ಮಸೀದಿಯ ಮುಂದೆ ಕೇಸರಿ ಧ್ವಜ, ಘೋಷಣೆ ಕೂಗಿದ ಗುಂಪು; ಕೋಮು ಉದ್ವಿಗ್ನತೆಗೆ ಪ್ರಚೋದನೆ

0
566

ಸನ್ಮಾರ್ಗ ವಾರ್ತೆ

ಹೈದರಾಬಾದ್: ನಾಚರಂ ಮಲ್ಲಾಪುರದಲ್ಲಿ ಬುಧವಾರ ರಾತ್ರಿ, ಮೆರವಣಿಗೆಯಲ್ಲಿ ಪಾಲ್ಗೊಂಡ ಗುಂಪೊಂದು ಮಸೀದಿಯ ಮುಂದೆ ಕೇಸರಿ ಬಾವುಟ ಮತ್ತು ತಲವಾರು ಬೀಸುತ್ತಾ ಘೋಷಣೆಗಳನ್ನು ಕೂಗಿದ ಘಟನೆ ಉದ್ವಿಗ್ನತೆಯನ್ನುಂಟು ಮಾಡಿದೆ. ಈ ಘಟನೆ ನಾಚರಂ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂಕ್ಯಪುರಿ ಕಾಲೋನಿಯ ಮಸ್ಜಿದ್-ಎ-ಆಶ್ರಫ್ ಬಳಿ ನಡೆದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, 10-12 ಜನರು ಮಚ್ಚು ಹಿಡಿದು, ಕೇಸರಿ ಧ್ವಜ ಹಾರಾಡಿಸುತ್ತಾ ಘೋಷಣೆಗಳನ್ನು ಕೂಗುತ್ತಿರುವುದು ದಾಖಲಾಗಿದೆ. ಈ ಗುಂಪು ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಯಿಂದ ಹಿಂದಿರುಗುತ್ತಿದ್ದಾಗ, ಮಸೀದಿಯಲ್ಲಿ ಜನರು ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ.

ಸ್ಥಳೀಯ ನಿವಾಸಿಗಳು ಈ ಘಟನೆಯನ್ನು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ವ್ಯಾಪಕವಾಗಿ ಹರಡುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಘಟನೆಯ ತೀವ್ರತೆ ಹೆಚ್ಚಾಗುವ ಆತಂಕದ ನಡುವೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕೃತ್ಯವನ್ನು ಖಂಡಿಸಿ, ಅಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳೀಯರು ಶಾಂತಿ ಕಾಪಾಡಲು ಕಠಿಣ ಕ್ರಮಗಳ ಅಗತ್ಯವನ್ನು ಸೂಚಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಿ

https://www.facebook.com/share/v/19iWtb7WXY/