ಸನ್ಮಾರ್ಗ ವಾರ್ತೆ
ದೆಹಲಿ ಗಲಭೆಗೆ ಸಂಚು ನಡೆಸಿದ್ದಾರೆ ಎಂಬ ಆರೋಪದಲ್ಲಿ ಜೈಲಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ತಾತ್ಕಾಲಿಕ ಜಾಮೀನು ಲಭಿಸಿದೆ. 7 ದಿವಸಗಳ ಮಟ್ಟಿಗೆ ದೆಹಲಿ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಉಮರ್ ಖಾಲಿದ್ ಅವರು 2020 ಸೆಪ್ಟೆಂಬರ್ ನಿಂದ ಜೈಲಲ್ಲಿದ್ದಾರೆ. ಅವರ ವಿರುದ್ಧ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿದೆ. ಸಂಬಂಧಿಕರ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ಇವರಿಗೆ ಈಗ ತಾತ್ಕಾಲಿಕ ಜಾಮೀನು ಲಭಿಸಿದೆ. ಅಡಿಷನಲ್ ಸೆಷನ್ಸ್ ಜಡ್ಜ್ ಸಮೀರ್ ಬಾಜಪೇಯಿ ಅವರು ಈ ಜಾಮೀನು ಮಂಜೂರು ಮಾಡಿದ್ದಾರೆ.
2022 ಅಕ್ಟೋಬರ್ ನಲ್ಲಿ ದೆಹಲಿ ಹೈಕೋರ್ಟು ಉಮರ್ ಖಾಲಿದ್ ಗೆ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದರಾದರೂ ಆ ಬಳಿಕ ತನ್ನ ಮನವಿಯನ್ನು ಹಿಂಪಡೆದುಕೊಂಡರು. ಈ ವರ್ಷದ ಆರಂಭದಲ್ಲಿ ಜಾಮೀನು ಕೋರಿ ಇವರು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಹಾಕಿದರು. ಆದರೆ ಅಲ್ಲಿ ಅವರಿಗೆ ಜಾಮೀನು ಮಂಜೂರಾಗಲಿಲ್ಲ. ಈ ನಿರಾಕರಣೆಯನ್ನು ಪ್ರಶ್ನಿಸಿ ಉಮರ್ ಖಾಲಿದ್ ರು ದೆಹಲಿ ಹೈಕೋರ್ಟಿಗೆ ಮನವಿ ಮಾಡಿದ್ದಾರೆ. ಅದು ಇನ್ನೂ ವಿಚಾರಣೆಗೆ ಬಂದಿಲ್ಲ.
ದೆಹಲಿ ಗಲಭೆಗೆ ಬಗ್ಗೆ ಸಂಬಂಧಿಸಿ ಉಮರ್ ಖಾಲಿದ್ ಅವರಲ್ಲದೆ ತಾಹಿರ್ ಹುಸೇನ್, ಖಾಲಿದ್ ಸೈಫಿ, ಇಶ್ರತ್ ಜಹಾಂ, ಮೀರಾನ್ ಹೈದರ್, ಗುಲ್ಫಿಶ ಫಾತಿಮಾ, ಶಿಫಾವುರ್ರಹ್ಮಾನ್, ಆಸಿಫ್ ಇಕ್ಬಾಲ್ ತನ್ಹ, ಶಾದಾಬ್ ಅಹಮದ್, ತಸ್ಲೀಮ್ ಅಹಮದ್, ಸಲೀಂ ಮಲಿಕ್, ಮೊಹಮ್ಮದ್ ಸಲೀಂ ಖಾನ್, ಅಥರ್ ಖಾನ್, ಸಫೂರ ಜರ್ದಾರ್, ಶರ್ಜೀಲ್ ಇಮಾಮ್ ಫೈಝಲ್ ಖಾನ್, ನತಾಶಾ ನರ್ವಾಲ್ ಮುಂತಾದವರ ವಿರುದ್ಧ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲಾಗಿದೆ.












