ಸನ್ಮಾರ್ಗ ವಾರ್ತೆ
• ಎಂ.ಆರ್.ಮಾನ್ವಿ
‘ಡಿಜಿಟಲ್ ಭಾರತ’ ಅಭಿಯಾನದಿಂದ ದೇಶದಾದ್ಯಂತ ಯುಪಿಐ (UPI) ಪಾವತಿಗಳು ಹೆಚ್ಚಾಗಿದ್ದು, ನಗದು ರಹಿತ ವಹಿವಾಟು ಉತ್ತೇಜನವಾಗಿದೆ. ಆದರೆ ಬೆಂಗಳೂರಿನ ಸಾವಿರಾರು ಚಿಲ್ಲರೆ ವ್ಯಾಪಾರಿಗಳಿಗೆ ಇದೇ ಡಿಜಿಟಲ್ ಕ್ರಾಂತಿ ಇದೀಗ ತೊಂದರೆಯ ಮೂಲವಾಗಿದೆ.
ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದ ಜಿಎಸ್ಟಿ ನೋಟಿಸ್: ಕಳೆದ ಕೆಲ ವರ್ಷಗಳ ಯುಪಿಐ ವಹಿವಾಟಿನ ಡೇಟಾ ಪರಿಶೀಲಿಸಿದ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ, ಸುಮಾರು 14,000 ಚಿಲ್ಲರೆ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಕಳುಹಿಸಿದೆ. ಇದರರ್ಥ – ಯಾರು ವರ್ಷಕ್ಕೆ ರೂ.40 ಲಕ್ಷ (ಸರಕುಗಳಿಗೆ) ಅಥವಾ ರೂ.20 ಲಕ್ಷ (ಸೇವೆಗೆ) ಹೆಚ್ಚು ವ್ಯವಹಾರ ಮಾಡಿದ್ದಾರೋ, ಅವರಿಂದ ತೆರಿಗೆ ಪಾವತಿಸುವಂತೆ ಕೇಳಲಾಗಿದೆ.
ಆದರೆ, ವ್ಯಾಪಾರಿಗಳು ಆರೋಪಿಸುತ್ತಿರುವುದೇನಂದರೆ – ಈ ವಹಿವಾಟಿನಲ್ಲಿ ವೈಯಕ್ತಿಕ ಹಣ ವರ್ಗಾವಣೆಗಳು, ಸಾಲ ಅಥವಾ ಕುಟುಂಬದಿಂದ ಬಂದ ಹಣವನ್ನೂ ವ್ಯಾಪಾರದ ಆದಾಯವೆಂದು ಭಾವಿಸಲಾಗಿದೆ. ಉದಾಹರಣೆಗೆ, ಹಾವೇರಿ ಜಿಲ್ಲೆಯ ತರಕಾರಿ ವ್ಯಾಪಾರಿ ಶಂಕರಗೌಡರಿಗೆ ರೂ.1.63 ಕೋಟಿ ವ್ಯವಹಾರದ ಮೇಲೆ ರೂ.29 ಲಕ್ಷ ತೆರಿಗೆ ಬಾಕಿಯ ನೋಟಿಸ್ ಬಂದಿದೆ – ಆದರೆ ತರಕಾರಿ ಮಾರಾಟಕ್ಕೆ ಜಿಎಸ್ಟಿ ವಿನಾಯಿತಿ ಇದೆ.
ಯುಪಿಐ ಇಲ್ಲ – ಕೇವಲ ನಗದು : ಈ ನೋಟಿಸ್ಗಳಿಂದ ಆತಂಕಗೊಂಡ ಕೆಲವರು ಡಿಜಿಟಲ್ ಪಾವತಿಯನ್ನು ನಿಲ್ಲಿಸಿದ್ದು, ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಶಿವಾಜಿನಗರದಲ್ಲಿ “ಯುಪಿಐ ಇಲ್ಲ, ಕೇವಲ ನಗದು” ಎಂಬ ಫಲಕಗಳು ಕಾಣಿಸುತ್ತಿವೆ.
ಹೊರಮಾವಿನ ಶಂಕರ್ ಎನ್ನುವವರು, “ನಾನು ದಿನಕ್ಕೆ ರೂ.3,000 ವ್ಯಾಪಾರ ಮಾಡುತ್ತೇನೆ. ಈಗ ಯುಪಿಐ ಸ್ವೀಕರಿಸುವ ಭಯವಿದೆ” ಎಂದು ಹೇಳುತ್ತಾರೆ.
ವ್ಯಾಪಾರಿಗಳ ಆಕ್ರೋಶ ಮತ್ತು ಸರ್ಕಾರದ ಸ್ಪಷ್ಟನೆ: ಈ ಜಿಎಸ್ಟಿ ನೋಟೀಸ್ಗಳ ವಿರುದ್ಧ ಜುಲೈ 25ರಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಲಕ್ಷಾಂತರ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳು ಭಾಗವಹಿಸಲಿವೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ನ ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.
ವ್ಯಾಪಾರಿಗಳು ಈ ನೋಟೀಸ್ಗಳನ್ನು “ಅನ್ಯಾಯದ ತೆರಿಗೆ ದಾಳಿ” ಎಂದು ಕರೆದಿದ್ದು, ಕೆಲವರು ಕೋಟಿಗಟ್ಟಲೇ ತೆರಿಗೆ ಬಾಕಿಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು ಈ ನೋಟೀಸ್ಗಳು ಕೇವಲ ತನಿಖೆಗಾಗಿ ಎಂದು ಸ್ಪಷ್ಟಪಡಿಸಿದೆ. “ನಾವು 14,000 ಪ್ರಕರಣಗಳನ್ನು ಗುರುತಿಸಿದ್ದೇವೆ. ವ್ಯಾಪಾರಿಗಳು ತಮ್ಮ ವಹಿವಾಟಿನ ಕುರಿತು ವಿವರಣೆ ನೀಡಬಹುದು. ವಿನಾಯಿತಿ ಸರಕುಗಳನ್ನು ವ್ಯವಹರಿಸುವವರಿಗೆ ತೆರಿಗೆಯ ಪರಿಣಾಮ ಕಡಿಮೆ ಇರುತ್ತದೆ” ಎಂದು ಆಯುಕ್ತ ವಿಪುಲ್ ಬನ್ಸಾಲ್ ‘ಮನಿಕಂಟ್ರೋಲ್’ಗೆ ತಿಳಿಸಿದ್ದಾರೆ.
ಜಿಎಸ್ಟಿ ಕಾಯಿದೆಯ ಸೆಕ್ಷನ್ 22ರ ಪ್ರಕಾರ, ಯಾವುದೇ ರೀತಿಯ ಪಾವತಿಯಿಂದ (ನಗದು, ಯುಪಿಐ, ಬ್ಯಾಂಕ್ ವರ್ಗಾವಣೆ) ವಾರ್ಷಿಕ ವಹಿವಾಟಿನ ಮಿತಿಯನ್ನು ಮೀರಿದವರು ಜಿಎಸ್ಟಿ ನೋಂದಣಿಗೆ ಒಳಪಡಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಡಿಜಿಟಲ್ ಭಾರತಕ್ಕೆ ಧಕ್ಕೆ?: ವ್ಯಾಪಾರಿಗಳು ಯುಪಿಐ ಪಾವತಿಗೆ ಭಯಪಟ್ಟರೆ, ಮತ್ತೊಮ್ಮೆ ನಗದಿನತ್ತ ವಾಪಸ್ಸಾಗುವುದು ಖಚಿತ. ಇದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಔಪಚಾರಿಕರಣ (formalization) ಗುರಿಗೆ ಹೊಡೆತವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಪರಿಹಾರವೇನು?: ಚಿಲ್ಲರೆ ವ್ಯಾಪಾರಿಗಳಿಗೆ ಸರಳ ಜಿಎಸ್ಟಿ ನೋಂದಣಿ ಪ್ರಕ್ರಿಯೆ. ಕಂತುಗಳಲ್ಲಿ ತೆರಿಗೆ ಪಾವತಿ ಸೌಲಭ್ಯ, ವೈಯಕ್ತಿಕ ಪಾವತಿ ಹಾಗೂ ವ್ಯಾಪಾರದ ಆದಾಯವನ್ನೆ ವಿಭಜಿಸುವ ಸ್ಪಷ್ಟ ಮಾರ್ಗ, ಕಾನೂನು ಸಲಹೆಗಾಗಿ ಸಹಾಯವಾಣಿ (1800 425 6300)
ಒಟ್ಟಿನಲ್ಲಿ, ಡಿಜಿಟಲ್ ಭಾರತದ ದಾರಿಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಬೆಂಬಲ ನೀಡದಿದ್ದರೆ, ಯುಪಿಐ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿಯುವ ಜೊತೆಗೆ, ನಗದು ವಹಿವಾಟಿನತ್ತ ಮರಳುವ ಸಾಧ್ಯತೆಯಿದೆ. ಇದರಿಂದಾಗಿ ಭಾರತದ ಆರ್ಥಿಕತೆ ಮೇಲೆ ಬಹುದೊಡ್ಡ ಪರಿಣಾಮ ಉಂಟು ಮಾಡಬಹುದು.












