ಹಿಂದೂ ಕುಟುಂಬದ ಇಸ್ಲಾಮಿಕ್ ಹಸ್ತಪ್ರತಿಗಳ ಸಂಗ್ರಹ: ಶ್ರೀನಗರದಲ್ಲಿ ಒಂದು ಪ್ರಮುಖ ಆಕರ್ಷಣೆ

ಶ್ರೀನಗರದಲ್ಲಿ ಪ್ರದರ್ಶನವೊಂದರಲ್ಲಿ 40 ಇಸ್ಲಾಮಿಕ್ ಕ್ಯಾಲಿಗ್ರಫಿ ಚಿತ್ರಗಳು, 24 ಮೀಟರ್ ಉದ್ದದ ಮುಸ್ಲಿಂ ಪ್ರವಾದಿಗಳ ಕುಟುಂಬದ ಮರ (ಫ್ಯಾಮಿಲಿ ಟ್ರೀ )ಮತ್ತು ಬಟ್ಟೆಯ ಮೇಲೆ ಬರೆದ ಕುರ್ ಆನ್ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿವೆ. ಈ ಪ್ರದರ್ಶನದಲ್ಲಿ ಏಳು ನೂರು ವರ್ಷಗಳ ಹಿಂದಿನ ಕುರಾನಿಕ್ ಹಸ್ತಪ್ರತಿಗಳು ಸಹ ಇವೆ.
ಜಮ್ಮು ಕಾಶ್ಮೀರದ ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ ‘ಶಿರೀನ್ ಖಲಂ ‘ ಇಸ್ಲಾಮಿಕ್ ಕಲಾ ಪ್ರದರ್ಶನವು ಚಿನ್ನದ ಪತ್ರಗಳಲ್ಲಿ ಬರೆದ ಕುರ್ ಆನ್ ಶ್ಲೋಕಗಳು, ಸುಂದರವಾದ ಕ್ಯಾಲಿಗ್ರಫಿ ಚಿತ್ರಗಳು ಹಾಗೂ ಈ ಅಪರೂಪದ ಸಂಗ್ರಹವನ್ನು ಸಂರಕ್ಷಿಸಿದ ಸಂಗ್ರಹಕಾರನಿಂದಾಗಿ ಜನಮನ ಸೆಳೆಯುತ್ತಿದೆ.
ಸುರೇಶ ಅಬ್ರೋಲ್ ಜಮ್ಮುವಿನ ಓರ್ವ ಹಿಂದೂ. ಅಬ್ರೋಲ್ ಮತ್ತು ಅವರ ಕುಟುಂಬವು ಒಂದು ಶತಮಾನಕ್ಕೂ ಹಳೆಯ ಕುರ್ ಆನ್ ಹಸ್ತಪ್ರತಿಗಳನ್ನು ಒಳಗೊಂಡಂತೆ ಈ ಅಪರೂಪದ ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿದೆ. ಅಬ್ರಾಲ್ ಅವರು ಶಾಶ್ವತ್ ಆರ್ಟ್ ಗ್ಯಾಲರಿ ಎಂಬ ಹೆಸರಿನ ತಮ್ಮ ಸ್ವಂತ ವಸ್ತು ಸಂಗ್ರಹಾಲಯ ಮತ್ತು ಹಸ್ತಪ್ರತಿ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.
ಅಬ್ರೋಲ್ ಅವರು ತಮ್ಮ ಅಜ್ಜನಿಂದ ಈ ಆಸಕ್ತಿಯನ್ನು ಬೆಳೆಸಿಕೊಂಡರು. ಅವರ ಅಜ್ಜ ಬೆಳಿಗ್ಗೆ ನದಿ ತೀರಕ್ಕೆ ಸ್ನಾನಕ್ಕೆ ಹೋದ ಸಂಧರ್ಭ ನದಿಗೆ ಎಸೆದ ಹಸ್ತಪತಿಗಳನ್ನು ಸಂಗ್ರಹಿಸಿ ಇಡುತ್ತಿದ್ದರಂತೆ. ನಿಧಾನವಾಗಿ ಈ ಸಂಗ್ರಹವು ಬೆಳೆದು 250 ಕಲಾಶಾಸ್ತ್ರೀಯ ಚಿತ್ರಗಳು ಅವರ ಗ್ಯಾಲರಿಯಲ್ಲಿವೆ. ಪ್ರಕೃತಿ ಚಿಕಿತ್ಸೆಯಲ್ಲಿ ವೈಜ್ಞಾನಿಕ ಪದವಿ ಪಡೆದಿರುವ ಅಬ್ರೋಲ್ ತಮ್ಮ ಸಂಗ್ರಹಕ್ಕೆ ಅನೇಕ ಹೊಸ ಹಸ್ತಪ್ರತಿಗಳನ್ನು ಖರೀದಿಸಿದ್ದಾರೆ. ಸರಕಾರದ ಯಾವುದೇ ಸಹಾಯವಿಲ್ಲದೆ ಅಬ್ರೋಲ್ ಈ ಹಸ್ತಪ್ರತಿಗಳನ್ನು ಉಳಿಸಿಕೊಂಡಿದ್ದಾರೆ. ಮುಂದೆಯೂ ಉಳಿಸಿಕೊಳ್ಳುತ್ತೇನೆ ಎಂಬ ಭರವಸೆ ಹೊಂದಿದ್ದಾರೆ.