ಎಸ್ಐಟಿ ತನಿಖೆ ತಿರುವು ಪಡೆಯಿತಾ?

0
278

✍️ ಅಮಾನ್ ಕೆ.

ಎಸ್ಐಟಿ ತನಿಖೆ ಟ್ವಿಸ್ಟ್ ಪಡೆಯುತ್ತಾ ಇದೆಯಾ? ಸೌಜನ್ಯ ಪ್ರಕರಣವನ್ನು ಅದು ತನಿಖೆಗೆ ಎತ್ತಿಕೊಂಡಿದೆಯಾ? ಸೌಜನ್ಯ ಪರ ಹೋರಾಟಗಾರರು ಹಾಗೂ ಸೌಜನ್ಯ ಕುಟುಂಬದವರು ನಿರಂತರ ಆರೋಪಿಸುತ್ತಾ ಬಂದಿರುವ ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ ಮತ್ತು ಮಲಿಕ್ ಜೈನ್ ಅವರನ್ನು ಎಸ್ಐಟಿ ತನಿಖೆಗೆ ಕರೆಸಿರುವುದು ಏನನ್ನು ಸೂಚಿಸುತ್ತದೆ? ಸೌಜನ್ಯ ತಾಯಿ ಕೊಟ್ಟ ದೂರಿನಂತೆ ಎಸ್ಐಟಿ ಇವರನ್ನು ಕರೆದಿದೆಯಾ ಅಥವಾ ಮುಸುಕುಧಾರಿ ಚೆನ್ನಯ್ಯನ ಹೇಳಿಕೆಯ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆದಿದೆಯಾ? ಸೌಜನ್ಯ ಪ್ರಕರಣ ಮತ್ತೊಮ್ಮೆ ಜಿಲ್ಲೆಯನ್ನು ಮತ್ತು ರಾಜ್ಯವನ್ನು ಆವರಿಸಲಿದೆಯಾ? ಬಿಜೆಪಿ ನಿಯೋಗ ಸೌಜನ್ಯ ತಾಯಿಯನ್ನು ಭೇಟಿಯಾದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿರುವುದನ್ನು ಹೇಗೆ ನೋಡಬಹುದು? ಮತ್ತೊಂದು ಸುತ್ತಿನ ಆರೋಪ ಪ್ರತ್ಯಾರೋಪ ಮಾತು ಪ್ರತಿ ಮಾತು ವಾದ ಪ್ರತಿವಾದಗಳಿಗೆ ಎಸ್ಐಟಿ ಬಾಗಿಲು ತೆರೆದಿದೆಯಾ?

ಮಾಸ್ಕ್ ಮ್ಯಾನ್ ಆಗಮನವಾಗುವುದರೊಂದಿಗೆ ದೇಶದ ಗಮನ ಮತ್ತೊಮ್ಮೆ ಧರ್ಮಸ್ಥಳವನ್ನ ಸುತ್ತುವರಿಯಿತು. ರಾಷ್ಟ್ರಮಟ್ಟದ ಮೀಡಿಯಾಗಳು ಧರ್ಮಸ್ಥಳದಲ್ಲಿ ಬಂದು ಬಿಡಾರ ಹೂಡಿದವು. ಮಾಸ್ಕ್ ಮ್ಯಾನ್ ಹಲವು ಕಡೆ ಅಗೆಯಲು ಹೇಳಿದ. ಈ ನಡುವೆ ಸುಜಾತ ಭಟ್ ಎಂಬ ಮಹಿಳೆ ತನ್ನ ಕಾಣೆಯಾದ ಮಗಳ ಬಗ್ಗೆ ದೂರು ನೀಡಿದ್ರು. ಮಾಧ್ಯಮ ವಿಚಾರಣೆಯೂ ನಡೆಯಿತು. ಒಮ್ಮೆ ಮಗಳೇ ಇಲ್ಲ ಅಂದರು. ಆ ಬಳಿಕ ಮಗಳು ಇದ್ದಾಳೆ ಎಂದು ಹೇಳಿದರು. ಇದರ ನಡುವೆಯೇ ತಿಮರೋಡಿ ಬಂಧನವೂ ನಡೆಯಿತು. ಮಟ್ಟಣ್ಣನವರ್ ಅವರ ವಿಚಾರಣೆ ನಡೆಯಿತು. ಮಾಸ್ಕ್ ಮ್ಯಾನ್ ಬಂಧನವಾಯಿತು. ಸುಜಾತ ಭಟ್ ಅವರ ವಿಚಾರಣೆ ನಡೆಯಿತು. ಇವೆಲ್ಲ ನಡೆಯುತ್ತಾ ಇದ್ದಾಗ ಈ ಸೌಜನ್ಯ ಪರ ಹೋರಾಟಗಾರರನ್ನು ವಿರೋಧಿಸುವ ಗುಂಪು ಈ ಎಲ್ಲ ಬೆಳವಣಿಗೆಯನ್ನು ಸ್ವಾಗತಿಸುತ್ತಾ ಹೇಳಿಕೆಗಳನ್ನು ನೀಡುತ್ತಿತ್ತು. ಸೌಜನ್ಯ ಪರ ಹೋರಾಟಗಾರರ ಮೇಲೆ ದಾಳಿ ನಡೆಸ್ತಾ ಇತ್ತು. ಮಾಧ್ಯಮಗಳೂ ಇವರ ಜೊತೆ ಸೇರಿಕೊಂಡವು. ಪ್ರತಿದಿನ ಹತ್ತು ಹಲವು ಸುದ್ದಿಗಳನ್ನು ಅವು ಪ್ರಸಾರ ಮಾಡಿದವು. ಪತ್ರಕರ್ತರ ಮೇಲೆ ದಾಳಿ ನಡೆಯಿತು. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಈ ಎಲ್ಲವೂ ನಡೆಯುತ್ತಾ ಇದ್ರೂ ಎಸ್ಐಟಿ ಯಾವ ಹೇಳಿಕೆಯನ್ನು ಕೊಟ್ಟಿರಲಿಲ್ಲ. ಅದರ ಮೌನವೇ ಈ ಮೀಡಿಯಾಗಳಿಗೆ ಆಹಾರವಾಯಿತು. ಸಿಕ್ಕಸಿಕ್ಕ ಸ್ಟೋರಿಗಳನ್ನು ಮಾಡಿ ರಸವತ್ತಾಗಿ ಅವೆಲ್ಲ ಹಂಚಿಕೊಂಡವು.

ಇದೀಗ ತನಿಖೆ ಇನ್ನೊಂದು ರೂಪವನ್ನು ಪಡೆಯುತ್ತಿರುವಂತಿದೆ. ಸೌಜನ್ಯ ಅಪಹರಣವನ್ನು ತಾನು ನೋಡಿದ್ದೇನೆ ಎಂದು ಓರ್ವ ತಾಯಿ ಈ ನಡುವೆ ಎಸ್ಐಟಿಗೆ ಪತ್ರ ಬರೆದಿದ್ದರು. ಸೌಜನ್ಯ ತಾಯಿಯೂ ಎಸ್ಐಟಿಗೆ ದೂರು ನೀಡಿದ್ದರು. ಮುಸುಕುಧಾರಿ ಚೆನ್ನಯ್ಯನಿಗೆ ಸೌಜನ್ಯ ಹತ್ಯೆಯ ಬಗ್ಗೆ ಮಾಹಿತಿ ಇದೆ ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು ಎಂದು ಅವರು ಕೋರಿದ್ದರು. ಇದೀಗ ಅವರು ಮತ್ತು ಸೌಜನ್ಯ ಪರ ಹೋರಾಟಗಾರರು ಅನುಮಾನಿಸಿರುವ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ. ಜಿಲ್ಲೆ ಮತ್ತೊಮ್ಮೆ ಸೌಜನ್ಯ ಹತ್ಯೆಯ ಬಗ್ಗೆ ಮಾತಾಡತೊಡಗಿದೆ.

ಮುಸುಕುಧಾರಿ ಚೆನ್ನಯ್ಯ ಮಹತ್ವದ ಮಾಹಿತಿಯನ್ನು ನೀಡಿದ್ದಾನಾ? ಆತನ ಹೇಳಿಕೆಯ ಆಧಾರದಲ್ಲಿ ಈ ವಿಚಾರಣೆ ನಡೆದಿದೆಯಾ? ಮುಂದೆ ಇನ್ನಷ್ಟು ಮಂದಿಯ ವಿಚಾರಣೆ ನಡೆಯಲಿಕ್ಕಿದೆಯಾ?

ಅಂತೂ ಸೌಜನ್ಯ ಪ್ರಕರಣ ಕೊನೆಗೊಳ್ಳುವಂತೆ ಕಾಣಿಸುತ್ತಿಲ್ಲ. ಅಪರಾಧ ಸಾಬೀತಾಗದೆ ಸಂತೋಷ ರಾವ್ ಬಿಡುಗಡೆಗೊಂಡಿದ್ದಾನೆ. ಹಾಗಿದ್ರೆ ಹತ್ಯೆ ನಡೆಸಿದವರು ಯಾರು ಎಂಬ ಪ್ರಶ್ನೆ ಕಳೆದೊಂದು ದಶಕದಿಂದ ಜಿಲ್ಲೆಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇದೆ. ಇದೀಗ ಎಸ್ಐಟಿ ವಿಚಾರಣೆ ನಡೆಸಿರುವ ಮೂವರು ಈ ಹಿಂದೆಯೂ ವಿಚಾರಣೆಗೆ ಒಳಗಾಗಿದ್ದಾರೆ. ಅವರನ್ನು ವಿವಿಧ ಪರೀಕ್ಷೆಗಳಿಗೂ ಒಳಪಡಿಸಲಾಗಿದೆ. ಇದೀಗ ಮರಳಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ತಿಮರೋಡಿ ವಿರೋಧಿ ಗುಂಪು ಹೇಗೆ ನೋಡುತ್ತದೆ ಅನ್ನುವ ಕುತೂಹಲ ಜಿಲ್ಲೆಯಲ್ಲಿದೆ. ಇದನ್ನು ಷಡ್ಯಂತ್ರ ಅನ್ನುತ್ತಾ? ರಾಜಕೀಯ ಅನ್ನುತ್ತಾ ಅಥವಾ ಸ್ವಾಗತಿಸುತ್ತಾ ಎಂಬ ಪ್ರಶ್ನೆಗಳು ಸಹಜವಾಗಿಯೇ ಉಳಿದುಕೊಂಡಿದೆ. ಈವರೆಗೆ ಸಿಟ್ ತನಿಖೆಯನ್ನು ಬೆಂಬಲಿಸುತ್ತಾ ಪ್ರಶಂಸಿಸುತ್ತಾ ಬಂದ ಈ ಗುಂಪು ದಿಡೀರನೆ ಉಲ್ಟಾ ಹೊಡೆದರೆ ಅದು ಅವರ ಮೇಲಿನ ವಿಶ್ವಾಸವನ್ನೇ ಕಡಿಮೆಗೊಳಿಸಬಹುದು. ಈ ಭಯ ಈ ಗುಂಪಿಗೆ ಇದ್ದೆ ಇದೆ. ಈ ಹಿನ್ನೆಲೆಯಲ್ಲಿ ನೋಡಿದ್ರೆ ಎಸ್ಐಟಿ ಬುದ್ಧಿವಂತಿಕೆಯಿಂದಲೇ ಈ ತನಿಖೆಯನ್ನು ಆರಂಭಿಸಿತ್ತಾ ಅನ್ನುವ ಅನುಮಾನವೂ ಕಾಡ್ತಾ ಇದೆ. ಆರಂಭದಲ್ಲಿ ಸೌಜನ್ಯ ಪರ ಹೋರಾಟಗಾರರನ್ನೇ ಗುರಿಯಾಗಿಸಿ ತನಿಖೆ ನಡೆಸುವುದು ಮತ್ತು ಆ ಮೂಲಕ ಅವರ ವಿರೋಧಿ ಗುಂಪಿನ ವಿಶ್ವಾಸವನ್ನು ಗಳಿಸಿಕೊಳ್ಳುವುದು ಅದರ ತಂತ್ರವಾಗಿತ್ತಾ ಎಂಬ ಪ್ರಶ್ನೆಯು ಏಳುತ್ತದೆ. ಒಂದು ವೇಳೆ ಹೌದು ಎಂದಾದರೆ ಆ ತಂತ್ರದಲ್ಲಿ ಎಸ್ಐಟಿ ಯಶಸ್ವಿಯಾಗಿದೆ. ಇದೀಗ ಎಸ್ಐಟಿ ತನಿಖೆಯ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸದ ಪರಿಸ್ಥಿತಿ ಉಂಟಾಗಿದೆ.