ಸನ್ಮಾರ್ಗ ವಾರ್ತೆ
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಕಾರಣವಾದ ಗುಪ್ತಚರ ವೈಫಲ್ಯದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಜೊತೆಗೆ ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರ ರಾಜಿನಾಮೆ ಕೋರಬೇಕು ಎಂದು ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುಲ್ವಾಮಾದಲ್ಲಿ 40 ಯೋಧರು ಹುತಾತ್ಮರಾದರು. ಆದರೆ ಅದರ ಬದಲು ಹೊರಬಂದದ್ದು ಜೋಶ್ ಸಿನಿಮಾ ಮಾತ್ರ ಎಂದು ಸರ್ಕಾರವನ್ನು ಟೀಕೆ ಮಾಡಿದರು.
ಜಮ್ಮು ಕಾಶ್ಮೀರದ ಭದ್ರತೆ ಈಗಾಗಲೇ ಸೇನೆಯ ಕೈಯಲ್ಲಿ ಇತ್ತು. ಆದರೂ ದಾಳಿ ನಡೆದಿದೆ. ಸರ್ಕಾರ ಪದೇ ಪದೇ ತಪ್ಪುಗಳನ್ನು ಮಾಡುತ್ತಿದೆ. ಮೊದಲು ಗೃಹ ಇಲಾಖೆಯ ಮೇಲೆ ಕ್ರಮಕೈಕೊಳ್ಳಬೇಕು. ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು ಎಂದು ಹೇಳಿದರು.
“ಸೈನ್ಯಕ್ಕೆ ಸ್ವಾತಂತ್ರ್ಯ ನೀಡಲಾಗಿದೆ ಎಂಬುದು ದೊಡ್ಡ ವಿಷಯವಲ್ಲ,” ಎಂದು ಟೀಕಿಸಿದ ಸಂಜಯ್ ರಾವತ್, “ನಮ್ಮ ಭಾರತೀಯ ಸೇನೆ ಶಕ್ತಿಶಾಲಿಯಾಗಿದೆ. ನಿನ್ನೆಯಷ್ಟೇ 60,000 ಕೋಟಿ ರೂ. ಮೌಲ್ಯದ 27 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲಾಗಿದೆ. ಪ್ರಧಾನಿ ಸೈನ್ಯಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳುವುದು ಹೊಸ ವಿಷಯವೇನೂ ಅಲ್ಲ. ಕಾಶ್ಮೀರ ಭಾರತದ ಭಾಗವಾಗಿರುವುದಕ್ಕೆ ಸೇನೆಯದೇ ಕಾರಣ. ಈ ಹಿಂದೆ ಕಾಶ್ಮೀರದಲ್ಲಿಯೂ ಸೇನೆಗೆ ಸ್ವಾತಂತ್ರ್ಯವಿತ್ತು. ಆದರೂ ಪಹಲ್ಗಾಮ್ ದಾಳಿ ನಡೆದಿದೆ ಎಂದರೆ ಅದು ಭದ್ರತಾ ವೈಫಲ್ಯವಲ್ಲವೇ?” ಎಂದು ಅವರು ಪ್ರಶ್ನಿಸಿದರು.












