ಸನ್ಮಾರ್ಗ ವಾರ್ತೆ
ದೆಹಲಿ: ದೆಹಲಿಯ ಐತಿಹಾಸಿಕ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ, ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. 26 ಜನರ ಪ್ರಾಣ ಬಲಿಯಾದ ಈ ಕ್ರೂರ ಕೃತ್ಯವು “ಇಸ್ಲಾಂನ ಮೂಲ ತತ್ವಗಳಿಗೆ ವಿರುದ್ಧವಾಗಿದೆ.” ಎಂದು ಅವರು ಹೇಳಿದರು. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಒಬ್ಬರನ್ನು ಕೊಲ್ಲುವುದು ಇಡೀ ಮಾನವಕುಲವನ್ನು ಕೊಲ್ಲುವುದಕ್ಕೆ ಸಮಾನ” ಎಂದು ಕುರಾನ್ನ ಅಧ್ಯಾಯವನ್ನು ಉಲ್ಲೇಖಿಸಿ ಭಯೋತ್ಪಾದಕರನ್ನು ಖಂಡಿಸಿದರು. ಮುಗ್ಧರ ರಕ್ತವನ್ನು ಚೆಲ್ಲುವುದು ಇಸ್ಲಾಂನಲ್ಲಿ ಘೋರ ಪಾಪವಾಗಿದ್ದು, ಅಂಥವರು ಅಪರಾಧಿಗಳು ಎಂದು ಪುನರುಚ್ಚರಿಸಿದರು.
ಪ್ರಾರ್ಥನೆಯ ನಂತರ, ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ಭಕ್ತರು ಶಾಂತ ಪ್ರತಿಭಟನೆ ನಡೆಸಿ, ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.












