ಸನ್ಮಾರ್ಗ ವಾರ್ತೆ
ಗಾಝಾದ ಜನಸಾಮಾನ್ಯರು ಗುಂಪು ಗೂಡಿದ್ದ ಒಂದು ಬೀಚ್ ಕೆಫೆಯ ಮೇಲೆ ಇಸ್ರೇಲ್ ಸೇನೆ 230 ಕಿಲೋ ಬಾರದ ಅಮೆರಿಕ ನಿರ್ಮಿತ ಬಾಂಬ್ ಹಾಕಿರುವುದಾಗಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಈ ಬಾಂಬ್ ಅತ್ಯಂತ ವಿನಾಶಕರ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೂಡ ಅದು ಬರೆದಿದೆ.
ಇದು ಭಾರಿ ಸ್ಪೋಟವನ್ನು ಸೃಷ್ಟಿಸುತ್ತದಲ್ಲದೆ ಆ ಪ್ರದೇಶದ ಅವಶೇಷಗಳನ್ನು ಧೂಳಿನಂತೆ ಹರಡಿ ಬಿಡುತ್ತದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಅಪಾಯಕಾರಿ ಬಾಂಬನ್ನು ಇಸ್ರೇಲ್ ಪ್ರಯೋಗಿಸಿರುವುದಕ್ಕೆ ಪುರಾವೆಗಳು ನಮ್ಮಲ್ಲಿವೆ ಎಂದು ಗಾರ್ಡಿಯನ್ ಪತ್ರಿಕೆ ಬರೆದಿದೆ.
ತಾತ್ಕಾಲಿಕ ಕದನ ವಿರಾಮ ಏರ್ಪಡುವುದಕ್ಕಿಂತ ಎರಡು ದಿವಸಗಳ ಮೊದಲು ಇಸ್ರೇಲ್ ಈ ಬಾಂಬ್ ದಾಳಿ ನಡೆಸಿತ್ತು ಮತ್ತು ಇದರಲ್ಲಿ ಗರಿಷ್ಠ 36 ರಷ್ಟು ಫೆಲೆಸ್ತೀನಿಯರು ಹತ್ಯೆಗೀಡಾಗಿದ್ದಾರೆ ಎಂದು ಪತ್ರಿಕೆ ಬರೆದಿದೆ.
ಪ್ರಮುಖ ಸಿನಿಮಾ ನಿರ್ಮಾಪಕರೂ ಮತ್ತು ಕಲಾಕಾರರೂ ಆಗಿದ್ದ 35 ವರ್ಷದ ಮಹಿಳೆ ಮತ್ತು ನಾಲ್ಕು ವರ್ಷದ ಮಗು ಕೂಡ ಮೃತಪಟ್ಟವರಲ್ಲಿ ಸೇರಿದ್ದಾರೆ.
ಇಲ್ಲಿ ಮಹಿಳೆಯರು ಮಕ್ಕಳು ಮತ್ತು ಹಿರಿಯರು ಸಹಿತ ಸಾಮಾನ್ಯ ನಾಗರಿಕರು ಇದ್ದಾರೆ ಅನ್ನುವುದು ಗೊತ್ತಿದ್ದು ಕೂಡ ಇಸ್ರೇಲ್ ಈ ಬಾಂಬ್ ದಾಳಿ ನಡೆಸಿದೆ ಎಂದು ಪತ್ರಿಕೆ ಬರೆದಿದೆ.
ಅಲ್ ಬಖಾ ಕೆಫೆಯಲ್ಲಿ ಸಿಕ್ಕಿರುವ ಅವಶೇಷಗಳಲ್ಲಿ ಈ ಮಾರಕ ಬಾಂಬಿನ ವಿವಿಧ ಭಾಗಗಳು ಪತ್ತೆಯಾಗಿವೆ. ಇದನ್ನು ಪರಿಶೀಲಿಸಿ ತಜ್ಞರು ಇದು 230 ಕಿಲೋ ಭಾರದ ಬಾಂಬ್ ಆಗಿದೆ ಎಂದು ತಿಳಿಸಿದ್ದಾರೆ.












