ಖಲೀಲ್ ಬಂಧನದ ವಿರುದ್ಧ ಕೊಲಂಬಿಯ ಯುನಿವರ್ಸಿಟಿಯ ಯಹೂದಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
411

ಸನ್ಮಾರ್ಗ ವಾರ್ತೆ

ಅಮೇರಿಕಾದ ಕೊಲಂಬಿಯಾ ಯೂನಿವರ್ಸಿಟಿಯ ವಿದ್ಯಾರ್ಥಿ ಮತ್ತು ಆಕ್ಟಿವಿಸ್ಟ್ ಆಗಿರುವ ಮಹಮ್ಮದ್ ಖಲೀಲ್ ರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಕೊಲಂಬಿಯ ಯೂನಿವರ್ಸಿಟಿಯ ಯಹೂದಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 45 ನಿಮಿಷಗಳ ಕಾಲ ಸ್ವಯಂ ತಮ್ಮ ಕೈಗೆ ಸಂಕೋಲೆಯನ್ನು ಬಿಗಿದು ಇವರು ಪ್ರತಿಭಟನೆ ನಡೆಸಿದ್ದಾರೆ.

ಕೊಲಂಬಿಯಾ ಯೂನಿವರ್ಸಿಟಿಯಿಂದ ಇತ್ತೀಚೆಗಷ್ಟೇ ಪದವಿಯನ್ನು ಪಡೆದಿರುವ ಖಲೀಲ್ ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದಾರೆ. ಕಳೆದ ತಿಂಗಳು ಅವರನ್ನು ಬಂಧಿಸಲಾಗಿದೆ. ಅಮೆರಿಕಾದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದಲ್ಲಿ ಈ ಬಂಧನ ನಡೆದಿದೆ. ಇವರು ಕೊಲಂಬಿಯಾ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್ ನ ವಿದ್ಯಾರ್ಥಿಯಾಗಿದ್ದರು ಮತ್ತು ಆಕ್ಟಿವಿಸ್ಟ್ ಕೂಡ ಆಗಿದ್ದರು.

1995ರಲ್ಲಿ ಸಿರಿಯಾದಲ್ಲಿ ಜನಿಸಿರುವ ಆಲ್ಜೀರಿಯಾ ನಾಗರಿಕನಾದ ಖಲೀಲ್ ಕ್ಯಾಂಪಸ್ ನಲ್ಲಿ ಫೆಲಸ್ತೀನ್ ಪರ ವಾದಗಳಿಂದಾಗಿ ಗುರುತಿಸಿಕೊಂಡಿದ್ದರು. ಕೊಲಂಬಿಯಾ ಯೂನಿವರ್ಸಿಟಿಗೆ ಬರುವುದಕ್ಕಿಂತ ಮೊದಲು ಅವರು ಜೋರ್ಡಾನಿನಲ್ಲಿ ಪದವಿ ಪಡೆದಿದ್ದರು. ಕಳೆದ ವರ್ಷ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಫೆಲಸ್ತೀನ್ ಪರ ನಡೆಸಲಾದ ಪ್ರತಿಭಟನೆಯಲ್ಲಿ ಈ ಖಲೀಲ್ ಮುಂಚೂಣಿಯಲ್ಲಿದ್ದರು.