ಮನಮೋಹನ್ ಸಿಂಗ್ ಪತ್ನಿಯ ಭದ್ರತೆಯನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರ

0
470

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರಿಗೆ ನೀಡಲಾಗಿದ್ದ Z-ಪ್ಲಸ್ ಭದ್ರತಾ ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ Z ವರ್ಗಕ್ಕೆ ಇಳಿಸಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಡಿಸೆಂಬರ್ 26 ರಂದು 92ನೇ ವಯಸ್ಸಿನಲ್ಲಿ ನಿಧನರಾದ ಮಾಜಿ ಪ್ರಧಾನಿಯವರ ಕುಟುಂಬದ ಸದಸ್ಯೆ ಎಂಬ ಕಾರಣದಿಂದಾಗಿ ಗುರುಶರಣ್ ಕೌರ್ ಅವರಿಗೆ ಈ ಹಿಂದೆ ಅತ್ಯುನ್ನತ ಮಟ್ಟದ Z-ಪ್ಲಸ್ ಕೇಂದ್ರ ಭದ್ರತಾ ರಕ್ಷಣೆ ಒದಗಿಸಲಾಗಿತ್ತು.

ಇತ್ತೀಚೆಗೆ ಕೇಂದ್ರ ಗುಪ್ತಚರ ಸಂಸ್ಥೆಗಳ ಭದ್ರತಾ ಪರಿಶೀಲನೆಯ ಹಿನ್ನೆಲೆಯಲ್ಲಿ, ಇದೀಗ ಅವರನ್ನು ಎರಡನೇ ಅತ್ಯುನ್ನತ ಭದ್ರತಾ ಮಟ್ಟವಾದ Z ವರ್ಗದ ಅಡಿಯಲ್ಲಿ ಸೇರಿಸಲಾಗಿದೆ. ಈ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್‌ನ ವಿಐಪಿ ಭದ್ರತಾ ವಿಭಾಗಕ್ಕೆ ಸಿಬ್ಬಂದಿ ಸಂಖ್ಯೆಯನ್ನು ಅಗತ್ಯಕ್ಕೆ ತಕ್ಕಂತೆ ಕಡಿಮೆ ಮಾಡುವಂತೆ ನಿರ್ದೇಶನ ನೀಡಿದೆ.

Z ವರ್ಗದ ಅಡಿಯಲ್ಲಿ, ಗುರುಶರಣ್ ಕೌರ್ ಅವರಿಗೆ ತಮ್ಮ ವೈಯಕ್ತಿಕ ಭದ್ರತೆ ಮತ್ತು ನಿವಾಸದ ಭದ್ರತೆಗೆ ಸುಮಾರು ಒಂದು ಡಜನ್ ಸಶಸ್ತ್ರ ಕಮಾಂಡೋಗಳ ರಕ್ಷಣೆ ಇರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಬದಲಾವಣೆಯ ಪರಿಣಾಮವಾಗಿ, ಸಿಂಗ್ ಕುಟುಂಬಕ್ಕೆ ನೀಡಲಾಗಿದ್ದ ದೆಹಲಿ ಪೊಲೀಸ್ ಸಿಬ್ಬಂದಿಯ ಸಂಖ್ಯೆಯಲ್ಲಿಯೂ ಇಳಿಕೆ ಕಂಡುಬಂದಿದೆ.

2019 ರಲ್ಲಿ ಮಾಜಿ ಪ್ರಧಾನಿ ಭದ್ರತಾ ನಿಯಮಗಳನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಿದ ಬಳಿಕ, ಡಾ. ಮನಮೋಹನ್ ಸಿಂಗ್ ಅವರಿಗೆ CRPF ನ ಸುಧಾರಿತ ಭದ್ರತಾ ವ್ಯವಸ್ಥೆ ಜೊತೆಗೆ Z-ಪ್ಲಸ್ ಭದ್ರತೆ ನೀಡಲಾಗಿತ್ತು. ಅವರು 2004ರಿಂದ 2014ರ ವರೆಗೆ ಎರಡು ಅವಧಿಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಭದ್ರತಾ ವರ್ಗೀಕರಣದ ಪಟ್ಟಿ ಪ್ರಕಾರ, ಕೇಂದ್ರ ವಿಐಪಿ ರಕ್ಷಣಾ ವ್ಯವಸ್ಥೆ Z-ಪ್ಲಸ್ (ASL), Z-ಪ್ಲಸ್, Z, Y+, Y ಮತ್ತು X ಎಂಬ ಹಂತಗಳನ್ನು ಹೊಂದಿದೆ.

– ಪಿಟಿಐ ವರದಿ