ಸನ್ಮಾರ್ಗ ವಾರ್ತೆ
✍️ಏ ಕೆ ಕೆ
ತ್ರಿವಳಿ ತಲಾಕನ್ನು ಕ್ರಿಮಿನಲ್ ಅಪರಾಧವೆಂದು ಸಾರಿ ಕಾನೂನು ರೂಪಿಸಿದ ಬಳಿಕ ಈ ದೇಶದಲ್ಲಿ ಅಂಥ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರಕಾರದೊಂದಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇಂಥದ್ದೊಂದು ಪ್ರಶ್ನೆಗೆ ಕಾರಣವಾಗಿರೋದು 2019 ರಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿಗಳು. ತ್ರಿವಳಿ ತಲಾಕ್ ಅಸಿಂಧು ಎಂದು 2017ರಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠ ಸಾರಿತ್ತು. ಸಂವಿಧಾನಕ್ಕೆ ಮತ್ತು ಕುರಾನ್ ಗೆ ತ್ರಿವಳಿ ತಲಾಕ್ ಪದ್ಧತಿ ವಿರುದ್ಧವಾಗಿದೆ ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿತ್ತು. ಇದಾಗಿ ಎರಡು ವರ್ಷಗಳ ಬಳಿಕ 2019 ರಲ್ಲಿ ಕೇಂದ್ರ ಸರಕಾರ ಹೊಸ ಕಾನೂನು ಜಾರಿ ಮಾಡಿತು. ತಲಾಕ್ ತಲಾಕ್ ತಲಾಕ್ ಎಂದು ಮೂರು ಬಾರಿ ಒಂದೇ ಉಸಿರಿಗೆ ಹೇಳುವ ವಿಚ್ಛೇದನ ಕ್ರಮವು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಹಾಗೆ ವಿಚ್ಛೇದನ ಹೇಳುವ ಪತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಆ ಕಾನೂನಿನಲ್ಲಿ ಹೇಳಲಾಗಿತ್ತು. ಈ ಕಾನೂನನ್ನು ಪ್ರಶ್ನಿಸಿ 2019 ರಲ್ಲೇ ಸುಪ್ರೀಂಕೋರ್ಟಿಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ತ್ರಿವಳಿ ತಲಾಕನ್ನು ಅಸಿಂಧು ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವುದರಿಂದ ತ್ರಿವಳಿ ತಲಾಕನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸುವುದಕ್ಕೆ ಅರ್ಥ ಏನಿದೆ ಮತ್ತು ತ್ರಿವಳಿ ತಲಾಕ್ ಇಲ್ಲದೆ ಇರುವಾಗ ಅದು ಕ್ರಿಮಿನಲ್ ಅಪರಾಧವಾಗುವುದು ಹೇಗೆ ಎಂಬ ಬಹು ಮುಖ್ಯ ಪ್ರಶ್ನೆಯನ್ನ ಈ ಅರ್ಜಿಯಲ್ಲಿ ಎತ್ತಲಾಗಿತ್ತು.
ಇದೀಗ ಸುಪ್ರೀಂ ಮುಖ್ಯ ನ್ಯಾಯಾಧೀಶ ಖನ್ನ ಅವರ ನೇತೃತ್ವದ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದು ಕೇಂದ್ರ ಸರಕಾರಕ್ಕೆ ಈ ಕುರಿತಂತೆ ಸ್ಪಷ್ಟೀಕರಣವನ್ನು ಕೇಳಿದೆ. ತ್ರಿವಳಿ ತಲಾಕ್ ಗೆ ಸಂಬಂಧಿಸಿ ಕಳೆದ ಐದು ವರ್ಷಗಳಲ್ಲಿ ಎಷ್ಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅದು ಪ್ರಶ್ನಿಸಿದೆ.
ನಿಜವಾಗಿ ಪತ್ನಿಯನ್ನು ತೊರೆಯುವ ಕ್ರಮವು ಮುಸ್ಲಿಂ ಸಮುದಾಯದಲ್ಲಿ ಮಾತ್ರ ಇರುವುದಲ್ಲ. ಇತರ ಸಮುದಾಯಗಳಲ್ಲೂ ಈ ಕ್ರಮ ಇದೆ. ಆದರೆ ಮುಸ್ಲಿಂ ಸಮುದಾಯದ ಕ್ರಮವನ್ನು ಮಾತ್ರ ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಲಾಗಿದೆ ಎಂದು ನ್ಯಾಯವಾದಿ ನಿಜಾಮ್ ಪಾಷಾ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದಾರೆ.
ಹಿಂದೂ ವ್ಯಕ್ತಿಯೋರ್ವ ಪತ್ನಿಯನ್ನು ತೊರೆದರೆ ಅದು ಸಿವಿಲ್ ಅಪರಾಧವಾಗಿ ಗುರುತಿಸುತ್ತದೆಯೇ ಹೊರತು ಕ್ರಿಮಿನಲ್ ಅಪರಾಧವಾಗಿ ಅಲ್ಲ. ಆದರೆ ಮುಸ್ಲಿಂ ಸಮುದಾಯಕ್ಕೆ ಮಾತ್ರ ಕ್ರಿಮಿನಲ್ ಪ್ರಕರಣವನ್ನು ಅನ್ವಯಿಸಲಾಗಿದೆ. ಮುಸ್ಲಿಂ ಪುರುಷರನ್ನು ಕ್ರಿಮಿನಲ್ ಗಳಾಗಿ ಜೈಲಿಗೆ ಅಟ್ಟುವ ಷಡ್ಯಂತ್ರದ ಭಾಗ ಇದು ಎಂದು ನ್ಯಾಯವಾದಿ ನಿಜಾಮ್ ಪಾಷಾ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದಾರೆ.
ತ್ರಿವಳಿ ತಲಾಕ್ ವಿರುದ್ಧ ಶಾಯಿರ ಬಾನು ಎಂಬ ಮಹಿಳೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ ಬಳಿಕ ತ್ರಿವಳಿ ತಲಾಕನ್ನು ರಾಷ್ಟ್ರಮಟ್ಟದ ಚರ್ಚೆಯನ್ನಾಗಿ ಬಿಜೆಪಿ ಮಾರ್ಪಡಿಸಿತ್ತು. ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಮತ್ತು ನ್ಯಾಯವಾದಿಯಾಗಿರುವ ನಾಜಿಯಾ ಇಲಾಹಿ ಖಾನ್ ಅವರು ಶಾಹಿರ ಬಾನು ಅವರ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಈ ಶಾಹಿರ ಬಾನು ಅವರು ಬಿಜೆಪಿಯನ್ನು ಸೇರಿಕೊಂಡಿದ್ದರು.
ಈ ಇಡಿ ಪ್ರಕ್ರಿಯೆಯು ಒಂದು ಷಡ್ಯಂತ್ರದ ಭಾಗವಾಗಿರಬಹುದು ಎಂದು ಅನುಮಾನಿಸುವುದಕ್ಕೆ ಈ ಎಲ್ಲ ಬೆಳವಣಿಗೆ ಕಾರಣವಾಗಿತ್ತು. ಮಾತ್ರ ಅಲ್ಲ ತ್ರಿವಳಿ ತಲಾಕನ್ನು ಮುಸ್ಲಿಂ ಸಮುದಾಯದ ಯಾರೂ ಸಮರ್ಥಿಸಿರಲಿಲ್ಲ. ಆದರೆ ತ್ರಿವಳಿ ತಲಾಕನ್ನು ಸುಪ್ರೀಂಕೋರ್ಟ್ ಅಸಿಂಧು ಎಂದು ಹೇಳಿದ ಬಳಿಕ ಅದನ್ನು ಕ್ರಿಮಿನಲ್ ಅಪರಾಧವಾಗಿ ಸಾರುವ ಕಾನೂನನ್ನು ಜಾರಿಗೊಳಿಸುವ ಅಗತ್ಯ ಏನಿದೆ ಅನ್ನುವುದು ಸಮುದಾಯದ ಪ್ರಶ್ನೆಯಾಗಿತ್ತು.
ಇತರ ಸಮುದಾಯಗಳಲ್ಲಿ ಹೀಗೆ ಪತ್ನಿಯನ್ನು ತೊರೆದರೆ ಅದು ಸಿವಿಲ್ ಅಪರಾಧವಾಗುವಾಗ ಮುಸ್ಲಿಂ ಸಮುದಾಯಕ್ಕೆ ಮಾತ್ರ ಯಾಕೆ ಕ್ರಿಮಿನಲ್ ಅಪರಾಧದ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಮುಸ್ಲಿಂ ಸಮುದಾಯದ ಪ್ರಮುಖರು ಪ್ರಶ್ನಿಸಿದ್ದರು. ಇದೀಗ ಸುಪ್ರೀಂ ಕೋರ್ಟು ಈ ವಿಷಯದಲ್ಲಿ ಕೇಂದ್ರ ಸರಕಾರದ ಸ್ಪಷ್ಟೀಕರಣವನ್ನು ಕೇಳಿದೆ. ಮಾತ್ರ ಅಲ್ಲ ಈ ಅರ್ಜಿಯಲ್ಲಿ ಎಲ್ಲೂ ಕೂಡ ತ್ರಿವಳಿ ತಲಾಕನ್ನು ಸಮರ್ಥಿಸಲಾಗಿಲ್ಲ ಎಂದು ನ್ಯಾಯಮೂರ್ತಿ ಖನ್ನ ಅವರು ಹೇಳಿದ್ದಾರೆ.












