ಸನ್ಮಾರ್ಗ ವಾರ್ತೆ
ಬೀಜಿಂಗ್/ವಾಷಿಂಗ್ಟನ್: ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಘರ್ಷವು ಶುಕ್ರವಾರ ಮತ್ತಷ್ಟು ತೀವ್ರತೆ ಪಡೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತಿನ ಮೇಲೆ ಶೇ. 34 ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ, ಚೀನಾ ಕೂಡಾ ತಕ್ಷಣವೇ ಅಮೆರಿಕದ ಎಲ್ಲಾ ಆಮದು ಸರಕುಗಳ ಮೇಲೆ ಶೇ. 34ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದೆ.
ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ಕ್ಸಿನ್ಹುವಾ ಈ ಬಗ್ಗೆ ವರದಿ ಮಾಡಿದ್ದು, ಏಪ್ರಿಲ್ 10ರಿಂದ ಅಮೆರಿಕದ ಉತ್ಪನ್ನಗಳ ಮೇಲೆ ಈ ಸುಂಕ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಕ್ರಮವನ್ನು ಅಮೆರಿಕದ ‘ಪರಸ್ಪರ ಸುಂಕ’ ನೀತಿಗೆ ಪ್ರತಿಸ್ಪಂದನೆಯೆಂದು ಚೀನಾ ಹೇಳಿದ್ದು, ಈ ಸಂಬಂಧ ವಿಶ್ವ ವ್ಯಾಪಾರ ಸಂಸ್ಥೆ (WTO) ಯಲ್ಲಿಯೇ ದಾವೆ ಹೂಡಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ ಈ ನಿರ್ಧಾರವು ಉಲ್ಬಣಗೊಳ್ಳುತ್ತಿರುವ ಜಾಗತಿಕ ಆರ್ಥಿಕ ಅಸ್ಥಿರತೆಗೆ ಇಂಧನ ಹಾಕುವಂತಾಗಿದೆ. ಐಟಿ ಉತ್ಪನ್ನಗಳು, ಕೃಷಿ ವಸ್ತುಗಳು ಹಾಗೂ ಕೈಗಾರಿಕಾ ಯಂತ್ರೋಪಕರಣಗಳು ಈ ಸುಂಕದ ವ್ಯಾಪ್ತಿಗೆ ಒಳಪಟ್ಟಿವೆ.
ವ್ಯಾಪಾರ ತಜ್ಞರ ಅನಿಸಿಕೆಯಂತೆ, ಈ ಪರಸ್ಪರ ಸುಂಕಗಳು ಮುಂದಿನ ದಿನಗಳಲ್ಲಿ ಜಾಗತಿಕ ಉತ್ಪಾದನಾ ಸರಪಳಿ ಮತ್ತು ಬೆಲೆ ಸ್ಥಿರತೆಗೆ ದೊಡ್ಡ ಹೊಡೆತ ನೀಡಬಹುದು.
– ಪಿಟಿಐ ವರದಿ












