ಸನ್ಮಾರ್ಗ ವಾರ್ತೆ
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಮತಗಳ್ಳತನಕ್ಕೆ ಸಂಬಂಧಿಸಿ ಚುನಾವಣಾ ಆಯೋಗದ ವಿರುದ್ಧ ಗಟ್ಟಿಯಾದ ಸಾಕ್ಷ್ಯ ತನ್ನ ಬಳಿ ಇದೆ ಮತ್ತು ಆಯೋಗ ಬಿಜೆಪಿಗಾಗಿ ಕೆಲಸ ಮಾಡ್ತಾ ಇದೆ ಎಂದು ಪಾರ್ಲಿಮೆಂಟ್ ಸಮುಚ್ಚಯದಲ್ಲಿ ಮಾಧ್ಯಮಗಳ ಜೊತೆ ಮಾತಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತಂತೆ ಆರು ತಿಂಗಳಿನಿಂದ ತನಿಖೆ ನಡೆಸುತ್ತಾ ಇದ್ದೆವು. ಈ ತನಿಖೆಯಿಂದ ನಾವು ದೊಡ್ಡ ಅಣುಬಾಂಬನ್ನೇ ಪತ್ತೆ ಹಚ್ಚಿದ್ದೇವೆ. ಒಂದು ವೇಳೆ ಅದನ್ನು ಬಹಿರಂಗಪಡಿಸಿದರೆ ಚುನಾವಣಾ ಆಯೋಗಕ್ಕೆ ಈ ದೇಶದಲ್ಲಿ ಅಡಗಿಕೊಳ್ಳಲು ಜಾಗ ಸಿಗಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
100% ಸಾಕ್ಷ್ಯಗಳ ಆಧಾರದಲ್ಲಿಯೇ ಈ ಮಾತನ್ನು ಹೇಳುತ್ತಿದ್ದೇನೆ. ನಾವು ಈ ಸತ್ಯಶೋಧನೆಯನ್ನು ಬಹಿರಂಗಪಡಿಸಿದರೆ ಚುನಾವಣಾ ಆಯೋಗ ಮತಗಳ್ಳತನದಲ್ಲಿ ಹೇಗೆ ಭಾಗಿಯಾಗಿದೆ ಎಂಬುದನ್ನು ದೇಶವೇ ತಿಳಿದುಕೊಳ್ಳಲಿದೆ.ಅವರು ಬಿಜೆಪಿಗಾಗಿ ಕೆಲಸ ಮಾಡ್ತಾ ಇದ್ದಾರೆ. ನಾವು ನಮ್ಮದೇ ವತಿಯಿಂದ ಈ ಅನ್ವೇಷಣೆ ನಡೆಸಿದ್ದೇವೆ. ಆರು ತಿಂಗಳಿನಿಂದ ಈ ಕೆಲಸ ನಡೆದಿದೆ ಎಂದವರು ಹೇಳಿದ್ದಾರೆ.












