). ಈ ವಚನವು ಪುರುಷರೂ ಸ್ತ್ರೀಯರೂ ಕರ್ತವ್ಯ ಮತ್ತು ಹಕ್ಕುಗಳಲ್ಲಿ ಸಮಾನರು. ಪರಸ್ಪರ ಗೌರವ ಮತ್ತು ಅಂಗೀಕಾರದ ಮೂಲಕ ಈ ಹಕ್ಕು ಬಾಧ್ಯತೆ ಪೂರ್ತಿಯಾಗುತ್ತದೆ ಎಂದು ಕಲಿಸುತ್ತದೆ.

  1. ಆರಾಧನೆಯಲ್ಲಿ ಸಮಾನತೆ:

ಪ್ರವಾದಿ(ಸ)ರವರು ಹೇಳಿದರು – “ಮಹಿಳೆಯರು ಪುರುಷರ ಸಹೋದರರಾಗಿದ್ದಾರೆ.” (ತಿರ್ಮಿದಿ) ಈ ಪ್ರವಾದಿವಚನವು ಸ್ತ್ರೀ-ಪುರುಷರು ಸಮಾಜದಲ್ಲಿ ಆರಾಧನೆಯಲ್ಲಿ ಸಮಾನ ಸ್ಥಾನ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಸೂಚಿಸಿದ ಎಲ್ಲಾ ವಿಷಯಗಳಲ್ಲಿಯೂ ಇಸ್ಲಾಮ್ ಮಹಿಳೆಯರನ್ನು ಸಮಾನ ದರ್ಜೆಯಲ್ಲಿಯೇ ಕಾಣುತ್ತದೆ ಎಂಬುದು ಸ್ಪಷ್ಟ. ಅವರಿಗೆ ಪುರುಷರಂತೆ ಪ್ರಾಧಾನ್ಯತೆ ನೀಡುತ್ತದೆ. 

ಮಾನವ ವ್ಯವಸ್ಥೆಯಲ್ಲಿ ದೈಹಿಕವಾದ ಮತ್ತು ನೈಸರ್ಗಿಕವಾದ ವ್ಯತ್ಯಾಸಗಳಿಗೆ ಅನುಗುಣವಾಗಿ ಕೆಲವು ಕಾನೂನು ವ್ಯತ್ಯಾಸಗಳನ್ನು ಮಾತ್ರ ಆಧಾರವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಸಮಾನತೆ ಎಂಬ ವಿಷಯವು ಬಹಳಷ್ಟು ವಿಶಾಲವಾದುದಾಗಿದೆ. ಇದು ಹಲವು ಬಾರಿ ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ. ಇಸ್ಲಾಮ್ ಮಹಿಳೆಯನ್ನು ಪುರುಷರಂತೆ ಕಾಣುವುದಿಲ್ಲ. ಪುರುಷರಿಗೆ ಅನ್ವಯವಾಗುವ ಹಲವು ವಿಚಾರಗಳು ಸ್ತ್ರೀಗೆ ಅನ್ವಯವಾಗದು. ಹಾಗೆಯೇ ಸ್ತ್ರೀಯರಿಗೆ ಅನ್ವಯವಾಗುವ ವಿಚಾರ ಪುರುಷರಿಗೆ ಅನ್ವಯವಾಗುತ್ತದೆ. ಅಂದರೆ ಸಮತ್ವ ಎಂದರೆ ಸಮಾಂತರವಲ್ಲ ಎಂಬುದನ್ನು ಅರ್ಥೈಸಬೇಕು. ಇಸ್ಲಾಮ್ ಪುರುಷರನ್ನೂ ಮಹಿಳೆಯರನ್ನೂ ಸಮಾನವಾಗಿ ಕಾಣುತ್ತದೆ. ಈರ್ವರೂ ಸೃಷ್ಟಿಕರ್ತನ ಮುಂದೆ ಧಾರ್ಮಿಕತೆಯಲ್ಲಿ ಸಮಾನರು. ಆದರೆ ಅವರ ಜೀವನದ ರೀತಿ ಮತ್ತು ಜವಾಬ್ದಾರಿಗಳು ವ್ಯತ್ಯಸ್ತವಾಗಿರುತ್ತದೆ. ಇದು ಅವರ ದೈಹಿಕವಾದ ಮಾನಸಿಕವಾದ ವ್ಯತ್ಯಾಸಗಳನ್ನು ಆಧಾರವಾಗಿಸಿಕೊಂಡಿದೆ ಎಂದರ್ಥ.

ಮಹಿಳೆಯರ ಹಕ್ಕುಗಳು: ಇಸ್ಲಾಮ್ ಮಹಿಳೆಯರಿಗೆ ಬೇರೆ ಧರ್ಮಗಳು ಹಾಗೂ ಬೇರೆ ಸಿದ್ಧಾಂತಗಳು ನೀಡದಂತಹ ಹಲವಾರು ಹಕ್ಕುಗಳನ್ನು ನೀಡಿದೆ. ಶಿಕ್ಷಣ, ವಾರೀಸು ಸೊತ್ತು, ಉದ್ಯೋಗ, ವಿವಾಹ ಮುಂತಾದವುಗಳು ಇದರಲ್ಲಿ ಸೇರಿದೆ. ವಾರೀಸು ಸೊತ್ತಿನಲ್ಲಿ ಮಹಿಳೆಯರನ್ನು ಪರಿಗಣಿಸದ ಧರ್ಮಗಳು ಇಂದಿಗೂ ಇವೆ.

ಮಹಿಳೆಯರ ಕರ್ತವ್ಯಗಳು: ಮಹಿಳೆಯರಿಗೂ ಪುರುಷರಿಗೂ ಕುಟುಂಬದಲ್ಲಿ ಸಮಾನ ಜವಾಬ್ದಾರಿಗಳಿವೆ. ಆದರೆ ಅವರ ಜವಾಬ್ದಾರಿಗಳು ಅವರ ಗುಣ ಸ್ವಭಾವ, ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ. ಪುರುಷನು ಶ್ರಮಪಟ್ಟು ದುಡಿದು ಕುಟುಂಬವನ್ನು ಸಲಹಬೇಕು; ಹಾಗಂತ ಮಹಿಳೆಯರಿಗೆ ಶ್ರಮಪಟ್ಟು ದುಡಿದು ಕುಟುಂಬವನ್ನು ಸಾಕಿ ಸಲಹಬೇಕೆಂದು ಆದೇಶಿಸಿಲ್ಲ.

ಮಹಿಳೆಯರ ಸಂರಕ್ಷಣೆ: ಇಸ್ಲಾಮ್ ಮಹಿಳೆಯರ ಭದ್ರತೆಗೆ ವಿಶೇಷ ಕಾಳಜಿ ವಹಿಸುತ್ತದೆ. ಯಾಕೆಂದರೆ ಅವರು ಸಮಾಜದ ಅವಿಭಾಜ್ಯ ಘಟಕವಾಗಿದ್ದಾರೆ. ಕುಟುಂಬದ ರಾಣಿಯಾಗಿದ್ದಾರೆ. ರಾಜರುಗಳು ತಮ್ಮ ರಾಜ್ಯಕ್ಕಾಗಿ ಘೋರ ಯುದ್ಧನಿರತರಾದರೂ ರಾಣಿಯರು ರಂಗಕ್ಕಿಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಮನೆಯಲ್ಲಿರುತ್ತಾರೆ.

ಕೆಲವು ತಪ್ಪು ಕಲ್ಪನೆಗಳು:

  1. ಇಸ್ಲಾಮಿನಲ್ಲಿ ಮಹಿಳೆಯರು ಪುರುಷರು ಸಮಾನರಲ್ಲ ಹಾಗೂ ಮಹಿಳೆಯರು ಕೀಳ್ಮಟ್ಟದವರು. ಇದು ದೊಡ್ಡ ತಪ್ಪು ಕಲ್ಪನೆಯಾಗಿದೆ. ಇಸ್ಲಾಮ್ ಎಂದಿಗೂ ಮಹಿಳೆಯರನ್ನು ಕೀಳಾಗಿ ಕಾಣುವುದಿಲ್ಲ. ಗಂಡು-ಹೆಣ್ಣು ಎಂಬ ವ್ಯತ್ಯಾಸ ಮಾತ್ರ ಇರುವುದು.
  1. ಮಹಿಳೆಯರು ಮನೆಯಲ್ಲಿ ಮಾತ್ರ ಇರಬೇಕು. ಇದು ಕೂಡಾ ಒಂದು ತಪ್ಪು ಕಲ್ಪನೆಯಾಗಿದೆ. ಮಹಿಳೆಯರಿಗೆ ಉದ್ಯೋಗ ನಿರ್ವಹಿಸಲು, ಶಿಕ್ಷಣ ಪಡೆಯಲು ಅವಕಾಶವಿದೆ. ಪ್ರವಾದಿವರ್ಯರ(ಸ) ಕಾಲದಲ್ಲಿ ಮಹಿಳೆಯರು ಉದ್ಯೋಗ ನಿರ್ವಹಿಸುತ್ತಾ, ಮಸೀದಿಗೆ ಹೋಗುತ್ತಿದ್ದರು. ಯುದ್ಧದ ಸಂದರ್ಭದಲ್ಲಿ ಅವರಿಂದ ಆಗುವ ಎಲ್ಲ ರೀತಿಯ ನೆರವು ಪಡೆಯಲಾಗಿದೆ.
  1. ಮಹಿಳೆಯರು ಸ್ವಂತ ತೀರ್ಮಾನ ಕೈಗೊಳ್ಳುವಂತಿಲ್ಲ. ಇದು ಇಸ್ಲಾಮಿನ ಮೂಲಭೂತ ತತ್ವಗಳಿಗೆ ವಿರುದ್ಧವಾದುದು. ಮಹಿಳೆಯರಿಗೆ ಸ್ವತಃ ನಿರ್ಧಾರ ತಾಳಲು ಇಸ್ಲಾಮಿನಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಒಪ್ಪಿಗೆಯಿಲ್ಲದ ವಿವಾಹವನ್ನು ರದ್ದುಪಡಿಸಿದ ಉದಾಹರಣೆಗಳನ್ನು ಇಸ್ಲಾಮಿನ ಇತಿಹಾಸದಲ್ಲಿ ಕಾಣಬಹುದು. ಖನ್ಸಾ ಬಿಂತಿ ಖದ್ದಾಮ್ ಎಂಬ ಅನ್ಸಾರೀ ಯುವತಿಯನ್ನು ತಂದೆ ವಿವಾಹ ಮಾಡಿಕೊಡಲು ನಿರ್ಧರಿಸಿದಾಗ ಯುವತಿಗೆ ಆ ಮದುವೆ ಇಷ್ಟವಿರಲಿಲ್ಲ. ಆ ನಿರ್ಧಾರವನ್ನು ಬದಲಿಸಿದ ಉದಾಹರಣೆ ಹದೀಸ್ ಗ್ರಂಥದಲ್ಲಿದೆ. (ಬುಖಾರಿ: 5138)

ಉಪಸಂಹಾರ: ಇಸ್ಲಾಮ್ ಸ್ತ್ರೀಯರನ್ನು ಪುರುಷನಿಗೆ ಸಮನಾಗಿ ಕಾಣುತ್ತದೆ. ಆದರೆ ಅವರ ಜೀವನದ ರೀತಿ ಮತ್ತು ಜವಾಬ್ದಾರಿಗಳಲ್ಲಿ ವ್ಯತ್ಯಾಸ ಇರುವುದನ್ನು ಗುರುತಿಸುತ್ತದೆ. ಆ ಕಾರಣದಿಂದ ವಾರೀಸು ಸೊತ್ತು, ವಿವಾಹ ವಿಚ್ಛೇದನ ಮುಂತಾದ ವಿಚಾರಗಳಲ್ಲಿ ಅವರ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳನ್ನು ಆಧಾರವಾಗಿರಿಸಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಅದರಲ್ಲಿಯೂ ಅವರಿಗೆ ಸಮಾನತೆ ಎಂಬ ವಾದವು ಕುರ್‌ಆನ್ ಸಾರಕ್ಕೆ ಹಾಗೂ ಮಹಿಳೆಯರ ದೇಹದ ನೈಸರ್ಗಿಕ ಬದಲಾವಣೆಗೆ ಅನುಗುಣವಾಗಿ ಅಥವಾ ಬೌದ್ಧಿಕವಾಗಿ ಅಂಗೀಕರಿಸಲಾಗದ ವಿಚಾರವಾಗಿದೆ. ಲಿಬರಲ್ – ಫೆಮಿನಿಸ್ಟ್ ಸಿದ್ಧಾಂತಗಳ ಪ್ರತಿಪಾದಕರು ಈ ವಿಚಾರದಲ್ಲಿ ವಾದಕ್ಕೆ ಬಂದರೆ ಅವರೊಂದಿಗೆ ಸಂವಾದ ನಡೆಸಲು ನಮ್ಮ ಸಹೋದರರ ಸಹೋದರಿಯರು ಪ್ರಾಪ್ತರಾಗಬೇಕು.