11ರ ಬಾಲಕನನ್ನು ಅಪಹರಿಸಿದ ಶಿಕ್ಷಕಿ; ಪೋಕ್ಸೋ ಪ್ರಕರಣ ದಾಖಲು

0
455

ಸನ್ಮಾರ್ಗ ವಾರ್ತೆ

ಸೂರತ್: ಹನ್ನೊಂದು ವರ್ಷದ ಬಾಲಕನನ್ನು ಅಪಹರಿಸಿ ಅತ್ಯಾಚಾರ ಎಸಗಿದ ಶಂಕೆಯ ಮೇರೆಗೆ ಮಹಿಳಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ತಂದೆಯ ಪ್ರಕಾರ, ಶಿಕ್ಷಕಿ ಮಾನ್ಸಿ ಅವರು, ತನ್ನ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು. ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದರು.

ನಾಪತ್ತೆಯಾದ ಮಗು ಮತ್ತು ಶಿಕ್ಷಕಿ ಜತೆಯಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೋಲೀಸರು, ಮೂರು ದಿನಗಳ ಹುಡುಕಾಟದ ಬಳಿಕ ಇಬ್ಬರೂ ಗುಜರಾತ್-ರಾಜಸ್ಥಾನ ಗಡಿಯ ಬಳಿ ಪತ್ತೆಯಾಗಿದ್ದಾರೆ. ತನಿಖೆಯಲ್ಲಿ, ಮಾನ್ಸಿ ಬಾಲಕನನ್ನು ಏಪ್ರಿಲ್ 25ರಂದು ಸೂರತ್‌ನಿಂದ ಅಹಮದಾಬಾದ್ ಮೂಲಕ ದೆಹಲಿಗೆ, ಬಳಿಕ ಜೈಪುರಕ್ಕೆ ಕರೆದುಕೊಂಡು ಹೋಗಿದ್ದಾಗಿ ತಿಳಿದುಬಂದಿದೆ. ಜೈಪುರದಲ್ಲಿ ಇಬ್ಬರೂ ಎರಡು ರಾತ್ರಿ ಹೋಟೆಲ್‌ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ.

ಮಗುವಿನ ವೈದ್ಯಕೀಯ ಪರೀಕ್ಷೆಯ ಬಳಿಕ ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ಹೇಳಿದ್ದು, ಪೋಕ್ಸೋ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 127 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.