✍️ ಅಮಾನ್ ಕೆ
ಬೆಳಗಾವಿಯ ಸುಳೇಭಾವಿಯಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನಾಜಿಯಾ ಇಲಾಹಿ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಜನವರಿ 19ರಂದು ಈಕೆ ಅತ್ಯಂತ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು.
ಮುಸ್ಲಿಂ ಮಹಿಳೆಯರು ತಲಾಕ್ ಕೊಟ್ಟು ಹಿಂದು ಧರ್ಮ ಸೇರಲಿ. ಆ ಲುಂಗಿ ಸಾಬನನ್ನು ಬಿಟ್ಟು ಹಿಂದೂ ಧರ್ಮಕ್ಕೆ ಬಂದರೆ ನಿಮಗೆ ಮದುವೆ ಮಾಡಿ ಹನಿಮೂನ್ ಗೆ ಕಳುಹಿಸಿ ಸಿಂಧೂರ ನೀಡಿ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ ಎಂದು ಮುಸ್ಲಿಂ ಮಹಿಳೆಯರಿಗೆ ಕರೆ ನೀಡಿದ್ದರು.
ನಿಮ್ಮನ್ನು ಬೋನಸ್ ಆಗಿ ಹನಿಮೂನ್ ಗೂ ಕಳುಹಿಸಿ ಕೊಡುತ್ತೇವೆ ಎಂದು ಕೂಡ ಅವರು ಹೇಳಿದ್ರು. ಯದ್ದಲ ಬಾವಿ ಹಟ್ಟಿ ರಸ್ತೆಯಲ್ಲಿರುವ ಹುಲಿಯಮ್ಮನ ತೋಟದಲ್ಲಿ ಧನಂಜಯ ಜಾದವ್ ಪರಿವಾರದ ವತಿಯಿಂದ ನಡೆದ ಧರ್ಮ ರಕ್ಷಣೆಗಾಗಿ ಹಿಂದೂಗಳ ಸ್ನೇಹ ಭೋಜನ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು ಆಡಿದ್ದರು.
ಅದರ ಬೆನ್ನಿಗೆ ಸ್ಥಳೀಯ ಮುಸ್ಲಿಮರು ಪೊಲೀಸ್ ಠಾಣೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಕೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದರು.
ಅಂದಹಾಗೆ ಈ ನಾಜಿಯಾ ಇಲಾಹಿ ಖಾನ್ ಗೆ ವಿವಾದಗಳು ಹೊಸತಲ್ಲ. ಜನವರಿ 5ರಂದು ದೆಹಲಿಯ ರೋಹಿಣಿಯಲ್ಲಿ ಚೇತನ ಎಂಬ ಹಿಂದೂ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ತೀವ್ರವಾಗಿ ನಿಂದಿಸಿದ್ದರು.
ಮುಸ್ಲಿಮರಲ್ಲಿ ಶಿಕ್ಷಣ ಪಡೆಯುವಂತೆ ನೀವು ಹೇಳಿ ನೋಡಿ, ಅವರು ಕೇಳೋದಿಲ್ಲ. ಮುಸ್ಲಿಮರಲ್ಲಿ ಸಾಹಿತ್ಯವನ್ನು ಓದುವಂತೆ ಹೇಳಿ, ಅವರು ಓದಲ್ಲ. ಮಾನವೀಯತೆಯನ್ನ ಬೆಳೆಸಿಕೊಳ್ಳಿ ಅಂತ ನೀವು ಹೇಳಿದ್ರೂ ಅವರು ಕೇಳಲ್ಲ. ಆದರೆ ರೇಪ್ ಮಾಡಿ ಎಂದು ಹೇಳಿದ್ರೆ ತಕ್ಷಣ ಅವರು ರೆಡಿಯಾಗ್ತಾರೆ. ಲವ್ ಜಿಹಾದ್ ಮಾಡಿ ಅಂತ ಹೇಳಿದ್ರೆ ತಕ್ಷಣ ಅದನ್ನ ಮಾಡ್ತಾರೆ. ಬಾಂಬು ಬುಲೆಟ್ಟು ಮತ್ತು ಸ್ಪೋಟಕಗಳನ್ನೆಸೆಯಲು ಅವರು ಸದಾ ತಯಾರಿರ್ತಾರೆ ಎಂದು ರೋಹಿಣಿಯಲ್ಲಿ ಅವರು ಮಾಡಿದ ಭಾಷಣದಲ್ಲಿ ಹೇಳಿದ್ದರು. ಇದರ ವಿರುದ್ಧ ಸಿಟಿಝನ್ಸ್ ಫೋರ್ ಜಸ್ಟಿಸ್ ಅಂಡ್ ಪೀಸ್ ಸಂಘಟನೆಯು ದೆಹಲಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಹಾಗಂತ ಈ ನಾಜಿಯಾ ಇಲಾಹಿ ಖಾನ್ ಯಾರು ಗೊತ್ತೆ? ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಆಗುವುದಕ್ಕಿಂತ ಮೊದಲು ಅವರು ತೃಣಮೂಲ ಕಾಂಗ್ರೆಸ್ಸಿನಲ್ಲಿ ಇದ್ರು. ಅಲ್ಲಿಯೂ ವಕ್ತಾರೆ ಆಗಿದ್ದರು. ತನ್ನ 20ನೇ ವಯಸ್ಸಿನಲ್ಲಿಯೇ ಗಂಡನನ್ನು ಕಳಕೊಂಡ ಈಕೆ ಸಾರ್ವಜನಿಕವಾಗಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡದ್ದು ಇಶ್ರತ್ ಜಹಾನ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರತಿನಿಧಿಸಿದ ಸಂದರ್ಭದಲ್ಲಿ. ತ್ರಿವಳಿ ತಲಾಕ್ ನ ವಿರುದ್ಧ ಇಶ್ರತ್ ಜಹಾನ್ ಸುಪ್ರೀಂ ಕೋರ್ಟ್ ನ ಮೆಟ್ಟಲು ಏರಿದಾಗ ಅವರಿಗೆ ವಕೀಲರಾಗಿದ್ದದ್ದೇ ಈ ನಾಜಿಯಾ ಇಲಾಹಿ. ತೃಣಮೂಲ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹಾರಿದ ನಾಜಿಯ ಅಲ್ಲಿಯೂ ರಾಷ್ಟ್ರೀಯ ವಕ್ತಾರೆಯಾಗಿ ನೇಮಕವಾದರು. ಈಗ ಈಕೆಗೆ 16 ವರ್ಷದ ಮಗನಿದ್ದಾನೆ.
ವ್ಯಕ್ತಿಯೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ 2021 ರಲ್ಲಿ ಇವರು ಬಂಧನಕ್ಕೆ ಒಳಗಾಗಿದ್ದರು. 2024ರ ಆಗಸ್ಟ್ ನಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು ಮತ್ತು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಇವರಿಗೆ ಜಾಮೀನು ನೀಡಿದ ಕಾರಣಕ್ಕಾಗಿ ಬಂದನದಿಂದ ತಪ್ಪಿಸಿಕೊಂಡಿದ್ದರು. ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಮ್ ನ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಈ ಪ್ರಕರಣ ದಾಖಲಾಗಿತ್ತು.
ಇದೆ ವೇಳೆ ಭಾರತೀಯ ಟ್ವೆಂಟಿ ಕ್ರಿಕೆಟ್ ನ ಆಟಗಾರ ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಜೊತೆಗಿನ ಜಟಾಪಟಿಯ ಕಾರಣಕ್ಕಾಗಿಯೂ ಈಕೆ ಗಮನ ಸೆಳೆದಿದ್ದರು. ನಾಜಿಯಾ ಇಲಾಹಿ ಅವರು ಪ್ರವಾದಿಯನ್ನು ಮತ್ತು ಇಸ್ಲಾಮನ್ನು ನಿಂದಿಸ್ತಾ ಇದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಂಜುಮ್ ಖಾನ್ ಬರೆದಿದ್ದರು. ಆ ಬಳಿಕ ಅದು ಚರ್ಚೆಗೆ ಒಳಗಾಗಿತ್ತು.
ಪ್ರಶ್ನೆ ಇರೋದು ಈ ನಾಜಿಯ ಇಲಾಹಿಯ ಕುರಿತಲ್ಲ ಆಕೆಯನ್ನು ರಾಷ್ಟ್ರೀಯ ವಕ್ತಾರೆಯನ್ನಾಗಿ ಮಾಡಿದ ಬಿಜೆಪಿಯ ನಿಲುವು ಏನು ಅನ್ನುವುದು ಇಲ್ಲಿ ಮುಖ್ಯ. ಮುಸ್ಲಿಮರನ್ನು ಇಸ್ಲಾಮನ್ನು ಮತ್ತು ಪ್ರವಾದಿಯನ್ನು ತನ್ನ ಭಾಷಣಗಳಲ್ಲಿ ನಿಂದಿಸುತ್ತ ಮತ್ತು ಪ್ರಶ್ನಿಸುತ್ತ ಸಾಗುವ ಈಕೆಯ ನಡೆಯನ್ನು ಬಿಜೆಪಿ ಸಮರ್ಥಿಸುತ್ತದೆಯೇ ಅನ್ನೋದೇ ಮುಖ್ಯ ಪ್ರಶ್ನೆ ಬಿಜೆಪಿ ಈವರೆಗೆ ಆಕೆಯ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ರಾಷ್ಟ್ರೀಯ ವಕ್ತಾರೆಯ ಸ್ಥಾನದಿಂದ ಆಕೆಯನ್ನು ಉಚ್ಚಾಟನೆಗೊಳಿಸಿಲ್ಲ ಇದರ ಅರ್ಥವೇನು? ಬಿಜೆಪಿ ಆಕೆ ಆಡುತ್ತಿರುವ ಮಾತನ್ನು ಸಮರ್ಥಿಸ್ತಾ ಇದೆಯೇ? ಬೆಂಬಲಿಸ್ತಾ ಇದೆಯೇ? ಪರೋಕ್ಷವಾಗಿ ಆಕೆಗೆ ಮುಸ್ಲಿಂ ವಿರೋಧಿ ಭಾಷಣಗಳನ್ನು ಮಾಡುವುದಕ್ಕೆ ಕುಮ್ಮಕ್ಕು ನೀಡ್ತಾ ಇದೆಯೇ? ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಸ್ಲೋಗನ್ ಏನೇ ಇರಲಿ ಬಿಜೆಪಿ ಆಂತರಿಕವಾಗಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ತೀವ್ರವಾಗಿ ವಿರೋಧಿಸುತ್ತಾ ಇದೆ ಅನ್ನೋದನ್ನು ಅದೀಗ ಪಾಲಿಸ್ತಾ ಬರುತ್ತಿರುವ ಮೌನವೇ ಸೂಚಿಸುತ್ತದೆ. ಅಲ್ಲ ಎಂದಾದರೆ ನಾಜಿಯಾಳ ಮೇಲೆ ಕ್ರಮ ಕೈಗೊಂಡು ಅದು ಭಾರತೀಯ ಮುಸ್ಲಿಮರಿಗೆ ತನ್ನ ಸಬ್ ಕಾ ಸಾಥ್ ಸ್ಲೋಗನನ್ನು ಪ್ರಾಯೋಗಿಕವಾಗಿ ರುಜುವಾತು ಪಡಿಸಬೇಕಾಗಿದೆ












