ಸನ್ಮಾರ್ಗ ವಾರ್ತೆ
✍️ಅಮಾನ್ ಕೆ
ಸಾವಿಗೆ ಸಂಭ್ರಮಿಸುವುದು ವಿಕೃತಿ. ಅದು ರಾಕ್ಷಸೀಯ ಗುಣ. ಇಂತಹ ಮಾತನ್ನು ಯಾಕೆ ಆಗಾಗ ಹೇಳಬೇಕಾಗುತ್ತದೆ ಎಂದರೆ ನಮ್ಮ ನಡುವೆ ಸಾವನ್ನು ಸಂಭ್ರಮಿಸುವ ವಿಕೃತರೂ ಇದ್ದಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ಥಾನದ ವೇಳೆ ಉಂಟಾದ ಸಾವು ನೋವಿನ ಹಿನ್ನೆಲೆಯಲ್ಲಿ ಇಂಥ ವಿಕೃತರನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ.
ಕಳೆದ ವರ್ಷ ಮಕ್ಕಾದಲ್ಲಿ ಹಜ್ ನ ವೇಳೆ ಸಾವಿರಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಹೆಚ್ಚಿನ ಸಾವುಗಳಿಗೆ ಕೆಂಡದಂಥ ಬಿಸಿಲು ಕಾರಣವಾಗಿತ್ತು. ಮುಖ್ಯವಾಗಿ ವೃದ್ಧರು ರೋಗಿಗಳು ಆ ಬಿಸಿಲಿನ ಹೊಡೆತವನ್ನು ತಾಳಲಾರದೆ ಅಸು ನೀಗಿದ್ದರು. ಹೀಗೆ ಸಾವಿಗೀಡಾದವರಲ್ಲಿ ಭಾರತದ ಸುಮಾರು ನೂರರಷ್ಟು ಮಂದಿಯೂ ಸೇರಿದ್ದರು.
ವಿಷಯ ಅದಲ್ಲ. ಹಜ್ ನ ವೇಳೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸಾವಿಗೀಡಾದ ದುಃಖದಲ್ಲಿ ಮುಸ್ಲಿಮರು ಇರುವಾಗ, ನಮ್ಮದೇ ದೇಶದ ಕೆಲವು ವಿಕೃತರು ಆ ಸಾವನ್ನ ಸಂಭ್ರಮಿಸಿದ್ದರು. ಅಲ್ಲಾ ಈಗ ಎಲ್ಲಿಗೆ ಹೋಗಿದ್ದಾನೆ, ಅಲ್ಲಾ ಯಾಕೆ ರಕ್ಷಿಸುವುದಿಲ್ಲ… ಎಂಬೆಲ್ಲಾ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರಕೊಂಡಿದ್ದರು. ಮುಸ್ಲಿಂ ದ್ವೇಷವೇ ಇಂತಹ ವಿಕೃತ ಪ್ರಶ್ನೆಗೆ ಕಾರಣವಾಗಿತ್ತು.
ಅಂದಹಾಗೆ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತವನ್ನ ತಪ್ಪಿಸಬಹುದಿತ್ತೋ ಎಂಬ ಪ್ರಶ್ನೆ ತಪ್ಪಲ್ಲ. ಯಾಕೆಂದರೆ ಇದಕ್ಕಿಂತ ಆರು ತಿಂಗಳ ಮೊದಲು ಜುಲೈ 2, 2024 ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಇಂಥದ್ದೇ ಕಾಲ್ತುಳಿತ ನಡೆದಿತ್ತು. ಸ್ವಘೋಷಿತ ದೇವಮಾನವ ಬೋರೆ ಬಾಬಾ ಎಂಬವ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಅಧಿಕ ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಹೀಗಿರುವಾಗ ಕುಂಭಮೇಳದಲ್ಲಿ ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿತ್ತು ಎಂಬ ಮಾತನ್ನು ನಿರಾಕರಿಸುವ ಹಾಗಿಲ್ಲ.
ಅಲ್ಲದೆ ಈ ಬಾರಿಯ ಕುಂಭಮೇಳದಲ್ಲಿ 40 ಕೋಟಿ ಮಂದಿ ಭಾಗವಹಿಸುತ್ತಾರೆ ಎಂದು ಉತ್ತರ ಪ್ರದೇಶ ಸರಕಾರವೇ ಹೇಳಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವಾಗ ಅವಘಡದ ಸಾಧ್ಯತೆ ಹೆಚ್ಚಿರುತ್ತದೆ. ಇದು ಗೊತ್ತಿದ್ದೂ ಈ ಕಾಲ್ತುಳಿತ ಯಾಕೆ ಸಂಭವಿಸಿತು ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕಿದೆ.
ಅಂದ ಹಾಗೆ ಸಾವು ಸಂಭ್ರಮದ ಸಂಗತಿಯಲ್ಲ. ಕರ್ನಾಟಕದ ನಾಲ್ಕು ಮಂದಿ ಈ ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರ ಧರ್ಮವನ್ನು ನೋಡಿ ಸಂತಾಪ ಸೂಚಿಸುವುದು ಅಥವಾ ಸಂಭ್ರಮಿಸುವುದೆಲ್ಲ ಮನುಷ್ಯ ದ್ರೋಹಿ ಕೃತ್ಯ. ಸಾವಿಗೀಡಾದದ್ದು ಹಿಂದುವಾದರೂ ಮುಸ್ಲಿಂ ಆದರೂ ಸಾವು ಸಾವೇ. ಅದರ ಹೆಸರಲ್ಲಿ ಧರ್ಮದ ಅವಹೇಳನ ಸಲ್ಲದು. ಸಂತ್ರಸ್ತ ಕುಟುಂಬಗಳ ನೋವು ಶೀಘ್ರ ಶಮನಗೊಳ್ಳಲಿ ಎಂದು ಸನ್ಮಾರ್ಗ ಹಾರೈಸುತ್ತದೆ.












