ಕೇರಳದ ನರ್ಸ್ ನಿಮಿಷಪ್ರಿಯ ಬಿಡುಗಡೆಗಾಗಿ ಮಧ್ಯಪ್ರವೇಶಿಸಿದ ಎ ಪಿ ಉಸ್ತಾದ್; ಯೆಮೆನ್ ಸರ್ಕಾರದೊಂದಿಗೆ ಮಾತುಕತೆ: ವರದಿ

0
1095

ಸನ್ಮಾರ್ಗ ವಾರ್ತೆ

ಕೋಝಿಕೋಡ್: ಮರಣದಂಡನೆ ಶಿಕ್ಷೆಗೊಳಗಾಗಿ ಯೆಮೆನ್ ಜೈಲಿನಲ್ಲಿ ಕೇರಳದ ನರ್ಸ್ ನಿಮಿಷಪ್ರಿಯಾ ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ನಾಯಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾ‌ರ್ ಅವರು ಯೆಮೆನ್ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ ಎಂದು ReporterLive.com ವರದಿ ಮಾಡಿದೆ.

ನಿಮಿಷಪ್ರಿಯರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಮಟ್ಟಗಳಲ್ಲಿ ಮಾತುಕತೆ ನಡೆಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕ‌ರ್ ಅವರಿಗೆ ತಕ್ಷಣದ ಹಸ್ತಕ್ಷೇಪಕ್ಕೆ ಮನವಿ ಪತ್ರ ಕಳುಹಿಸಿದ್ದಾರೆ.

ಈ ಮಧ್ಯೆ ನಿಮಿಷಪ್ರಿಯಾ ಪರವಾಗಿ ಹಲವು ರಾಜಕೀಯ ನಾಯಕರು ಹಾಗೂ ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸದ ಕೆ.ಸಿ. ವೇಣುಗೋಪಾಲ್ ಅವರು ಕೂಡ ಪ್ರಧಾನಿಗೆ ಮತ್ತೊಂದು ಪತ್ರ ಬರೆದು ಬಿಡುಗಡೆ ಪಯತ್ನಿಸುವಂತೆ ಆಗ್ರಹಿಸಿದ್ದಾರೆ. ಸಂಸದರಾದ ಕೆ. ರಾಧಾಕೃಷ್ಣನ್, ಜಾನ್ ಬ್ರಿಟ್ನಾಸ್, ಕೋಡಿಕುನ್ನಿಲ್ ಸುರೇಶ್, ಶಾಸಕ ಚಾಂಡಿ ಉಮ್ಮನ್, ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ಹಾಗೂ ಕೇರಳ ಕಾಂಗ್ರೆಸ್‌ ಎಂ ಅಧ್ಯಕ್ಷ ಜೋಸ್ ಕೆ. ಮಣಿ ಅವರೂ ಮಧ್ಯಪ್ರವೇಶಕ್ಕೆ ಮುಂದಾಗಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಪ್ರಿಯಾ 2017 ರಿಂದ ಯೆಮೆನ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಯೆಮೆನ್ ಪ್ರಜೆ ತಲಾಲ್ ಅಬ್ದು ಮಹಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರು ತಪ್ಪಿತಸ್ಥರೆಂದು ಮರಣದಂಡನೆ ವಿಧಿಸಲಾಗಿದೆ. ಈ ತೀರ್ಪು ಜುಲೈ 16 ರಂದು ಜಾರಿಗೊಳಿಸಲಾಗುವುದು ಎಂದು ಯೆಮೆನ್ ಸುಪ್ರೀಂ ಕೋರ್ಟ್ ಈಗಾಗಲೇ ತಿಳಿಸಿದೆ.

ಇದೀಗ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ನೇರ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅವರು, ಯೆಮೆನ್ ನಾಗರಿಕರ ಸಂಬಂಧಿಕರೊಂದಿಗೆ ನಡೆದ ಸಂವಾದದಿಂದ ಪ್ರಕರಣದಲ್ಲಿ ಭರವಸೆ ಮೂಡಿದ್ದು, ಈ ಬೆಳವಣಿಗೆಗಳು ನಿಮಿಷಪ್ರಿಯ ಬಿಡುಗಡೆಯ ಆಶಾಭಾವನೆ ಮೂಡಿಸಿದೆ.