ಸನ್ಮಾರ್ಗ ವಾರ್ತೆ
ಮುಂಬೈ: ಕರ್ನಾಟಕ ಪೊಲೀಸರಿಂದ ಕಾಡಿನ ಗುಹೆಯೊಂದರಿಂದ ರಕ್ಷಿಸಲ್ಪಟ್ಟ ರಷ್ಯಾದ ಮಹಿಳೆಯೊಬ್ಬರು, ತನ್ನನ್ನು ರಷ್ಯಾಕ್ಕೆ ವಾಪಸ್ ಕಳುಹಿಸಬಾರದು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಷ್ಯಾಕ್ಕೆ ಹಿಂತಿರುಗಿದರೆ ತಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಹೇಳಿರುವ ಆಕೆ, ಭಾರತದಲ್ಲಿಯೇ ಉಳಿಯಲು ಅನುಮತಿ ಕೋರಿದ್ದಾರೆ.
ನೀನಾ ಕುಡಿನಾ (40) ಎಂಬ ಹೆಸರಿನ ರಷ್ಯಾದ ಈ ಮಹಿಳೆ, ತಮ್ಮ ಏಳು ತಿಂಗಳ ಮಗಳು ಪ್ರೇಮಾ ಮತ್ತು ನಾಲ್ಕು ವರ್ಷದ ಅಮಾ ಜೊತೆ ಜುಲೈ 11 ರಂದು ಕಾರವಾರದ ರಾಮತೀರ್ಥ ಮಾಲಾ ಎಂಬ ದೂರದ ಹಳ್ಳಿಯಲ್ಲಿರುವ ಗುಹೆಯಲ್ಲಿ ಪತ್ತೆಯಾಗಿದ್ದರು. ಗೋವಾದಿಂದ ಗೋಕರ್ಣಕ್ಕೆ ಬಂದು, ನಗರದ ಗದ್ದಲದಿಂದ ದೂರವಿರಲು ಮತ್ತು ಧ್ಯಾನ ಮಾಡಲು ಗುಹೆಯಲ್ಲಿ ವಾಸಿಸುತ್ತಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು.
ಪ್ರಸ್ತುತ, ಅವರನ್ನು ಕಾರವಾರದಲ್ಲಿರುವ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಸತಿ ಗೃಹದಲ್ಲಿ ಇರಿಸಲಾಗಿದೆ. ತನ್ನನ್ನು ಶಾಂತಿಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ನೀನಾ, ತಾನು ರಷ್ಯಾಕ್ಕೆ ಹಿಂದಿರುಗಿದರೆ ತನಗೆ ಮತ್ತು ತನ್ನ ಕುಟುಂಬಕ್ಕೆ ಕಠಿಣ ಪರಿಣಾಮ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತನಗೆ ಗುಹೆಯಲ್ಲಿಯೇ ವಾಸಿಸಲು ಅವಕಾಶ ನೀಡಬೇಕು ಅಥವಾ ತನ್ನ ಆಯ್ಕೆಯ ಪ್ರಕಾರ ಬೇರೆ ಯಾವುದೇ ದೇಶಕ್ಕೆ ಹೋಗಲು ಸಹಾಯ ಮಾಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.












