ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ತಪಾಸಣೆ: ಎನ್‌ಆರ್‌ಸಿ ತರುವ ಪರೋಕ್ಷ ಯೋಜನೆಯೇ? ಪ್ರಶ್ನಿಸಿದ ಒಬ್ರಿಯಾನ್

0
435

ಸನ್ಮಾರ್ಗ ವಾರ್ತೆ

ವಿಧಾನಸಭಾ ಚುನಾವಣೆಗಿಂತ ಮುಂಚಿತವಾಗಿ ಬಿಹಾರದ ಮತದಾರರ ಪಟ್ಟಿಯಲ್ಲಿ ವಿಶೇಷ ತಪಾಸಣೆಗೆ ಮುಂದಾಗಿರುವುದಕ್ಕೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ತರಾಟೆಗೆ ಎತ್ತಿಕೊಂಡಿವೆ. ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರ ಹಾಕುವ ಸಂಚಿನ ಭಾಗ ಇದೆಂದು ಕಾಂಗ್ರೆಸ್ ಆರೋಪಿಸಿದೆ.

ಈ ನಡೆಯು ಎನ್‌ಆರ್‌ಸಿಯನ್ನು ಜಾರಿಗೆ ತರುವುದಕ್ಕೆ ಪರೋಕ್ಷ ಪ್ರಯತ್ನ ಎಂದು ತೃಣ ಮೂಲ ಕಾಂಗ್ರೆಸ್ಸಿನ ಡೆರಿಕ್ ಒಬ್ರಿಯಾನ್ ಮತ್ತು ಅಸದುದ್ದೀನ್ ಓವೈಸಿ ಹೇಳಿದ್ದಾರೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಸಲಾಗುತ್ತಿರುವ ಈ ಪ್ರತ್ಯೇಕ ತಪಾಸಣೆಯ ಹಿಂದೆ ಆಳವಾದ ಸಂಚಿದೆ ಎಂದವರು ಹೇಳಿದ್ದಾರೆ.

1987 ಕ್ಕಿಂತ ಮೊದಲು ಹುಟ್ಟಿದವರು ತಮ್ಮ ಜನನ ಮತ್ತು ಜನಿಸಿದ ಸ್ಥಳದ ಪುರಾವೆಯನ್ನು ಒದಗಿಸಬೇಕಾಗಿದೆ. 1987ರಿಂದ 2004ರ ನಡುವೆ ಜನಿಸಿದವರು ತಮ್ಮ ಮತ್ತು ತಮ್ಮ ಹೆತ್ತವರ ಪುರಾವೆಯನ್ನು ಸಲ್ಲಿಸಬೇಕಾಗಿದೆ. 2004 ಡಿಸೆಂಬರ್ ನ ಬಳಿಕ ಹುಟ್ಟಿದವರು ತಾವು ಹುಟ್ಟಿದ ದಾಖಲೆ ಮತ್ತು ತಮ್ಮ ಹೆತ್ತವರ ದಾಖಲೆಯನ್ನು ನೀಡಬೇಕಾಗಿದೆ. ಒಂದು ವೇಳೆ ಈ ದಾಖಲೆಯನ್ನು ಸಲ್ಲಿಸುವುದಕ್ಕೆ ಯಾರಾದರೂ ವಿಫಲರಾದರೆ ಅವರ ಹೆಸರನ್ನು ಮತದಾರ ಪಟ್ಟಿಯಿಂದ ಹೊರ ಹಾಕುವ ಸಂಚು ನಡೆಯುತ್ತಿದೆ ಎಂದು ಒಬ್ರಿಯಾನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದಿನೇದಿನೇ ಹಿನ್ನಡೆಯಾಗುತ್ತಿದ್ದು ಅದನ್ನು ತಪ್ಪಿಸುವುದಕ್ಕಾಗಿ ತನಗೆ ಬೇಕಾದಂತೆ ಮತದಾರರ ಪಟ್ಟಿಯನ್ನು ತಯಾರಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳದಲ್ಲಿ ಈ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.