ಇಸ್ಲಾಮೀ ಕರ್ಮಶಾಸ್ತ್ರದ ಮಹಿಳಾ ವಿದ್ವಾಂಸರು

0
5

✍️ ಅಬ್ದುಸ್ಸಲಾಮ್‌ ಪಿ.

ಉಮ್ಮುಲ್ ಮೂಮಿನೀನ್ ಉಮ್ಮು ಸಲಮ(ರ)

ಹ. ಉಮ್ಮು ಸಲಮರ ನಿಜನಾಮ “ಹಿಂದ್ ಬಿಂತ್ ಅಬೀ ಉಮಯ್ಯ” ಎಂದಾಗಿತ್ತು. ಅವರ ಮೊದಲ ವಿವಾಹ ಅಬೂ ಸಲಮರ ಜೊತೆ ನಡೆದಿತ್ತು. ಅವರ ಮರಣದ ಬಳಿಕ ಹಿಜ್ರಾ 4 ನೆಯ ವರ್ಷದಲ್ಲಿ ಪ್ರವಾದಿವರ್ಯರನ್ನು(ಸ) ಅವರು ವಿವಾಹವಾದರು. ಪ್ರವಾದಿವರ್ಯರ(ಸ) ಪತ್ನಿಯರಲ್ಲಿ(ಸತ್ಯವಿಶ್ವಾಸಿಗಳ ಮಾತೆಯರು) ಇವರು ಕೊನೆಗೆ ಇಹಲೋಕ ತ್ಯಜಿಸಿದವರಾಗಿದ್ದಾರೆ. ಹಿಜ್ರಾ 62ರಲ್ಲಿ ಮದೀನಾ ಮುನವ್ವರದಲ್ಲಿ ಅವರು ಇಹಲೋಕ ತ್ಯಜಿಸಿ ಜನ್ನತುಲ್ ಬಕೀಅದಲ್ಲಿ ದಫನ ಮಾಡಲಾಯಿತು. ಪ್ರಸಿದ್ಧ ವಿದ್ವಾಂಸರಾದ ಅಲ್ಲಾಮ ದಹಬಿಯವರು ಇವರನ್ನು ಓರ್ವೆ ಫಕೀಹ(ಕರ್ಮಶಾಸ್ತ್ರ ವಿದ್ವಾಂಸೆ) ಎಂದು ಕರೆದಿರುವರು. ಹಲವಾರು ಹದೀಸ್‌ಗಳ ಮೂಲಕ ಅವರಲ್ಲಿರುವ ಕರ್ಮಶಾಸ್ತ್ರಪರವಾದ ಪಾಂಡಿತ್ಯ, ವಿವೇಕ, ಅಸಾಮಾನ್ಯ ಜ್ಞಾನ ಪ್ರಕಟವಾಗಿದೆ. 

ಹುದೈಬಿಯಾ ಸಂಧಿಯ ಸಂದರ್ಭದಲ್ಲಿ ಉಮ್ರಾ ನಿರ್ವಹಿಸದೆ ತಲೆ ಬೋಳಿಸಲು(ಹಲ್ಖ್) ಪ್ರವಾದಿವರ್ಯರು(ಸ) ತಮ್ಮ ಅನುಯಾಯಿಗಳಿಗೆ ತಿಳಿಸಿದರು. ಆದರೆ ಉಮ್ರಾ ನಿರ್ವಹಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಸಹಾಬಿಗಳು ಮೊದಲು ಅದನ್ನು ಪಾಲಿಸಲು ಹಿಂಜರಿದರು. ಈ ಸನ್ನಿವೇಶವನ್ನು ಮನಗಂಡ ಉಮ್ಮು ಸಲಮ(ರ)ರವರು ಪ್ರವಾದಿವರ್ಯರಿಗೆ(ಸ) ಮೊದಲು ತಮ್ಮ ತಲೆಗೂದಲು ಕತ್ತರಿಸಿರಿ ಎಂದು ಹೇಳಿದರು. ಇದನ್ನು ಪಾಲಿಸಿದ ಪ್ರವಾದಿವರ್ಯರು(ಸ) ಕೂದಲನ್ನು ಕತ್ತರಿಸಿದರು. ಇದನ್ನು ಕಂಡ ಸಹಾಬಿಗಳು ಉತ್ತೇಜಿತಗೊಂಡು ಪರಸ್ಪರ ಕೇಶಮುಂಡನ ಮಾಡಲಾರಂಭಿಸಿದರು. ಉಮ್ಮು ಸಲಮರ(ರ) ಈ ವಿವೇಕಯುತವಾದ ಸಲಹೆಯಿಂದ ಸಹಾಬಿಗಳು ಮಾನಸಿಕ ಸಂಘರ್ಷದಿಂದ ಪಾರಾದರು. ಅವರ ಪಾಂಡಿತ್ಯವನ್ನು ಬಹಿರಂಗಪಡಿಸುವ ಇಂತಹ ಹಲವಾರು ಉದಾಹರಣೆಗಳು ಇತಿಹಾಸದಲ್ಲಿವೆ.

ಉಮ್ಮುಲ್ ಮೂಮಿನೀನ್ ಜುವೈರಿಯಾ(ರ)

ಸತ್ಯವಿಶ್ವಾಸಿಗಳ ಮಾತೆ ಜುವೈರಿಯಾ(ರ)ರವರು ಬನೂ ಮುಸ್ತಲಿಕ್ ಗೋತ್ರದ ನಾಯಕ ಹಾರಿಸ್‌ರ ಪುತ್ರಿ. ಬನೂ ಮುಸ್ತಲಿಕ್ ಯುದ್ಧದಲ್ಲಿ ಅವರು ಸೆರೆಯಾದರು. ಪ್ರವಾದಿವರ್ಯರು(ಸ) ಅವರಿಗೆ ವಿಮೋಚನೆಯ ವೆಚ್ಚ(ಬದಲ್ ಕಿತಾಬತ್) ನೀಡಿ ಅವರನ್ನು ಸ್ವತಂತ್ರಗೊಳಿಸಿದರು. ನಂತರ ಪ್ರವಾದಿವರ್ಯರು(ಸ) ಅವರನ್ನು ವಿವಾಹವಾದರು. ಪ್ರವಾದಿವರ್ಯರ(ಸ) ಜೊತೆಗಿನ ಹೊಸ ಕುಟುಂಬ ಸಂಬಂಧ ಬೆಳೆಸಿದ ಕಾರಣಕ್ಕಾಗಿ ಅದನ್ನು ಗೌರವಿಸಿಕೊಂಡು ಸಹಾಬಿಗಳು ತಮ್ಮ ಅಧೀನದಲ್ಲಿದ್ದ ಬನೂ ಮುಸ್ತಲಿಕ್ ಗೋತ್ರಕ್ಕೆ ಸೇರಿದ ಅನೇಕ ಬಂಧಿತರನ್ನು ಬಿಡುಗಡೆಗೊಳಿಸಿದರು. ಹಿಜ್ರಾ 56 ನೆಯ ವರ್ಷದಲ್ಲಿ ಅವರು ಇಹಲೋಕ ತ್ಯಜಿಸಿದರು. ನಿಸಾವುಲ್ ಫೌಲರ್‌ರಸೂಲ್ ಎಂಬ ಗ್ರಂಥದ ಕರ್ತೃ ಮುಹಮ್ಮದ್ ಬುರ್ಹಾನ್‌ರವರು ಜುವೈರಿಯಾರನ್ನು ಫಕೀಹ(ಕರ್ಮಶಾಸ್ತ್ರ ವಿದ್ವಾಂಸೆ) ಎಂದು ಕರೆದಿದ್ದಾರೆ. ಅವರ ಕರ್ಮಶಾಸ್ತ್ರದ ಬಗೆಗಿನ ನೈಪುಣ್ಯತೆಯನ್ನು ಸ್ಪಷ್ಟಪಡಿಸುವ ಕೆಲವು ಫತ್ವಾಗಳು “ಮುಸನ್ನಫ್ ಇಬ್ನು ಅಬೀ ಶೈಬ” “ಮುಸನ್ನಫ್ ಅಬ್ದುರ್ರಝಾಕ್” ಎಂಬ ಪ್ರಸಿದ್ಧ ಹದೀಸ್ ಕರ್ಮಶಾಸ್ತ್ರ ಗ್ರಂಥಗಳಲ್ಲಿ ದಾಖಲಿಸಲಾಗಿದೆ.

ಝೈನಬ್ ಬಿಂತಿ ಅಬೀ ಸಲಮ(ರ)

ಝೈನಬ್ ಬಿಂತಿ ಅಬೀ ಸಲಮ(ರ)ರವರು ಪ್ರವಾದಿವರ್ಯರ(ಸ) ಸಾಕು ಪುತ್ರಿಯಾಗಿದ್ದರು(ರಬೀಬ). ಪ್ರವಾದಿವರ್ಯರ(ಸ) ಪತ್ನಿ ಉಮ್ಮು ಸಲಮಾ(ರ)ರ ಪುತ್ರಿಯಾಗಿದ್ದರು. ಆ ಕಾರಣದಿಂದ ಅವರು ಪ್ರವಾದಿವರ್ಯರಿಂದ ನೇರವಾಗಿ ಶಿಕ್ಷಣ ಪಡೆದು ಬೆಳೆದರು. ಪ್ರವಾದಿವರ್ಯರು(ಸ) ಅವರನ್ನು ಸ್ವಂತ ಪುತ್ರಿಯಂತೆ ಪ್ರೀತಿಸುತ್ತಿದ್ದರು. ಹಿಜ್ರಾ 74 ರಲ್ಲಿ ಅವರು ಇಹಲೋಕ ತ್ಯಜಿಸಿದರು. ಹಲವಾರು ವಿದ್ವಾಂಸರು ಅವರಿಗೆ ಫಕೀಹ ಎಂದು ವಿಶೇಷ ಗೌರವ ನೀಡಿದ್ದಾರೆ. ಪ್ರಸಿದ್ಧ ಇತಿಹಾಸಜ್ಞರಾಗಿರುವ ಅಲ್ಲಮಾ ಇಬ್ನು ಅಸೀರ್ ಅಲ್ ಜಝರಿ, ಇಬ್ನು ಅಬ್ದುಲ್ ಬರ್ ರವರು ಇವರನ್ನು “ತಮ್ಮ ಕಾಲದ ಮಹಿಳೆಯರಲ್ಲಿ ಅತಿ ಶ್ರೇಷ್ಠ ಕರ್ಮಶಾಸ್ತ್ರ ವಿದ್ವಾಂಸೆಯರಲ್ಲಿ ಓರ್ವರು” ಎಂದು ಹೇಳಿದ್ದಾರೆ. ಪ್ರಮುಖ ತಾಬೀಅ ಹಾಗೂ ಹಝ್ರತ್ ಅಬೂ ರಾಫಿ ಹೀಗೆ ಹೇಳಿರುತ್ತಾರೆ: ‘ಮದೀನಾದ ವಿದ್ವಾಂಸೆಯರಲ್ಲಿ ಮಹಿಳೆಯರ ಹೆಸರು ಪ್ರಸ್ತಾಪ ಮಾಡುವುದಿದ್ದರೆ ಅದು ಝೈನಬ್ ಬಿಂತಿ ಅಬೀ ಸಲಮರ ಹೊರತು ಬೇರೆ ಯಾರೂ ಅಲ್ಲ’

ಫಾತಿಮಾ ಬಿಂತ್ ಖೈಸ್(ರ)

ಫಾತಿಮಾ ಬಿಂತ್ ಖೈಸ್(ರ) ರವರು ಪ್ರಸಿದ್ಧ ಮಹಿಳಾ ಸಹಾಬಿಯಾಗಿದ್ದಾರೆ. ಆರಂಭ ಕಾಲದಲ್ಲಿ ಹಿಜ್ರಾ ಹೋದವರಲ್ಲಿ ಸೇರಿದ್ದಾರೆ. ಮೊದಲ ಪತಿ ಅಬೂಬಕರ್ ಬಿನ್ ಹಫ್ಸ್ ಇವರಿಗೆ ವಿವಾಹ ವಿಚ್ಛೇದನ ನೀಡಿದ್ದರು. ಇದ್ದತ್ ಮುಗಿದ ಬಳಿಕ ಇವರನ್ನು ವಿವಾಹವಾಗಲು ಬಹಳಷ್ಟು ಮಂದಿ ಮುಂದೆ ಬಂದರೂ ಪ್ರವಾದಿವರ್ಯರ(ಸ) ಆದೇಶದಂತೆ ಇವರು ಉಸಾಮಾ ಬಿನ್ ಝೈದ್‌ರವರನ್ನು(ರ) ವಿವಾಹವಾದರು. ಹ. ಉಮರ್(ರ)ರವರ ನಿಧನದ ನಂತರ ಮುಂದಿನ ಖಲೀಫರ ಆಯ್ಕೆಗೆ ಸೇರಿದ ಶೂರಾ ಸಭೆ (ಸಲಹಾ ಸಮಿತಿ) ಸೇರಿದ್ದು ಇವರ ಮನೆಯಲ್ಲಿ ಎಂಬುದು ಗಮನಾರ್ಹ. ಹಿಜ್ರಾ 50ನೇಯ ವರ್ಷದಲ್ಲಿ ಇವರು ನಿಧನರಾದರು. ಇಮಾಮ್ ಶಅಬಿಯವರು ಇವರನ್ನು ಫಕೀಹ ಎಂದು ಕರೆದಿದ್ದಾರೆ. ಒಮ್ಮೆ ಅವರು ವಿವಾಹ ವಿಚ್ಛೇದನ ಪಡೆದ ಓರ್ವ ಮಹಿಳೆಗೆ ಇದ್ದತ್‌ನ ಸಮಯದಲ್ಲಿ ವಾಸದ ಸೌಲಭ್ಯ ಮತ್ತು ಆಹಾರದ (ನಫಖ) ಜವಾಬ್ದಾರಿಕೆ ಪತಿಗಿಲ್ಲ ಎಂಬ ತೀರ್ಮಾನವನ್ನು ವಿವರಿಸುತ್ತಾ ಫಾತಿಮಾ ಬಿಂತಿ ಖೈಸ್ ವರದಿ ಮಾಡಿದ ಹದೀಸ್ ವಿವರಿಸುತ್ತಿದ್ದರು. ‘ಉಮರ್(ರ) ಫಾತಿಮಾ ಬಿಂತಿ ಖೈಸ್‌ರ ಈ ಅಭಿಪ್ರಾಯವನ್ನು ತಳ್ಳಿಹಾಕಿರಲಿಲ್ಲ ಎಂದರು. ಇದಕ್ಕೆ ಉತ್ತರವಾಗಿ ಇಮಾಮ್ ಶಅಬಿ ಹೀಗೆ ಕೇಳಿದರು. “ಈ ಸಮಸ್ಯೆಯನ್ನು ನೇರವಾಗಿ ಅಭಿಮುಖೀಕರಿಸಿದ ಕರ್ಮಶಾಸ್ತ್ರದ ಕುರಿತು ಜ್ಞಾನವಿರುವ ಮಹಿಳೆಯ ಮೇಲೆ ನಂಬಿಕೆ ಇಡಬಾರದೆಂದು ನೀವು ಹೇಳುತ್ತೀರಾ?” ಎಂದು ಕೇಳಿದರು.