ಸನ್ಮಾರ್ಗ ವಾರ್ತೆ
300 ವರ್ಷಗಳ ಹಳೆಯ ಹಜರತ್ ಜಾಕ್ ಅಲಿಷ ದರ್ಗಾವನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಜುನಾಗಡ್ ಮುನ್ಸಿಪಲ್ ಕಮಿಷನರ್ ಮತ್ತು ಹಿರಿಯ ನಗರ ಯೋಜನಾಧಿಕಾರಿಗೆ ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ ನ ತೀರ್ಪನ್ನು ಉಲ್ಲಂಘಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್ ನ ಆದೇಶವನ್ನು ಅಧಿಕಾರಿಗಳು ಉಲ್ಲಂಘಿಸಿದಂತೆ ಕಾಣಿಸುತ್ತದೆ ಎಂದು ನ್ಯಾಯಾಧೀಶರಾದ ಸುಫಿಯಾ ಮತ್ತು ವಚನೀ ಹೇಳಿದ್ದಾರೆ.
2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಈ ದ್ವಂಸಗೊಳಿಸುವಿಕೆಯು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ದರ್ಗಾದ ಟ್ರಸ್ಟಿಗಳು ಹೈಕೋರ್ಟ್ ಗೆ ದೂರು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ನಗರದ ಹಿರಿಯ ಯೋಜನಾಧಿಕಾರಿ ವಿವೇಕ್ ಕಿರಣ್ ಪರೆಕ್ ಅವರು 2025 ಜನವರಿ 31 ರಂದು ದರ್ಗಾಕ್ಕೆ ನೋಟಿಸಿ ಕಳುಹಿಸಿದ್ದರು. ಜಾಗದ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ಸಲ್ಲಿಸಿ ಎಂದು ಹೇಳಿದ್ದರು. ದಾಖಲೆಗಳನ್ನು ಸಲ್ಲಿಸದಿದ್ದರೆ ಇದನ್ನು ಅನಧಿಕೃತ ಎಂದು ಹೇಳಿ ಧ್ವಂಸ ಮಾಡುತ್ತೇವೆ ಎಂದು ನೋಟಿಸಿನಲ್ಲಿ ಹೇಳಲಾಗಿತ್ತು.
ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಲಾಗಿದೆ.












