ಸನ್ಮಾರ್ಗ ವಾರ್ತೆ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತದ ವಿವಿಧ ಭಾಗಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾತ್ಮಕ ಪ್ರತಿಕ್ರಿಯೆ ಭುಗಿಲೆದ್ದಿದೆ. ಮುಸ್ಲಿಂ ಕಾರ್ಮಿಕರನ್ನು ಹುಡುಕಿ ಬಲವಂತವಾಗಿ ಕೆಲಸದಿಂದ ತೆಗೆದುಹಾಕುವುದು, ಅಂಗಡಿಗಳನ್ನು ಧ್ವಂಸ ಮಾಡುವುದು, ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವುದು ಸೇರಿದಂತೆ ಅನೇಕ ಭಯಾನಕ ಘಟನೆಗಳು ವರದಿಯಾಗಿವೆ.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮುಸ್ಲಿಂ ಕಾರ್ಮಿಕರನ್ನು ಹಿಂದೂ ತೀವ್ರವಾದಿಗಳ ಗುಂಪು ಬಲವಂತವಾಗಿ ಕೆಲಸದಿಂದ ತೆಗೆದು ಹಾಕಿದೆ. ಹರಿಯಾಣದಲ್ಲಿ ಮುಸ್ಲಿಂ ವ್ಯಕ್ತಿಗಳ ಮೇಲೆ ಗುಂಪುಗಳಿಂದ ಹಲ್ಲೆ ನಡೆಯುತ್ತಿರುವ ವೀಡಿಯೊಗಳು ವೈರಲಾಗಿದ್ದು, ಚಂಡೀಗಢ, ಡೆಹ್ರಾಡೂನ್, ಹಿಮಾಚಲ ಪ್ರದೇಶ ಮತ್ತಿತರ ಪ್ರದೇಶಗಳಲ್ಲಿ ಮುಸ್ಲಿಂ ಬೀದಿ ವ್ಯಾಪಾರಿಗಳಿಗೆ ಬೆದರಿಕೆ, ಬಹಿಷ್ಕಾರ ಹಾಕಲಾಗಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಹೋಗಬೇಕಾದ ಪರಿಸ್ಥಿತಿಗೆ ಒಳಗಾಗಿದ್ದಾರೆ.
ಹಿಂಸಾಚಾರದ ಪರಿಣಾಮವಾಗಿ ಅನೇಕ ಮುಸ್ಲಿಂ ಕುಟುಂಬಗಳು ಭಯದಿಂದ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿದ್ದು, ಮಕ್ಕಳು ತಮ್ಮ ಶಿಕ್ಷಣ ಮೊಟಕುಗೊಳ್ಳುವ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. “ನಾವು ಭಯಭೀತರಾಗಿದ್ದೇವೆ, ನಮ್ಮ ತಪ್ಪಿಲ್ಲದಿದ್ದರೂ ನಾವು ಶಿಕ್ಷೆಗೆ ಗುರಿಯಾಗುತ್ತಿದ್ದೇವೆ,” ಎಂದು ಓರ್ವ ಅಂಗಡಿಯವ ವಿವರಿಸಿದ್ದಾನೆ.
ಕಾಶ್ಮೀರ ವಿದ್ಯಾರ್ಥಿ ಸಂಘದ ಸಂಚಾಲಕ ನಾಸಿರ್ ಖೋಯಿಹಾಮಿ ಈ ದ್ವೇಷದ ಅಲೆಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು ಉದ್ದೇಶಪೂರ್ವಕ ಅಭಿಯಾನವೆಂದು ಕರೆದಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ದುರ್ಬಲ ಸಮುದಾಯಗಳನ್ನು ರಕ್ಷಿಸಬೇಕು ಎಂದು ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
https://x.com/i/status/1915804412829905048












