ನಿತೀಶ್ ಕುಮಾರ್ ಗೆ ಇದು ಕೊನೆಯ ಚುನಾವಣೆಯೇ? ಮರು ಮುಖ್ಯಮಂತ್ರಿಯಾಗುವ ಗ್ಯಾರಂಟಿ ಇಲ್ಲದ ನಿತೀಶ್ ಕುಮಾರ್ ಮುಂದಿನ ನಡೆ ಏನು?

0
960

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರ, ಕರ್ನಾಟಕ, ಬಿಹಾರ್‌, ದೆಹಲಿ ಇನ್ನೇನೋ ಆಗಲಿಕ್ಕಿದೆ. ದಕ್ಷಿಣದ ಕನ್ನಡದ ರಾಜಕಾರಣಿಯೊಬ್ಬರು ತಾನು ಮಂತ್ರಿಯಾಗಲು ಅಕ್ಟೋಬರ್ ವರೆಗೆ ಕಾಯಿರಿ ಎಂಬ ಸುಳಿವನ್ನು ನೀಡಿದ್ದಾರೆ.

ಮುಂದಿನ ಕೆಲವೇ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ವಿಪ್ಲವ ಆಗಲಿದೆ. ಎರಡುವರೆ ವರ್ಷದ ಆಡಳಿತದ ಬಳಿಕ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಬೇಕಾಗುತ್ತದೆ ಎಂಬುದರ ಸುಳಿವು ಇಲ್ಲಿ ಸಿಗುತ್ತಿದೆ.

ಇಂತಹದ್ದೇ ಸುಳಿವು ಮಹಾರಾಷ್ಟ್ರದಿಂದಲೂ ಬಂದಿದೆ. ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಆಗುವ ಸಮಯ ಬಂದಿದೆ. ಜನವರಿ ಅಂತ್ಯದೊಳಗೆ ಏನೋ ಘಟಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಗೃಹ ಖಾತೆ ಸೇರಿದಂತೆ ತನಗೆ ಬೇಕಾದ ಇಲಾಖೆಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಏಕನಾಥ ಶಿಂಧೆ ಬಳಗದ ಒಂದು ಭಾಗ ಈಗಾಗಲೇ ಶರತ್ ಪವರ್ ರನ್ನು ಸಂಪರ್ಕಿಸಿದೆ. ಇನ್ನೊಂದು ಕಡೆ ಅಜಿತ್ ಪವಾರ್ ಕುಟುಂಬ ಸಮೇತರಾಗಿ ಶರತ್ ಪವಾರ್ ರನ್ನು ಭೇಟಿಯಾಗಿ ಬಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಹೀಗೆ ನಡೆಯುತ್ತಿರುವಾಗಲೇ ಅಲ್ಲಿ ಬಿಹಾರದ ರಾಜಕಾರಣ ಮತ್ತೇನು ಹೇಳುತ್ತಿದೆ. ನಿತೀಶ್ ಕುಮಾರ್ ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೇರುವುದಿಲ್ಲ, ಹೌದು ಅಷ್ಟೊಂದು ಬೇಸರ ಅವರಿಗೆ ಬಿಜೆಪಿಯೊಂದಿಗೆ ಆಗಿದೆಯೇ? ಇದರ ಮೊದಲ ಸುಳಿವು ಸಿಕ್ಕಿದ್ದು, ದೆಹಲಿಯಿಂದ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ತನಗೆ ಅವಕಾಶ ನೀಡಿ ಎಂದು ನಿತೀಶ್ ಕುಮಾರ್ ಕೇಳಿದ್ದರು. ಮೂರು ಬಿಡಿ ಒಂದು ಸ್ಥಾನವನ್ನು ಕೊಡುವುದಿಲ್ಲ ಎಂದು ಬಿಜೆಪಿ ಕಡ್ಡಿ ಮುರಿದಂತೆ ಹೇಳಿಬಿಟ್ಟಿದೆ. ಕಳೆದ ಬಾರಿ ಮೂರು ಸ್ಥಾನ ಕೊಡಲಾಗಿತ್ತು, ಆದರೆ ಒಂದನ್ನು ಕೂಡ ಅವರಿಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ.

ದೆಹಲಿಯಲ್ಲಿ ಉತ್ತರಾಂಚಲ್ ನಿವಾಸಿಗಳು ಅಂದರೆ ಉತ್ತರ ಪ್ರದೇಶ ಬಿಹಾರದ ಭಯ್ಯಾಗಳು ಉದ್ಯೋಗವನ್ನು ಅರಸಿ ದೆಹಲಿಗೆ ಬಂದವರು ಇಲ್ಲಿ ನೆಲೆ ನಿಂತಿದ್ದಾರೆ. ದೆಹಲಿ ವಿಧಾನಸಭೆ 70 ಕ್ಷೇತ್ರಗಳ ಪೈಕಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಇವರು ಪ್ರಭಾವಿತ ಮತದಾರರಾಗಿದ್ದಾರೆ. ಅಂತೆಯೇ ತಮಗೆ ಮೂರು ಸ್ಥಾನ ಬಿಟ್ಟು ಕೊಡಿ ಉಳಿದ ಕ್ಷೇತ್ರಗಳಲ್ಲಿ ನಮ್ಮ ಪ್ರಭಾವ ಕೆಲಸ ಮಾಡುತ್ತದೆ ಎಂದು ನಿತೀಶ್ ಕುಮಾರ್ ಹೇಳಿದರೂ, ಬಿಜೆಪಿ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕಲಿಲ್ಲ, ಅದಕ್ಕೇ ಇರಬೇಕು ಎರಡು ದಿನಗಳ ಹಿಂದೆ ಕರೆದ ಎನ್‌ಡಿಎ ಸಭೆಗೆ ನಿತೀಶ್ ಕುಮಾರ್ ಬಂದಿರಲಿಲ್ಲ. ನಿತೀಶ್ ಕುಮಾರ್ ದೆಹಲಿಯಲ್ಲಿದ್ದಾರೆ. ಹಾಗೆಂದು ಅವರು ಬಿಜೆಪಿಯ ಹೈಕಮಾಂಡ್ ಅನ್ನು ಭೇಟಿಯಾಗಲು ಇಲ್ಲಿ ಬಂದಿದ್ದಲ್ಲ, ಬದಲಿಗೆ ಮನಮೋಹನ್ ಸಿಂಗ್ ರವರ ಕುಟುಂಬದವರನ್ನು ಭೇಟಿಯಾಗಲು, ಸಾಂತ್ವನ ಹೇಳಲು ಬಂದಿದ್ದಾರೆ. ಈ ಸಾಂತ್ವನದ ಸಮಯವೇ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುವ ಸಾಧ್ಯತೆಯ ಚರ್ಚೆಗಳು ನಡೆಯುತ್ತಿವೆ. ಮನಮೋಹನ್ ಸಿಂಗ್ ರವರ ಮನೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರು ಈ ಸಮಯದಲ್ಲಿ ಇದ್ದರು.. ಅಲ್ಲಿನು ಮಾತುಕತೆ ನಡೆಯುತ್ತದೆ ಎಂಬುದರ ಆಧಾರದಲ್ಲಿಯೇ ನಿತೀಶ್ ಕುಮಾರ್ ರ ಮುಂದಿನ ನಿರ್ಧಾರ ಸ್ಪಷ್ಟವಾಗಲಿದೆ.
ಕಾಂಗ್ರೆಸ್ ನವರು ಸಾತ್ ನೀಡದಿದ್ದರೂ ಅವರು ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟಕ್ಕಿಳಿಯುವ ಸುಳಿವು ಸಿಕ್ಕಿದೆ.

ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇರಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಅಮಿತ್ ಶಾರಿಗೆ ಒಂದು ಟಿವಿ ಚಾನೆಲ್ ನಲ್ಲಿ ಕೇಳಲಾಗಿತ್ತು. ಅದಕ್ಕೆ ಅವರ ಉತ್ತರ ಮೌನವಾಗಿತ್ತು, ಮುಂದುವರೆದ ಆಂಕರ್ ಮುಂದಿನ ಚುನಾವಣೆಯನ್ನು ನಿತೀಶ್ ಕುಮಾರ್ ರ ನೇತೃತ್ವದಲ್ಲಿ ಎಂದು ಕೇಳಿದ್ದ ಅದಕ್ಕೆ ಅಮಿತ್ ಶಾ ಇದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಉತ್ತರ ಕೊಟ್ಟಿದ್ದರು. ಪಕ್ಷ ಅಂದರೆ ಯಾರು? ಅದುವೇ ಅಮಿತ್ ಶಾ ಅಲ್ಲವೇ? ಅಮಿತ್ ಶಾ ರವರ ಈ ತರಹದ ಉತ್ತರ ನಾನು ಎಲ್ಲಿದ್ದೇನೆ? ಎಲ್ಲಿ ಇರಲಿದ್ದೇನೆ ಎಂದು ನಿತೀಶ್ ಕುಮಾರ್ ರವರನ್ನು ಆತ್ಮಾವಲೋಕನ ಮಾಡಿಸಿರಬಹುದು. ಅದಕ್ಕೆ ಅವರು ಕಾಂಗ್ರೆಸ್ ನಾಯಕರನ್ನ ಭೇಟಿಯಾಗುತ್ತಿರುವುದು.

ಎನ್​ಡಿಎ ಹಲವು ಸಭೆಗಳಲ್ಲಿ ನಿತೀಶ್ ಕುಮಾರ್ ಈ ವರೆಗೆ ಕಂಡಿಲ್ಲ, ಬಿಹಾರದಲ್ಲೂ ದೊಡ್ಡ ದೊಡ್ಡ ಇವೆಂಟ್ಗಳು ಆದವು ಅಲ್ಲೆಲ್ಲೂ ನಿತೀಶ್ ಕುಮಾರ್ ಚಹರೆ ಕಂಡದ್ದಿಲ್ಲ, ನಿತೀಶ್ ಕುಮಾರ್ ಮೌನವಾಗಿರುತ್ತಾರೆ ಮತ್ತು ಸಾರ್ವಜನಿಕವಾಗಿ ಕಾಣುತ್ತಿಲ್ಲ ಎಂದರೆ ಅದೇನು ದೊಡ್ಡದು ಮಾಡಲು ಸಿದ್ಧರಾಗುತ್ತಿದ್ದಾರೆ ಎಂದೇ ಅರ್ಥ.

ಬಿಹಾರದ ರಾಜ್ಯ ವಕ್ತಾರರೊಬ್ಬರು ನಿತೀಶ್ ಕುಮಾರ್ ರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದರು, ಅದಾಗಿ ಮರುದಿನವೇ ಇದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಅವರು, ಹೇಳಿದರು. ತನ್ನನ್ನು ತಾನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ನಿತೀಶ್ ಕುಮಾರ್ ರಿಗೆ ಇದೆಲ್ಲವೂ ಬೇಸರ ತರಿಸುವ ಸಂಗತಿಗಳಾಗಿ ಕಾಣುತ್ತಿಲ್ಲವೇ?

ನಿತೀಶ್ ಕುಮಾರ್ ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಂಗತಿ ಒಂದಿದೆ, ಅದೆಂದರೆ ಅವರು ಬಿಜೆಪಿ ನಾಯಕರಿಂದ ದೂರ ಆಗ್ತಾಯಿರೋದು. ಮೈತ್ರಿ ಸರ್ಕಾರದ ಭಾಗವಾಗಿ ಈ ಹಿಂದೆ ಯಾವೆಲ್ಲ ಬಿಜೆಪಿ ನಾಯಕರನ್ನ ಕುಮಾರ್ ಹತ್ತಿರ ಇಟ್ಟುಕೊಂಡಿದ್ದರೋ ಅವರನ್ನೂ ಕೂಡ ಈಗ ನಿತೀಶ್ ಕುಮಾರ್ ಭೇಟಿಯಾಗುತ್ತಿಲ್ಲ. ಇಷ್ಟೇ ಇಲ್ಲ ನಿತೀಶ್ ಕುಮಾರ್ ದೆಹಲಿಗೆ ಬರುವ ಮೊದಲು 62 ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆ ಅಧಿಕಾರಿಗಳೆಲ್ಲರೂ ಬಿಜೆಪಿಗೆ ಫೇವರ ಆಗಿರುವವರು ಎಂದು ಗುರುತಿಸಲಾದವರು. ತನ್ನ ಪ್ರಭಾವಿ ಕ್ಷೇತ್ರ ಎನ್ನುವ ಪ್ರದೇಶಗಳಿಂದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ತನಗೆ ಬೇಕಾದವರನ್ನು ಅಲ್ಲಿ ನಿಯುಕ್ತಿ ಮಾಡಿದ್ದಾರೆ. ಒಂದು ವೇಳೆ ಅವರಿಗೆ ಇರಬೇಕಾಗಿದ್ದರೆ ಇಂತಹ ವರ್ಗಾವಣೆ ಅವಶ್ಯಕತೆ ಇರಲಿಲ್ಲ. ತನ್ನವರು ಎನ್ನುವ ಅಧಿಕಾರಿಗಳನ್ನು, ತನ್ನ ಪ್ರಭಾವಿತ ಕ್ಷೇತ್ರಗಳಲ್ಲಿ ತಂದಿಟ್ಟುಕೊಳ್ಳಬೇಕಾದ ಅನಿವಾರ್ಯತೆಯೂ ಇರಲಿಲ್ಲ.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆಯ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತು. ಶಿವ ಸೇನೆಯ ಮತಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಕೊನೆಗೆ ಏನಾಯಿತು ಶಿಂಧೆಯನ್ನು ಬದಿಗೆ ಸರಿಸಿ ಮುಖ್ಯಮಂತ್ರಿಯ ಪಟ್ಟ ಬಿಜೆಪಿ ತನ್ನ ಬಳಿ ಇಟ್ಟುಕೊಂಡಿತು. ಇದೇ ಪ್ರಹಸನ ಬಿಹಾರದಲ್ಲೂ ಮರುಕಳಿಸಲಿದೆ ಎನ್ನುವ ವಿಮರ್ಶೆಯನ್ನ ರಾಜಕೀಯ ಪಂಡಿತರು ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ವಯಸ್ಸು 70 ದಾಟುತ್ತಿದೆ ಹಾಗೆಯೇ ಅವರ ಆರೋಗ್ಯ ಕೂಡ ಸಮತೋಲನದಲ್ಲಿ ಇಲ್ಲ ಆದುದರಿಂದ ಇದು ಅವರ ಕೊನೆಯ ಚುನಾವಣೆಯಾಗುವ ಸಾಧ್ಯತೆಯೇ ಹೆಚ್ಚು. ಆದರೆ ಈಗಿರುವ ಪ್ರಶ್ನೆ ಅವರು ಯಾರೊಂದಿಗೆ ಈ ಚುನಾವಣೆಯಲ್ಲಿ ಅಣಿಯಾಗುತ್ತಾರೆ ಎಂಬುದು. ಬಿಜೆಪಿಯೊಂದಿಗೆ ಚುನಾವಣೆ ಎದುರಿಸಿದರೆ ನನ್ನ ಸ್ಥಿತಿ ಏಕನಾಥ್ ಶಿಂಧೆಯಂತೆ ಆಗುತ್ತದೆ ಎನ್ನುವುದು ನಿತೀಶ್ ಕುಮಾರ್ ಗೊತ್ತಾಗಿದೆ. ಈ ಮಾಹಿತಿ ಬರುತ್ತಿರುವುದು ಅವರ ಅಂತಃಪುರದ ಮಾಧ್ಯಮ ಮಿತ್ರರಿಂದ . ಹಾಗಾದರೆ ಮಾಡುವುದೇನು?.

ಇದೆಲ್ಲ ಬೆಳವಣಿಗೆ ಆಗುತ್ತಿರುವುದು ನಮಗೆ ಗೊತ್ತಿದೆ, ಬಿಜೆಪಿಗೆ ಗೊತ್ತಿಲ್ಲ ಎನ್ನುತ್ತೀರಾ… ಬಿಜೆಪಿಯವರಿಗೂ ಗೊತ್ತಿದೆ ಅದಕ್ಕಾಗಿ ಅವರು ನಿತೀಶ್ ಕುಮಾರ್ ಗೆ ಭಾರತ ರತ್ನ ಕೊಡಬೇಕು ಎನ್ನುವ ಮಾತನ್ನು ಹೊರಗೆ ಹಾಕಿದ್ದು, ಭಾರತ ರತ್ನದಂತಹ ಉನ್ನತ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವದಿಂದ ಅವರನ್ನ ರಾಜಕೀಯದಿಂದ ಹೊರ ತಳ್ಳುವ ಉದ್ದೇಶ ಅವರದು.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯನ್ನು ಮಾಡಿದಂತೆ, ಏಕನಾಥ ಶಿಂಧೆಯನ್ನು ಮಾಡಿದಂತೆ ಬಿಹಾರಲ್ಲಿ ನಿತೀಶ್ ಕುಮಾರ್ ರವರು ಮಾಡುವಂತಿಲ್ಲ. ಹಾಗೆ ಮಾಡಿದರೆ ನಿತೀಶ್ ಕುಮಾರರ ಓಟು ಬ್ಯಾಂಕನ್ನು ಬಿಜೆಪಿಯ ತೆಕ್ಕೆಯಲ್ಲಿ ಹಾಕಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿ ಗೌಜಿ ಗದ್ದಲದೊಂದಿಗೆ ಭಾರತ ರತ್ನವನ್ನು ನೀಡಿ ನಿತೀಶ್ ಕುಮಾರ್ ಗೆ ವಿದಾಯ ಹೇಳುವ, ಆ ಮೂಲಕ ಅವರ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ತರೆಮರೆಯಲ್ಲಿ ನಡೆಯುತ್ತಿವೆ. ಭಾರತ ರತ್ನದ ಪದಕ ಅವರ ಕೈಯಲ್ಲಿ ಕೊಟ್ಟು ಮುಖ್ಯಮಂತ್ರಿಯ ಹುದ್ದೆಯನ್ನು ಕಸಿದುಕೊಳ್ಳುವ, ಅಲ್ಲಿ ಬಿಜೆಪಿಯವರನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳು ತರೆಮರೆಯಲ್ಲಿ ನಡೆಯುತ್ತಲೇ ಇವೆ.

✍️ಆರ್.ಎ.ಲೋಹಾನಿ, ಮಳಗಿ