ಇಸ್ರೇಲ್ ಬಹಿಷ್ಕಾರ: ಕುವೈಟ್‌ನ ವಿಭಿನ್ನ ಪ್ರಯೋಗ

0
583

ಸನ್ಮಾರ್ಗ ವಾರ್ತೆ

✍️ ವಿ.ಎ. ಕಬೀರ್

1972ರಲ್ಲಿ ನಾನು (ಈ ಲೇಖಕ) ಹಜ್‌ಗಾಗಿ ಸೌದಿ ಅರೇಬಿಯಕ್ಕೆ ಹೋಗಿದ್ದೆ. ಅಂದು ವಿಮಾನಕ್ಕೆ ಟಿಕೆಟ್ ದುಬಾರಿಯಾದುದರಿಂದ ದೊಡ್ಡ ಶ್ರೀಮಂತರು ಮಾತ್ರ ವಿಮಾನದಲ್ಲಿ ಹೋಗುತ್ತಿದ್ದರು. ಮೊಘಲ್ ಲೈನ್ಸ್ ಹಡುಗು ಸೇವೆಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿದ್ದರು. ಹಜ್ಜ್ ನ ಸಮಯ ಸಮೀಪಿಸುತ್ತಿರುವಾಗ ಅವರ ಜಾಹೀರಾತು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಡಗು ಮುಂಬಯಿ ಬಂದರಿನಿಂದ ಹೊರಡುತ್ತಿತ್ತು.

ಬಾಂಬೆಯಲ್ಲಿರುವ ವಕ್ಫ್ ವಸತಿಯಾದ ಸಾಬು ಸಿದ್ದಿಕಿ, ಮುಸಾಫಿರ್ ಖಾನಾದಲ್ಲಿ ಯಾತ್ರಾರ್ಥಿಗಳು ಉಚಿತವಾಗಿ ತಂಗಬಹುದು. ಟಿಕೆಟ್‌ಗೆ ಹಣ ನೀಡಿ ಊರಿನಿಂದ ಹೊರಡುವ ಯಾತ್ರಿಕರಿಗೆ ಅಗತ್ಯವಾದ ಪೇಪರ್ ವರ್ಕ್ ನ ಆಫೀಸ್ ಕೂಡಾ ಅಲ್ಲಿತ್ತು. ಆದರೆ ನಾನು ಅಲ್ಲಿ ತಂಗಿರಲಿಲ್ಲ. ಮುಂಬಯಿಯಲ್ಲಿ ಮರದ ವ್ಯಾಪಾರಿಯಾಗಿದ್ದ ಹತ್ತಿರದ ಸಂಬಂಧಿ ಮುಸ್ತಫಾರ ಫ್ಲಾಟ್‌ನಲ್ಲಿದ್ದೆ. ಅಂದು ಪ್ರಥಮವಾಗಿ ಪ್ರಯಾಣ ಆರಂಭಿಸಿದ ಎಸ್.ಎಸ್. ಅಕ್ಬರ್ ಎಂಬ ಹಡಗಿಗೆ ಹತ್ತುವ ವರೆಗಿನ ಎಲ್ಲಾ ಕೆಲಸವನ್ನು ಮುಸ್ತಫಾ ಮಾಡಿಕೊಟ್ಟಿದ್ದರು. ಇಷ್ಟೆಲ್ಲಾ ಉಪಕಾರ ಮಾಡಿದ ಅವರಿಗೆ ನನ್ನೊಡನೆ ಒಂದೇ ಬೇಡಿಕೆಯಿತ್ತು. ಮರಳಿ ಬರುವಾಗ ಇಂಡಟಿಮೇಟ್’ಎಂಬ ಬ್ರಾಂಡ್‌ನ ಸುಗಂಧ ದ್ರವ್ಯದ ಸ್ಪ್ರೆ ತರಬೇಕು ಎಂಬುದಾಗಿತ್ತು.

ಮಕ್ಕಾಕ್ಕೆ ತಲುಪಿ ಎಲ್ಲಾ ದಿವಸವೂ ಇಶಾ ನಮಾಝ್ ಮತ್ತು ತವಾಫ್ ಮುಗಿಸಿ, ವಸತಿ ಸ್ಥಳಕ್ಕೆ ಬರುವ ಮಧ್ಯೆ ಹರಮ್‌ನ ಪರಿಸರದಲ್ಲಿರುವ ಎಲ್ಲಾ ಸುಗಂಧ ದ್ರವ್ಯದ ಅಂಗಡಿಗೆ ಹತ್ತಿ ಇಳಿಯುತ್ತಿದ್ದೆ. ಆದರೆ ಯಾವುದೇ ಅಂಗಡಿಯಲ್ಲಿ ಇಂಟಿಮೇಟ್ ಬ್ರಾಂಡ್‌ನ ಸ್ಪ್ರೆ ಲಭ್ಯವಿರಲಿಲ್ಲ. ನನಗಾದರೋ ಅದರ ತೀರಾ ಅಗತ್ಯವಿತ್ತು. ಏಕೆಂದರೆ ನನಗೆ ಬಾಂಬೆಯಲ್ಲಿ ಅಷ್ಟೆಲ್ಲಾ ಸಹಾಯ ಮಾಡಿದ ಮುಸ್ತಫಾರ ಆ ಬೇಡಿಕೆಯನ್ನು ಈಡೇರಿಸದೆ ಅವರ ಮುಖವನ್ನು ನಾನು ಹೇಗೆ ನೋಡುವುದು? ಆದರೆ ಮಕ್ಕಾದ ಹೆಚ್ಚಿನೆಲ್ಲಾ ಅಂಗಡಿಗೆ ಹತ್ತಿ ಇಳಿದರೂ ನಿರಾಶೆಯೇ ಕಾದಿತ್ತು.

ಮದೀನಾಕ್ಕೆ ಹೋದಾಗಲೂ ನನ್ನ ಹುಡುಕಾಟ ಮುಂದುವರಿಯಿತು. ಹಲವು ಅಂಗಡಿಯಲ್ಲಿ ನೋಡಿದರೂ ಇಂಟಿಮೇಟ್’ ಸಿಗಲೇ ಇಲ್ಲ. ಒಂದು ದಿನ ಒಬ್ಬ ವ್ಯಾಪಾರಿ `ಇಂಟಿಮೇಟ್’ ಎಂದು ನಾನು ಹೇಳಿದ ಕೂಡಲೇ ನನ್ನನ್ನು ಒಂದು ರೀತಿಯಲ್ಲಿ ಕೆಕ್ಕರಿಸಿ ನೋಡಿದ. ಕಾರಣ ಕೇಳಿದಾಗ ಸ್ವಲ್ಪ ದೊಡ್ಡ ದ್ವನಿಯಲ್ಲಿ ಹೇಳಿದ: “ಮಮ್‌ನೂಅï, ಮಂನೂಅï-ಇಸ್ರಾಯೇಲಿ. ಇದು ನಿಷೇಧಿತ ಇಸ್ರೇಲಿ ಉತ್ಪನ್ನ ಎಂದಾಗಿತ್ತು ಅವನ ಉತ್ತರ. ಇದರೊಂದಿಗೆ ನನ್ನ ಹುಡುಕಾಟವನ್ನು ನಿಲ್ಲಿಸಿದೆ.

ಬಾಯ್ಕಾಟ್ ಆಫೀಸುಗಳು
ಅದು ಇಸ್ರೇಲೀ ಉತ್ಪನ್ನಗಳಿಗೆ ಅರಬ್ ದೇಶಗಳಲ್ಲಿ ಬಹಳ ಕಟ್ಟುನಿಟ್ಟಾಗಿ ಬಹಿಷ್ಕಾರವಿದ್ದ ಕಾಲವಾಗಿತ್ತು. ಅಲ್ಲಿ ಇಸ್ರೇಲೀ ಉತ್ಪನ್ನಗಳನ್ನು ಪತ್ತೆಹಚ್ಚಿ, ಅದರ ಪಟ್ಟಿ ಮಾಡಿ ವ್ಯಾಪಾರಿಗಳನ್ನು ಪ್ರಜ್ಞಾವಂತರನ್ನಾಗಿ ಮಾಡಲು ಪ್ರತ್ಯೇಕ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. 1987'ರಲ್ಲಿ ಕತಾರ್‌ನಲ್ಲಿ ಕೆಲಸ ಸಿಕ್ಕಿದಾಗ ಸುಖ್‌ಫಾಲ’ದಲ್ಲಿ ಇಂಥದ್ದೊಂದು ಸೈನ್ ಬೋರ್ಡ್ ಇರುವ ಆಫೀಸ್ ಕಟ್ಟದ ನೋಡಿದ ನೆನಪು. ಇಸ್ರೇಲ್ ಟ್ರೇಡ್ ಸೆಂಟರ್‌ಗೆ ಅನುಮತಿ ನೀಡಿದ ಬಳಿಕ ಕತಾರ್‌ನಲ್ಲಿ ಬಾಯ್ಕಾಟ್ ಆಫೀಸ್‌ಗಳೂ ಕಾಣೆಯಾದದ್ದು ಸ್ವಾಭಾವಿಕ. ಈಜಿಪ್ಟ್‌ನ ಅನ್ವರ್ ಸಾದಾತ್‌ರ ಸಿನಾಯ್ ಒಪ್ಪಂದ ಮತ್ತು ಗಲ್ಫ್ ನ ಅಬ್ರಹಾಮಿಕ್ ಒಪ್ಪಂದದ ನಂತರ ಸರ್ಕಾರಿ ವಿಳಾಸದ ಬಹಿಷ್ಕಾರವೆಲ್ಲವೂ ಇಸ್ರೇಲ್‌ನೊಂದಿಗೆ ಸೇರಿ ರಚಿಸಲಿರುವ `ಹೊಸ ಮಧ್ಯಪ್ರಾಚ್ಯ ಸ್ವರ್ಗ’ದಲ್ಲಿ ಸಮಾಧಿಯಾಗಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ.

ಟೋಮಿ ಮ್ಯಾಥ್ಯೂರ ಫೆಲೆಸ್ತೀನೀ ಆಲೀವ್
ರಸಗೊಬ್ಬರ ಮತ್ತು ಕೀಟನಾಶಕ ಇಲ್ಲದ ಶುದ್ಧ ಉತ್ಪನ್ನಗಳಿಗೆ ಹೆಸರಾಗಿದ್ದ ಕೋಯಿಕೋಡ್ ಎಲಮೆಂಟ್ ಎಂಬ ಸಂಸ್ಥೆಯ ಮಾಲಕನ ಹೆಸರು ಟೋಮಿ ಮ್ಯಾಥ್ಯೂ. ಅವರು ಫೆಲೆಸ್ತೀನಿ ಐಕ್ಯತೆಯ ಭಾಗವಾಗಿ ಫೆಲೆಸ್ತೀನ್ ಉತ್ಪನ್ನ ಆಲೀವ್ ಎಣ್ಣೆಯ ಮಾರಾಟ ಆರಂಭಿಸಲು 2016ರಲ್ಲಿ ಒಂದು ಇಫ್ತಾರ್ ಪಾರ್ಟಿ ಏರ್ಪಡಿಸಿದರು. ಇಫ್ತಾರ್‌ಗೆ ತಯಾರಿಸಿದ ಖಾದ್ಯಗಳ ವಿಶೇಷತೆ ಏನೆಂದರೆ ಅದನ್ನು ಆಲಿವ್ ಎಣ್ಣೆಯಿಂದ ಕಾಯಿಸಲಾಗಿತ್ತು. ಇಷ್ಟವಿದ್ದವರು ಆಲಿವ್ ಎಣ್ಣೆಯನ್ನು ಖರೀದಿಸಲು ಮಾರಾಟವೂ ಇತ್ತು. ಆ ಇಫ್ತಾರ್ ಕೂಟಕ್ಕೆ ನನಗೂ ಆಮಂತ್ರಣವಿತ್ತು. ತುಂಬಾ ಕಾಲ ಗಲ್ಫ್ ನಲ್ಲಿದ್ದರೂ ಫೆಲೆಸ್ತೀನ್ ಆಲಿವ್ ಎಣ್ಣೆ ಅಥವಾ ಎಣ್ಣೆಯನ್ನು ಅದುವರೆಗೂ ನಾನು ಕಂಡಿರಲಿಲ್ಲ. ಸ್ಪೇನ್‌ನಿಂದ ಆಮದು ಮಾಡಿದ ಬ್ರಾಂಡ್ ನಮಗೆ ಮಾರಾಟ ಕೇಂದ್ರದಲ್ಲಿ ಕಾಣಲು ಖರೀದಿಸಲು ಸಿಗುತ್ತಿತ್ತು. ಟೋಮಿ ಇದನ್ನು ಹೇಗೆ ಪಡೆದುಕೊಂಡರು ಎಂಬ ಕುತೂಹಲದಿಂದ ವಿಷಯವನ್ನು ಅವರೊಡನೆ ನಾನು ಪ್ರಸ್ತಾವಿಸಿದೆ. ತನಗೆ ಫೆಲೆಸ್ತೀನಿ ಉತ್ಪನ್ನವೇ ಬೇಕೆಂಬ ಆಸೆಯಿತ್ತೆಂದೂ, ತುಂಬಾ ಹುಡುಕಾಟದ ಬಳಿಕ ಒಮನ್‌ನ ಒಂದು ಮಾರಾಟ ಕೇಂದ್ರದಲ್ಲಿ ದೊರೆಯಿತೆಂದೂ ಟೋಮಿ ತಿಳಿಸಿದರು. ಅದು ಅಸಲಿ ಫೆಲೆಸ್ತೀನಿ ಉತ್ಪನ್ನವೆಂದು ತತ್ಕಾಲಕ್ಕೆ ನಂಬಿದರೂ, ಸಂಶಯ ಮನದಲ್ಲಿ ಕೊರೆಯುತ್ತಲೇ ಇತ್ತು. ಏಕೆಂದರೆ ಅದು ಇಸ್ರೇಲಿನಿಂದ ನುಸುಳಿದ ನಕಲಿಯಾಗಿರುವ ಸಾಧ್ಯತೆಯೂ ಇದೆ. ಇಸ್ರೇಲಿನ ಹಣ್ಣು ಹಂಪಲುಗಳನ್ನು ಜೋರ್ಡಾನ್‌ನ ಸ್ಟ್ಯಾಂಪ್ ನೊಂದಿಗೆ ಗಲ್ಫ್ ಮಾರುಕಟ್ಟೆಗೆ ತಲುಪಿಸಿದ ಕಥೆಗಳು ಅದಕ್ಕೆ ಹೆಚ್ಚಿನ ಬಲ ನೀಡಿತ್ತು.

ಫ್ರೆಂಡ್ಸ್ ಆಫ್ ಪೀಸ್ ಬಹಿಷ್ಕಾರ ಮ್ಯೂಸಿಯಂ
ಕುವೈಟ್‌ನಲ್ಲಿ ತುಫಾನುಲ್ ಅಕ್ಸಾ’ದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಫ್ರೆಂಡ್ಸ್ ಆಫ್ ಪೀಸ್ ಬಹಿಷ್ಕಾರ ಮ್ಯೂಝಿಯಂ’ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದ ಬಗ್ಗೆ ಕುವೈಟ್‌ನ ಅಂಕಣಕಾರ ಸಾದಿಯಾ ಮುಫ್ರಿಹಿನ್ ಬರೆದ ಟಿಪ್ಪಣಿಯನ್ನು ಓದಿದಾಗ ಮೇಲಿನ ಎಲ್ಲಾ ಘಟನೆಗಳು ನೆನಪಾದವು.

ಫೆಲೆಸ್ತೀನಿಯನ್ನರಿಗೆ ಸಾಕಷ್ಟು ಸಹಾಯ ಮಾಡಿದ ದೇಶ ಕುವೈಟ್. ಕುವೈಟ್‌ನ ಸಹಾಯವನ್ನು ಫೆಲೆಸ್ತೀನಿಯನ್ನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಫೆಲೆಸ್ತೀನ್ ರಿಸರ್ಚ್ ಸೆಂಟರ್ ಕುವೈಟ್‌ನ ಸಹಾಯದಿಂದ ಕೆಲಸ ಮಾಡುತ್ತಿದೆಯೆಂಬುದು ನನ್ನ ನೆನಪು. ಕುವೈಟ್ ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗುವ ಅಲ್ ಅರಬಿ’ ಮಾಸಿಕದಲ್ಲಿ ಹಿಂದೆ ಪ್ರತಿ ಸಂಚಿಕೆಯಲ್ಲಿ ಇಸ್ರೇಲಿ ವಿರೋಧಿ ಅಂಕಣ ಪ್ರಕಟವಾಗುತ್ತಿತ್ತು. ಕುವೈಟ್‌ನಲ್ಲಿ ಒಂದು ವಿಮಾನ ಅಪಹರಿಸಲ್ಪಟ್ಟಾಗ ಅದರ ಹಿಂದೆ ಇರಾನ್‌ನ ಕೈವಾಡವಿದೆ ಎಂದು ಆರೋಪಿಸಿ ಪಿ.ಎಲ್.ಒ. ಚೆಯರ್‌ಮೆನ್ ಯಾಸಿರ್ ಅರಫಾತ್ ಅವರು ಕುವೈಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ನೆನಪಿನಲ್ಲಿದೆ. ಸದ್ದಾಂ ಹುಸೈನ್ ಕುವೈಟನ್ನು ಆಕ್ರಮಿಸಿದ ಸಂದರ್ಭಲ್ಲಿ ಪಿ.ಎಲ್.ಓ. ಇರಾಕ್‌ಗೆ ಬೆಂಬಲ ನೀಡಿದಂದಿನಿಂದ ಕುವೈತ್-ಫೆಲೆಸ್ತೀನ್ ಸಂಬಂಧ ಹದಗೆಟ್ಟಿತು. ನಂತರ ಹಲವು ಕಾಲಗಳವರೆಗೆ ಕುವೈತ್ ಸರಕಾರ ಮತ್ತು ನಾಯಕರು ಫೆಲೆಸ್ತೀನನ್ನು ನಿರ್ಲಕ್ಷಿಸಿದ್ದರು. ಇದನ್ನು ಅಂದಿನ ಮುಖ್ಯ ಲೇಖಕ ಹಾಫಿಲು ಶೈಖ್‌ರು ಫೆಲೆಸ್ತೀನ್ ನೇತೃತ್ವದ ತಪ್ಪಿಗೆ ಫೆಲೆಸ್ತೀನೀ ಜನತೆಯನ್ನು ಶಿಕ್ಷಿಸುವುದು ಅನ್ಯಾಯವೆಂದು ಬರೆದಿದ್ದರು.

ಕುವೈಟ್‌ನ ಮನಸ್ಸಿನಿಂದ ಫೆಲೆಸ್ತೀನ್ ಸಮಸ್ಯೆಯು ಮಾಯವಾಗಿಲ್ಲವೆಂಬುದಕ್ಕೆ ಫ್ರೆಂಡ್ಸ್ ಆಫ್ ಪೀಸ್ ಎಂಬ ವೇದಿಕೆ ಉದಾಹರಣೆಯಾಗಿತ್ತು. ಝಿಯೋನಿಸ್ಟ್ ಆಡಳಿತಕ್ಕೆ ಸಹಾಯ ಮಾಡುವವರ ಉತ್ಪನ್ನಗಳನ್ನು ನಿಷೇಧಿಸುವುದು, ಫೆಲೆಸ್ತೀನನ್ನು ಬೆಂಬಲಿಸುವವರ ಉತ್ಪನ್ನಗಳಿಗೆ ಬೆಂಬಲ ನೀಡುವುದು ಎಂಬ ಎರಡು ಉದ್ದೇಶದೊಂದಿಗೆ ಈ ವೇದಿಕೆ ಕಾರ್ಯ ನಿರ್ವಹಿಸುತ್ತದೆ. ಬಿ.ಡಿ.ಎಸ್. (ಬಾಯ್ಕಾಟ್, ಡೀನ್‌ವೆಸ್ಟ್ಮೆಂಟ್, ಸಾಂಗ್ಶನ್) ಎಂಬ ಚಳವಳಿ ಅರಬ್ ಪ್ರಪಂಚದ ಹೊರಗೆ ಸಕ್ರಿಯವಾಗಿದೆ. ಅದರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಲೇಖಕರಿಂದ ತೊಡಗಿ ವಿಶ್ವದ ಹಲವು ಭಾಗಗಳ ಕಲಾವಿದರು ಮತ್ತು ಸಾಮಾಜಿಕ ಹೋರಾಟಗಾರರು ಇದ್ದಾರೆ. ಅರಬ್ ಲೋಕದಲ್ಲಿ ಈಗ ಸರ್ಕಾರಿ ಮಟ್ಟದಲ್ಲಿ ಬಹಿಷ್ಕಾರ ಕೊನೆಗೊಂಡಿದ್ದರೂ, ಜನರಲ್ಲಿ ಅದನ್ನು ವಿಸ್ತರಿಸುವ ಪ್ರಯತ್ನದಲ್ಲಿ ಕುವೈಟ್‌ನ ಅಸ್‌ದಿಖಾಉಸ್ಸಲಾಮ್ ಅಥವಾ ಫ್ರೆಂಡ್ಸ್ ಆಫ್ ಪೀಸ್’ ಇದೆ.

ಈ ಕಲ್ಪನೆಯ ಬೆಂಬಲಿಗರ ಸಭೆಯು ಕುವೈತ್‌ನಲ್ಲಿ ನಡೆಯಿತು. ಎರಡು ಗಂಟೆಗಳಷ್ಟು ದೀರ್ಘವಾಗಿದ್ದು ಆಹ್ವಾನಿತರ ಈ ಸಭೆಯು ಸ್ವಯಂ ರೂಪುಗೊಂಡ ಬಹಿಷ್ಕಾರವನ್ನು ಹೇಗೆ ಬಲಪಡಿಸಬಹುದು ಎಂದು ಚರ್ಚೆ ನಡೆಯಿತು. ಸಭೆ ಮುಕ್ತಾಯಗೊಂಡಾಗ ಅಲ್ಲಿ ಒಂದು `ಬಹಿಷ್ಕಾರ ಮ್ಯೂಝಿಯಂ’ನ್ನು ಸಂದರ್ಶಿಸುವ ಅವಕಾಶ ನೀಡಲಾಯಿತು. ಅರಬ್ ಲೋಕದ ಹೊರಗೆ ಮತ್ತು ಒಳಗಿನ ಕಲಾವಿದರ ಕಲಾ ರೂಪಕಗಳನ್ನು ಅಲ್ಲಿ ಪ್ರದರ್ಶಿಸಲಾಗಿತ್ತು. ಪ್ರತಿಯೊಂದು ಕಲಾ ಕೃತಿಯ ಮುಂದೆಯೂ ಅದರ ಶಿಲ್ಪಿಗಳು ವಿವರಿಸಿಕೊಡಲು ನಿಂತಿದ್ದರು.

ಪ್ರದರ್ಶನದಲ್ಲಿ ಫೆಲೆಸ್ತೀನಿಗೆ ಸಂಬಂಧಪಟ್ಟದ್ದು ಮಾತ್ರವಲ್ಲ, ಬಹಿಷ್ಕಾರದ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ಸಿದ್ಧಪಡಿಸಲಾಗಿತ್ತು. ಪ್ರದರ್ಶನ ಹಾಲ್‌ನ ಸುತ್ತಲೂ ಆಲಿವ್ ಮರಗಳನ್ನು ನಿಲ್ಲಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಸ್ವಾಗತಿಸಲು ಆಲಿವ್ ಮರದ ಬಳಿ ಕಲಾವಿದೆ ಫರಹ್ ಬಸ್ತಕೀ ನಿಂತಿದ್ದರು. ಸಂದರ್ಶಕರು ಗಾಝಾದ ತಮ್ಮ ಅನುಭವವನ್ನು ಮತ್ತು ಫೆಲೆಸ್ತೀನ್ ಸಮಸ್ಯೆಯ ಕುರಿತು ತಮ್ಮ ಭಾವನೆಯನ್ನು ಸೂಚಿಸುವ ಪದಗಳನ್ನು ಬರೆದೇ ಮುಂದೆ ಸಾಗಬೇಕಾಗಿತ್ತು.
ಕಾರ್ಯಕ್ರಮವನ್ನು ಬಹಿಷ್ಕಾರ ವೇದಿಕೆಯ ಸ್ಥಾಪಕ ಸಾಲಿಹ್ ರುಶೈದಿ ನಡೆಸಿಕೊಟ್ಟರು. ಗಾಝಾ ನಿವಾಸಿಗಳ ಸಹಾಯಕ್ಕೆ ಹೋಗಿದ್ದ ಕುವೈತ್‌ನ ಪ್ರತಿನಿಧಿ ತಂಡದ ಮುಹಮ್ಮದ್ ಕನ್ಝರಿ, ಉಮರ್ ಥುವೈನಿ ಎಂಬವರೊಂದಿಗೆ ಅವರು ತಮ್ಮ ಗಾಝಾ ಅನುಭವವನ್ನು ಹಂಚಿಕೊಂಡರು. ಆ ಅನುಭವ ಕಥನಗಳು ಸಾಮಾನ್ಯ ಮಾಧ್ಯಮಗಳ ಹಾಗೂ ಸೋಶಿಯಲ್ ಮೀಡಿಯಾ ವಿವರಣೆಗಳಿಗಿಂತ ವಿಭಿನ್ನವಾಗಿದ್ದು ಹೃದಯವನ್ನು ತಟ್ಟುವಂತಿತ್ತು ಎಂದು ಅದರಲ್ಲಿ ಭಾಗವಹಿಸಿದ್ದ ಅಂಕಣಗಾರ್ತಿ ಸಅï‌ದಿಯಾ ಬರೆದಿದ್ದರು. ಬಹಿಷ್ಕಾರವನ್ನು ಹೇಗೆ ಫಲಪ್ರದಗೊಳಿಸಬಹುದು ಎಂಬ ಬಗ್ಗೆ ಆ್ಯಕ್ಟಿವಿಸ್ಟ್ ಅಬೂತಲ್ಹಾ ಮಾತನಾಡಿದರು. ಬಹಿಷ್ಕಾರವನ್ನು ಬೆಂಬಲಿಸುವವರಿಗೆ ಪರಸ್ಪರ ಪರಿಚಯ ಪಡಲು ಮತ್ತು ಸಂವಾದ ನಡೆಸಲು ಈ ಸಂಗಮ ಏರ್ಪಡಿಸಲಾಗಿತ್ತು.

ಹೆಚ್ಚಿನ ಅತಿಥಿಗಳು ಎಲ್ಲಾ ವಿಷಯಗಳಲ್ಲೂ ವಿಭಿನ್ನ ದೃಷ್ಟಿಕೋನವನ್ನು ಹೊಂದಿದವರಾಗಿದ್ದರು. ಫೆಲೆಸ್ತೀನ್ ಅವರನ್ನು ಒಂದುಗೂಡಿಸಿದ ಏಕೈಕ ವಿಷಯವಾಗಿತ್ತು. ಅತಿಥಿಗಳನ್ನು ಪರಿಚಯಿಸಿದ ಸಂಘಟಕರಾದ ರುಶೈದಿ ಸಮಾರೋಪದಲ್ಲಿ ಹೀಗೆ ಹೇಳಿದರು: “ವ್ಯಕ್ತಿಗಳಾಗಿ ಜಗತ್ತನ್ನು ಬದಲಾಯಿಸಲು ನಮ್ಮಲ್ಲಿ ಹೆಚ್ಚು ಶಕ್ತಿ ಇಲ್ಲದಿರಬಹುದು. ಫೆಲೆಸ್ತೀನ್‌ನಿಂದ ದೂರವಿರುವ ನಮ್ಮಲ್ಲಿ ಹೆಚ್ಚಿನವರಿಗೆ ಫೆಲೆಸ್ತೀನ್‌ಗೆ ಸಹಾಯ ಮಾಡಲು ಸಾಧ್ಯವಾಗದಿರಬಹುದು. ಹಾಗಿದ್ದರೂ ನಾವು ನಮ್ಮ ಸಂದೇಶಗಳನ್ನು ಫೆಲೆಸ್ತೀನ್ ಜನತೆಗೆ ತಲುಪಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ. ಇದು ಇಸ್ರೇಲ್ ನಡೆಸುತ್ತಿರುವ ಭೀಕರ ನರಬೇಟೆಯ ವಿರುದ್ಧ ಮೌನವಾಗಿರುವ ಅರಬ್ ದೇಶಗಳ ವಿರುದ್ಧ ಪ್ರತಿಭಟನೆಯ ಪ್ರತೀಕವಾಗಿತ್ತು.