ಸನ್ಮಾರ್ಗ ವಾರ್ತೆ
ಹಿಝ್ಬುಲ್ಲಾದ ಉನ್ನತ ನಾಯಕ ಶೈಖ್ ಮುಹಮ್ಮದ್ ಅಲಿ ಹಮಾದಿ ಅವರನ್ನು ಅಜ್ಞಾತ ಬಂದೂಕು ಧಾರಿಗಳು ಗುಂಡಿಟ್ಟು ಸಾಯಿಸಿದ್ದಾರೆ. ಲೆಬನಾನಿನಲ್ಲಿರುವ ಅವರ ಮನೆಯ ಹತ್ತಿರವೇ ಈ ಹತ್ಯೆ ನಡೆದಿದೆ. ಲೆಬನಾನಿನ ಉತ್ತರ ಭಾಗದ ಅಲ್ ಬಕ್ಕದಲ್ಲಿ ಇವರು ಹಿಸ್ಬುಲ್ಲಾದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈ ದಾಳಿಯ ಹೊಣೆಗಾರಿಕೆಯನ್ನು ಯಾರೂ ವಹಿಸಿಕೊಂಡಿಲ್ಲ. ಅಮೆರಿಕಾದ ಗುಪ್ತಚರ ಸಂಸ್ಥೆ ಎಫ್ ಬಿ ಐಯ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಇದ್ದ ವ್ಯಕ್ತಿಯಾಗಿದ್ದರು ಈ ಹಮಾದಿ. 153 ಮಂದಿ ಪ್ರಯಾಣಿಕರನ್ನು ಅತೆನ್ಸ್ ನಿಂದ ರೋಮ್ ಗೆ ಕೊಂಡೊಯ್ಯುತ್ತಿದ್ದ ಲಿಫ್ತಾನ್ಸ್ ವಿಮಾನವನ್ನು ಈ ಹಿಂದೆ ಅಪಹರಿಸಲಾಗಿತ್ತು. ಅದರ ಆರೋಪವನ್ನು ಅಮೆರಿಕಾ ಈ ಹಮಾದಿಯ ಮೇಲೆ ಹೋರಿಸಿತ್ತು. ಮತ್ತು ಆ ಕಾರಣಕ್ಕಾಗಿಯೇ ಅವರನ್ನು ವಾಂಟೆಡ್ ಪಟ್ಟಿಯಲ್ಲಿ ಸೇರಿಸಿತ್ತು.
ಇಸ್ರೇಲ್ ಮತ್ತು ಹಿಝ್ಬುಲ್ಲ ನಡುವೆ 60 ದಿನಗಳ ಕದನ ವಿರಾಮ ಒಪ್ಪಂದ ಮುಗಿಯುವುದಕ್ಕೆ ದಿನಗಳಷ್ಟೇ ಉಳಿದಿರುವಾಗ ಈ ಹತ್ಯೆ ನಡೆದಿದೆ. ಜನವರಿ 26ರ ಮೊದಲು ಲೆಬನಾನಿನಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂಪಡೆಯಬೇಕು ಮತ್ತು ಇಸ್ರೇಲ್ ನ ಗಡಿಯಿಂದ ಲಿತಾನಿ ನದಿಯ ಪಶ್ಚಿಮ ಭಾಗಕ್ಕೆ ಹಿಝ್ಬುಲ್ಲಾ ಹೊರಟು ಹೋಗಬೇಕು ಎಂಬುದಾಗಿ ಒಪ್ಪಂದದಲ್ಲಿ ಹೇಳಲಾಗಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 3700 ಮಂದಿ ಸಾವಿಗೀಡಾಗಿದ್ದರು.












