ಸನ್ಮಾರ್ಗ ವಾರ್ತೆ
✍️ಅಮಾನ್ ಕೆ
ಲೆಬನಾನಿನ ಹಿಝ್ಬುಲ್ಲ ಬಳಸುತ್ತಿದ್ದ ಪೇಜರ್ ಮತ್ತು ವಾಕಿ ಟಾಕಿಗಳು ಸ್ಫೋಟಗೊಂಡಾಗ ಕೇರಳದ ರಿನ್ಸನ್ ಜೋಸ್ ಎಂಬವರ ಹೆಸರು ಚಾಲ್ತಿಗೆ ಬಂದಿತ್ತಲ್ಲ, ಈ ಸ್ಪೋಟಕ ತುಂಬಿದ ಪೇಜರ್ ಅನ್ನು ಹಿಝ್ಬುಲ್ಲಗೆ ಮಾರಾಟ ಮಾಡಿದ ಆರೋಪ ಈತನ ಮೇಲಿತ್ತಲ್ಲ, ಆ ಮನುಷ್ಯ ಈಗ ಎಲ್ಲಿದ್ದಾರೆ? ಅವರೇನು ಮಾಡುತ್ತಿದ್ದಾರೆ? ಭಾರತಕ್ಕೂ ಬಂದಿಲ್ಲ, ಕೆಲಸ ಮಾಡುವ ನಾರ್ವೆಗೂ ಹೋಗಿಲ್ಲ. ಈ ಪೇಜರ್ ಗಳು ಸ್ಫೋಟಗೊಂಡ ಸಮಯದಲ್ಲಿ ಈ ಮನುಷ್ಯ ಅಮೆರಿಕದಲ್ಲಿದ್ದರು. ಆದರೆ ಈಗ ಅವರು ಅಲ್ಲಿಲ್ಲ. ಹಾಗಿದ್ದರೆ ಮತ್ತೆ ಎಲ್ಲಿದ್ದಾರೆ? ಅವರನ್ನು ಇಸ್ರೇಲ್ ಸುರಕ್ಷಿತ ಜಾಗದಲ್ಲಿ ಇರಿಸಿಕೊಂಡು ಯಾರಿಗೂ ಸಿಗದಂತೆ ಕಾಪಾಡುತ್ತಿದೆಯೇ? ಹೌದು ಅನ್ನುತ್ತಿದೆ ನ್ಯೂಯಾರ್ಕ್ ಟೈಮ್ಸ್ ವರದಿ.
ಈತ 10 ವರ್ಷಗಳ ಹಿಂದೆ ಭಾರತ ಬಿಟ್ಟು ನಾರ್ವೆಗೆ ಹೋಗಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಒಂದು ವರ್ಷದ ಹಿಂದೆ ಕೇರಳಕ್ಕೆ ಬಂದಿದ್ದ. ಪೇಜರ್ ಪ್ರಕರಣದಲ್ಲಿ ಈತ ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾಗಿಯಾಗಿದ್ದಾನೆ ಎಂದು ಟೈಮ್ಸ್ ವರದಿ ಮಾಡಿದೆ.
ಪೇಜರ್ ನ ಒಳಗೆ ಸ್ಫೋಟಕವನ್ನು ತುಂಬಿಸಿ ಮಾರುವ ಯೋಜನೆಯನ್ನು ಇಸ್ರೇಲ್ ಆರಂಭಿಸಿದ್ದು 2022 ರಲ್ಲಿ. ಅದಕ್ಕೆ ಕಾರಣ ಹಿಝಬುಲ್ಲಾದ ಕಾರ್ಯಕರ್ತರು ಮೊಬೈಲ್ ಫೋನ್ ಬಳಕೆಯನ್ನು ನಿಲ್ಲಿಸಲು ಪ್ರಾರಂಭಿಸಿದ್ದು. ಮೊಬೈಲ್ ಅನ್ನು ಇಸ್ರೇಲ್ ಟ್ರ್ಯಾಕ್ ಮಾಡುವ ಮೂಲಕ ನಮ್ಮ ಚಲನವಲನವನ್ನು ಪತ್ತೆ ಮಾಡಬಹುದು ಎಂಬ ಭೀತಿಯಿಂದ ಹಿಝ್ಬುಲ್ಲ ಮೊಬೈಲ್ ಬದಲು ಪೇಜರ್ ಬಳಸಲು ತೀರ್ಮಾನಿಸಿತು. ಇದನ್ನು ಅರಿತ ಇಸ್ರೇಲ್ ನಕಲಿ ಕಂಪನಿಗಳ ಮೂಲಕ ಪೇಜರ್ ತಯಾರಿಸಲು ನಿರ್ಧರಿಸಿತು. ಅದಕ್ಕಾಗಿ ಪೇಜರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಥೈಲ್ಯಾಂಡಿನ ಗೋಲ್ಡ್ ಆಪೋ ಕಂಪನಿಯನ್ನು ಸಂಪರ್ಕಿಸಿತು.
ಇದರ ಭಾಗವಾಗಿ ಹಂಗರಿಯಲ್ಲಿ ಬಿ ಎ ಸಿ ಕನ್ಸಲ್ಟಿಂಗ್ ಎಂಬ ಕಂಪನಿಯನ್ನು ಸ್ಥಾಪಿಸಿತು. ಇದಾಗಿ ಒಂದು ತಿಂಗಳ ಬಳಿಕ ಬಲ್ಗೇರಿಯಾದಲ್ಲಿ ನಾರ್ತ್ ಗ್ಲೋಬಲ್ ಲಿಮಿಟೆಡ್ ಎಂಬ ಕಂಪನಿಯನ್ನು ನೋಂದಾಯಿಸಿತು. ಇದನ್ನು ನೋಂದಾಯಿಸಿದ್ದು ರಿನ್ಸನ್ ಜೋಸ್ ಹೆಸರಲ್ಲಿ. ಅಲ್ಲದೆ ಹೊಸ ಮಾದರಿಯ ಪೇಜರುಗಳನ್ನು ನಿರ್ಮಿಸುವುದಕ್ಕಾಗಿ ಗೋಲ್ಡನ್ ಅಪೋದಿಂದ ಲೈಸನ್ಸ್ ಅನ್ನು ಬಿ ಎ ಸಿ ಕಂಪನಿ ಪಡಕೊಂಡಿತು.
ಹೊಸ ಪೇಜರುಗಳು ಹಿಝ್ಬುಲ್ಲ ಈ ಹಿಂದೆ ಖರೀದಿಸುತ್ತಿದ್ದ ಪೇಜರುಗಳಿಗಿಂತ ದೊಡ್ಡದಾಗಿತ್ತು. ಆದರೆ ಇದಕ್ಕೆ ಬ್ಯಾಟರಿ ಬಾಳಿಕೆ ಹೆಚ್ಚು ಮತ್ತು ವಾಟರ್ ಪ್ರೂಫ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ ಎಂದು ಪ್ರಚಾರ ಮಾಡಲಾಯಿತು. ಈ ಪೇಜರುಗಳನ್ನು ತಯಾರಿಸಿದ್ದು ಇಸ್ರೇಲ್ ನಲ್ಲಾಗಿತ್ತು. ಹಿಝ್ಬುಲ್ಲಾದ ಮುಖಂಡರನ್ನು ಮೊಸಾದ್ ಏಜೆಂಟ್ ಈ ಕುರಿತಂತೆ ಮಾತುಕತೆ ನಡೆಸಿ ಒಪ್ಪಿಸಿದ. ಇಲ್ಲೇ ರಿನ್ಸನ್ ಜೋಸ್ ನ ಪಾತ್ರ ಮುಖ್ಯವಾಗುವುದು. ನೀವು ಸಗಟಾಗಿ ಖರೀದಿಸುವುದಾದರೆ ನಿಮಗೆ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ಕೊಡುವುದಾಗಿ ಏಜೆಂಟು ಒಪ್ಪಿಸಿದ.. ಈ ಪಾತ್ರವನ್ನು ನಿಭಾಯಿಸಿದ್ದು ರಿನ್ಸನ್ ಜೋಸ್ ಎಂದು ನಂಬಲಾಗಿದೆ.
ಅಲ್ಲದೆ ಸ್ಪೋಟಕ ತುಂಬಿಸದ ಒಂದು ಪೇಜರನ್ನು ಪರೀಕ್ಷೆಗಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರಿಗೆ ನೀಡಲಾಗಿತ್ತು. ಆರಂಭದಲ್ಲಿ ಅವರಿಗೆ ಅದರಲ್ಲಿ ವಿಶ್ವಾಸ ಬಂದಿರಲಿಲ್ಲ. ಅದು ಸುರಕ್ಷಿತವಾ ಎಂಬುದನ್ನು ನೋಡುವುದಕ್ಕಾಗಿ ಅದನ್ನು ಎತ್ತಿ ಬಿಸಾಡಿದ್ದರು. ಅವರಿಗೆ ತೃಪ್ತಿಯಾದ ಆ ಬಳಿಕ ಕೆಲವೇ ತಿಂಗಳಲ್ಲಿ ಪೇಜರ್ ನ ಮೊದಲ ಬ್ಯಾಚ್ ಅನ್ನು ಹಿಝ್ಬುಲ್ಲಾಕ್ಕೆ ರವಾನಿಸಲಾಯಿತು. ಹಿಝ್ಬುಲ್ಲಾದ ಜೊತೆ ಸಂಘರ್ಷ ಏರ್ಪಟ್ಟರೆ ಇದನ್ನು ಸ್ಪೋಟಿಸುವುದು ಎಂದು ನಿರ್ಧರಿಸಲಾಯಿತು.
ಈ ನಡುವೆ ಸೆಪ್ಟೆಂಬರ್ 11ರಂದು ಮೊಸಾದ್ ಗೆ ಒಂದು ಸುದ್ದಿ ಬಂತು, ಈ ಪೇಜರುಗಳ ಬಗ್ಗೆ ಹಿಝ್ಬುಲ್ಲಾ ಗೆ ಅನುಮಾನ ಬಂದಿದೆ ಮತ್ತು ಅದನ್ನು ಪರೀಕ್ಷಿಸುವುದಕ್ಕಾಗಿ ಇರಾನ್ ಗೆ ಕಳುಹಿಸಿಕೊಟ್ಟಿದೆ ಎಂಬುದೇ ಆ ಸುದ್ದಿ. ಇನ್ನು ನಾವು ವಿಳಂಬ ಮಾಡಿದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಅಂದುಕೊಂಡ ಮೊಸಾದ್ ಸೆಪ್ಟೆಂಬರ್ 17ರಂದು ಸಂಜೆ ಮೂರು 30ರ ವೇಳೆಗೆ ಪೇಜರುಗಳನ್ನು ಸ್ಪೋಟಿಸಿತು.
ಹೀಗೆ ಲೆಬನಾನ್ ನಲ್ಲಿ ಪೇಜರ್ ಸ್ಪೋಟಗೊಳ್ಳುವಾಗ ಈ ರಿನ್ಸನ್ ಜೋಸ್ ಅಮೆರಿಕಾದ ಬೋಸ್ಟನ್ ನಗರದಲ್ಲಿ ಟೆಕ್ನಾಲಜಿ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ. ಆತನ ಪಾತ್ರವೂ ಈ ಪೇಜರ್ನಲ್ಲಿ ಇದೆ ಅನ್ನುವುದು ಮಾಧ್ಯಮಗಳಲ್ಲಿ ವರದಿಯಾಯಿತು. ಜೋಸ್ ನನ್ನು ತಾನು ವಿಚಾರಣೆ ನಡೆಸುವುದಾಗಿ ನಾರ್ವೆ ಹೇಳಿತು. ಈ ಸಂದರ್ಭದಲ್ಲಿ ಇಸ್ರೇಲ್ ರಂಗಕ್ಕಿಳಿಯಿತು. ಅಮೆರಿಕಾದ ಅಧಿಕಾರಿಗಳನ್ನು ಅದು ಸಂಪರ್ಕಿಸಿತು. ಮತ್ತು ಜೋಸ್ ನಾರ್ವೆಗೆ ಹೋಗದಂತೆ ಅದು ತಡೆಯಿತು. ಆದ್ದರಿಂದ ಈಗ ರಿನ್ಸನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಒಂದೋ ಅಮೆರಿಕದಲ್ಲಿದ್ದಾರೆ ಅಥವಾ ಇಸ್ರೇಲ್ ತನ್ನಲ್ಲಿಗೆ ಆತನನ್ನು ಕರೆಸಿಕೊಂಡಿದೆ ಎಂದು ಅಂದುಕೊಳ್ಳಲಾಗಿದೆ.












