ಸನ್ಮಾರ್ಗ ವಾರ್ತೆ
ಬಟಿಂಡಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಿರುವ ಸೇನೆ, ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಬಿಹಾರದ ಯುವಕನೊಬ್ಬನನ್ನು ಬಂಧಿಸಿದೆ. ಸಮಷ್ಟಿಪುರ ಜಿಲ್ಲೆಯ ಮೂಲದ ಸುನಿಲ್ ಕುಮಾರ್ ರಾಮ್ ಎಂಬಾತನನ್ನು ಬಂಧಿಸಲಾಗಿದ್ದು, ಕಳೆದ 10 ವರ್ಷಗಳಿಂದ ಈತ ಬಟಿಂಡಾದ ಬೀಂಟ್ ನಗರದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಸುನಿಲ್ ಕಂಟೋನ್ಮೆಂಟ್ ಪ್ರದೇಶದ ಬಳಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದು, ಅವನ ಮೊಬೈಲ್‌ನ್ನು ಪರಿಶೀಲಿಸಿದಾಗ, ಪಾಕಿಸ್ತಾನಿ ಮಹಿಳೆಯೊಂದಿಗಿನ ವಾಟ್ಸಪ್ ಸಂದೇಶಗಳು ಪತ್ತೆಯಾಗಿವೆ. ಈ ಮಹಿಳೆ ಕೆಲವು ದಿನಗಳಿಂದ ಸುನಿಲ್ ಜೊತೆ ಸಂಪರ್ಕದಲ್ಲಿದ್ದರು. ಚಾಟ್‌ಗಳಲ್ಲಿ ಸೇನೆಯ ಕುರಿತ ಮಾಹಿತಿಯನ್ನು ಅವರು ಹಂಚಿಕೊಂಡಿರುವ ಶಂಕೆ ಇದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಸುನಿಲ್ ಅವರಿಗೆ ಸೇನೆಯ ರಹಸ್ಯ ಸ್ಥಳಗಳಿಗೆ ನೇರ ಪ್ರವೇಶವಿಲ್ಲದಿದ್ದರೂ, ಯಾವುದೇ ಮಾಹಿತಿ ಪಾಕಿಸ್ತಾನಕ್ಕೆ ತಲುಪಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ. ಹನಿಟ್ರ್ಯಾಪ್ ಮೂಲಕ ಬೇಹುಗಾರಿಕೆ ನಡೆದಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.












