ಸನ್ಮಾರ್ಗ ವಾರ್ತೆ
ನವದೆಹಲಿ: ಡಿಜಿಟಲ್ ಸೇವೆಗಳನ್ನು ಎಲ್ಲರಿಗೂ ಸಮಾನವಾಗಿ ಖಚಿತಪಡಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಇನ್ನುಮುಂದೆ ಡಿಜಿಟಲ್ ಪ್ರವೇಶವು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಘೋಷಿಸಿದೆ. ಇದರಿಂದಾಗಿ ಆಸಿಡ್ ದಾಳಿಗೆ ಒಳಪಟ್ಟವರು, ಅಂಧರು, ವಿಶೇಷ ಚೇತನರು, ಬ್ಯಾಂಕಿಂಗ್ ಹಾಗೂ ಇ-ಆಡಳಿತ ಸೇವೆಗಳಲ್ಲಿ ಸುಲಭವಾಗಿ ಸೌಕರ್ಯ ಪಡೆಯಲು, ವ್ಯವಹರಿಸಲು ನೆರವಾಗಲಿದೆ.
ಇ-ಕೆವೈಸಿ ಪ್ರಕ್ರಿಯೆಯಲ್ಲಿ ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯಗಳಾದವರಿಗೆ ತೊಂದರೆಯಾಗದಂತೆ ಹೊಸ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ನ್ಯಾಯಮೂರ್ತಿಗಳಾದ ಜೆ.ಪಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರು ನೀಡಿದ ತೀರ್ಪಿನಲ್ಲಿ, ಡಿಜಿಟಲ್ ಸಮಾನತೆಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬರುವ ‘ಬದುಕುವ ಹಕ್ಕಿನ’ ಅಂಗವಾಗಿದ್ದು, ಎಲ್ಲರಿಗೂ ಡಿಜಿಟಲ್ ಸೌಲಭ್ಯಗಳು ತಲುಪುವಂತಾಗಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಡಳಿತಾತ್ಮಕ ಹಾಗೂ ಕಲ್ಯಾಣ ಯೋಜನೆಗಳ ಸದುಪಯೋಗ ತಪ್ಪುತ್ತಿರುವುದು, ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಡಿಜಿಟಲ್ ಅಂತರ ನಿವಾರಣೆಯು ಕೇವಲ ನೀತಿಯ ವಿಷಯವಾಗಿರದೆ ಸಾಂವಿಧಾನಿಕ ಬದ್ಧತೆಯೂ ಆಗಿದೆ ಎಂದು ಸ್ಪಷ್ಟಪಡಿಸಿದೆ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಡಿಜಿಟಲ್ ಪ್ರವೇಶಕ್ಕೆ ಹೊಣೆಗಾರನಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು ಸೇರಿದಂತೆ 20 ಮಾರ್ಗಸೂಚಿಗಳನ್ನು ಈ ಹಿನ್ನೆಲೆಯಲ್ಲಿ ನೀಡಲಾಗಿದೆ.
ಆಸಿಡ್ ದಾಳಿಯಿಂದ ಬದುಕುಳಿದವರು ಸಲ್ಲಿಸಿದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮತ್ತು ಡಿಜಿಟಲ್ ಕೆವೈಸಿ ಕಾರ್ಯವಿಧಾನಗಳ ಪೂರ್ಣಗೊಳಿಸಲಾಗದೇ ಇರುವುದನ್ನು ಪ್ರಶ್ನಿಸಿ ದೃಷ್ಟಿಹೀನ ಅಥವಾ ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿ ಸಲ್ಲಿಸಿದ ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಬಳಿಕ ಈ ಆದೇಶ ನೀಡಲಾಗಿದೆ.












