ಜನಸಾಮಾನ್ಯರ ಸಮಸ್ಯೆಗೆ ಧ್ವನಿ ಆಗಬಹುದಾದ ಅವಕಾಶವನ್ನು ಕಳಕೊಂಡ ಬಿಜೆಪಿ

0
455

✍️ ಅಮಾನ್ ಕೆ.

ಈ ವಾರದ ಆರಂಭದಲ್ಲಿ ಎರಡೆರಡು ಚಲೋಗಳು ಧರ್ಮಸ್ಥಳಕ್ಕೆ ಬಂದವು. ಒಂದರ ನೇತೃತ್ವವನ್ನು ವಿಜಯೇಂದ್ರ ವಹಿಸಿಕೊಂಡರೆ ಇನ್ನೊಂದರ ನೇತೃತ್ವವನ್ನು ನಿಖಿಲ್ ಕುಮಾರಸ್ವಾಮಿ ವಹಿಸಿಕೊಂಡರು. ಇಬ್ಬರದ್ದೂ ಒಂದೇ ಭಾಷೆ. ಒಂದೇ ಗುರಿ. ಒಂದೇ ಮಾತು. ಆದರೆ ಇವರಿಬ್ಬರೂ ಬೇರೆ ಬೇರೆಯಾಗಿಯೇ ಯಾಕೆ ಚಲೋ ಮಾಡಿದ್ರು ಅನ್ನೋದು ಗೊತ್ತಾಗ್ತಾ ಇಲ್ಲ. ವಿಜಯೇಂದ್ರ ಸೌಜನ್ಯ ಮನೆಗೆ ಭೇಟಿ ಕೊಟ್ಟರೆ ನಿಖಿಲ್ ಕುಮಾರಸ್ವಾಮಿ ದೂರವೇ ನಿಂತರು.

ಪ್ರಶ್ನೆ ಇರೋದು ಈ ಚಲೋದ ಬಗ್ಗೆ ಅಲ್ಲ. ಅದಕ್ಕವರು ಸ್ವತಂತ್ರರು. ಆದರೆ ನಿಜಕ್ಕೂ ಈ ಚಲೋ ಧರ್ಮಸ್ಥಳದಲ್ಲೇ ನಿಲ್ಲಬೇಕಿತ್ತಾ ಅಥವಾ ತುಸು ದೂರದ ಮಂಗಳೂರಿನವರೆಗೂ ಬರಬೇಕಿತ್ತ ಅನ್ನುವ ಪ್ರಶ್ನೆ ಬಹಳ ಮುಖ್ಯ. ಯಾಕಂದ್ರೆ ಮಂಗಳೂರಲ್ಲಿ ಜನಸಾಮಾನ್ಯರ ನಡುವೆ ಚರ್ಚೆ ಆಗ್ತಾ ಇರೋದು ಕೆಂಪು ಕಲ್ಲು ಮತ್ತು ಮರಳು. ಈ ಎರಡಕ್ಕೂ ಸದ್ಯ ನಿಷೇಧ ಬಿದ್ದಿರುವುದರಿಂದ ಸಾವಿರಾರು ಕುಟುಂಬಗಳೇ ಸಂಕಷ್ಟ ಪಡ್ತಾ ಇದೆ. ನಿರ್ಮಾಣ ಕಾಮಗಾರಿಯಿಂದ ಹಿಡಿದು ಎಲ್ಲವೂ ನಿಂತುಹೋಗಿದೆ. ಲಾರಿಗಳಿಗೆ ಬಾಡಿಗೆ ಇಲ್ಲ. ಕಾರ್ಮಿಕರಿಗೆ ಕೆಲಸ ಇಲ್ಲ. ಅಂಗಡಿಗಳಿಗೆ ವ್ಯಾಪಾರ ಇಲ್ಲ.

ಇತ್ತೀಚೆಗಷ್ಟೇ ಓರ್ವ ಮೇಸ್ತ್ರಿ ಕೆಲಸಗಾರ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಮಾಡಲು ಬೇರೆ ಉದ್ಯೋಗ ಇಲ್ಲದೆ ಕೈಯಲ್ಲಿ ಕಾಸೂ ಇಲ್ಲದೆ ಕಾರ್ಮಿಕರು, ಡ್ರೈವರ್ ಗಳು ಕಷ್ಟ ಪಡ್ತಾ ಇದ್ದಾರೆ. ಲಕ್ಷಾಂತರ ರೂಪಾಯಿ ಲೋನ್ ಪಡೆದು ಲಾರಿಯನ್ನು ಖರೀದಿಸಿದವರಿದ್ದಾರೆ. ಪ್ರತಿದಿನ ದುಡಿದು ಪತ್ನಿ ಮಕ್ಕಳನ್ನು ಸಾಕುವ ಕಾರ್ಮಿಕರಿದ್ದಾರೆ. ಇವರಲ್ಲಿ ಕಾಸಾದರೆ ಮಾತ್ರ ಅಂಗಡಿಗಳಿಗೆ ವ್ಯಾಪಾರ ಆಗುತ್ತದೆ. ದಿನಸಿ ಅಂಗಡಿಗಳಿಂದ ಹಿಡಿದು ಇನ್ನಿತರ ಪೀಠೋಪಕರಣ ಅಂಗಡಿಗಳವರೆಗೆ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ.

ಆದರೆ ಬಿಜೆಪಿಗೆ ಈ ಬಗ್ಗೆ ಕಾಳಜಿಯೇ ಇಲ್ಲ ಅನ್ನೋದು ಅವರ ಚಲೋ ಧರ್ಮಸ್ಥಳಕ್ಕೆ ಕೊನೆಗೊಂಡದ್ದರಲ್ಲಿ ಗೊತ್ತಾಗುತ್ತದೆ.

ಪ್ರತಿದಿನ ಬೆಳಗ್ಗೆನಿಂದ ಸಂಜೆವರೆಗೆ ಬಿಜೆಪಿ ಮಾತಾಡೋದು ಹಿಂದೂ ಮುಸ್ಲಿಂ ಇಶ್ಯೂ ಬಗ್ಗೆ ಮಾತ್ರ. ಈಗ ಬಾನು ಮುಸ್ತಾಕ್ ಸಿಕ್ಕಿದ್ದಾರೆ. ಇದಕ್ಕಿಂತ ಮೊದಲು ಯೂಟ್ಯೂಬರ್ ಸಮೀರ್ ಸಿಕ್ಕಿದ್ದ. ಮಸೀದಿಯನ್ನು ಅಗೆದಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಬರೇ ಮುಸ್ಲಿಂ ಮುಸ್ಲಿಂ ಮುಸ್ಲಿಂ ಎಂಬುದೇ ಬಿಜೆಪಿಯ ಒನ್ ಪಾಯಿಂಟ್ ಅಜೆಂಡ ಆಗಿಬಿಟ್ಟಿದೆ.

ನಿಜವಾಗಿ ಸೌಜನ್ಯ ಪರ ಹೋರಾಟಗಾರರ ಗುಂಪು ಮತ್ತು ಈ ಹೋರಾಟಗಾರರನ್ನು ವಿರೋಧಿಸುವವರ ಗುಂಪು ಎರಡರಲ್ಲೂ ಇರುವುದು ಹಿಂದುಗಳೇ. ಇದೀಗ ಶಿವಮೊಗ್ಗದಿಂದ ಈಶ್ವರಪ್ಪ ಅವರು ಧರ್ಮಸ್ಥಳ ಛಲೋ ಯಾತ್ರೆ ಪ್ರಾರಂಭಿಸಿದ್ದಾರೆ. ಅದರಲ್ಲೂ ಇರೋದು ಹಿಂದುಗಳೇ. ಈ ತಿಮರೋಡಿ ಆಗಲಿ ಮಟ್ಟಣ್ಣ ಆಗಲಿ ಎಲ್ಲರೂ ಬಿಜೆಪಿ ನಾಯಕರಿಗೆ ಅತ್ಯಂತ ಹತ್ತಿರದಿಂದ ಪರಿಚಿತರೇ ಆಗಿದ್ದಾರೆ.

ಇಷ್ಟಿದ್ದೂ ಈ ಪ್ರಕರಣಕ್ಕೆ ಮುಸ್ಲಿಂ ಟ್ವಿಸ್ಟ್ ಕೊಡಲು ಯತ್ನಿಸುತ್ತಿರುವುದರ ಉದ್ದೇಶ ಏನು ಅಂತ ಬೇರೆ ಹೇಳಬೇಕಾಗಿಲ್ಲ. ಒಬ್ಬ ವ್ಯಕ್ತಿಯಂತೂ ಮಾಸ್ಕ್ ಮ್ಯಾನ್ ಚೆನ್ನಯ್ಯನಂತೆ ಮಾಸ್ಕ್ ಹಾಕಿಕೊಂಡು ತಿಮರೋಡಿಯನ್ನು ಮಟ್ಟಣ್ಣರನ್ನು ಮುಸ್ಲಿಮ್ ಎಂದು ಹೇಳಿದ. ಈ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಬೇಕು ಅನ್ನುವ ದುರುದ್ದೇಶ ಮತ್ತು ಷಡ್ಯಂತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಇದೆ ಅನ್ನೋದಕ್ಕೆ ಈ ವ್ಯಕ್ತಿಯನ್ನು ಪ್ಲಾಂಟ್ ಮಾಡಿರುವುದೇ ಸಾಕ್ಷಿ.

ನಿಜವಾಗಿ ಎಸ್ಐಟಿ ತನಿಖೆಗೆ ಅಡೆತಡೆ ಇದ್ದರೆ ಅದು ಬಿಜೆಪಿಯಿಂದಲೇ ಹೊರತು ಇನ್ನಾರಿಂದಲೂ ಅಲ್ಲ. ಆರಂಭದಲ್ಲಿ ಇದೇ ಬಿಜೆಪಿ ಎಸ್ಐಟಿ ತನಿಖೆಯನ್ನು ಸ್ವಾಗತಿಸಿತ್ತು. ಸೌಜನ್ಯ ಪರ ಹೋರಾಟಗಾರರೂ ಸ್ವಾಗತಿಸಿದ್ದರು. ಅವರನ್ನು ವಿರೋಧಿಸುವ ಗುಂಪೂ ಸಾಗತಿಸಿತು. ಈಗ ಬಿಜೆಪಿಯೇ NIA ತನಿಖೆ ಬೇಕು ಅಂತ ಹೇಳ್ತಾ ಇದೆ. ಎಸ್ಐಟಿ ವರದಿಗೂ ಅದು ಕಾಯ್ತಾ ಇಲ್ಲ.

ಅಂದರೆ ಬಿಜೆಪಿಯಲ್ಲಿ ಗೊಂದಲ ಇದೆ. ಪ್ರಕರಣದ ಬಗ್ಗೆ ಕ್ಲಾರಿಟಿ ಇಲ್ಲ. ಅದಕ್ಕೆ ಸತ್ಯ ಹೊರಬರಬೇಕಾಗಿಯೂ ಇಲ್ಲ ಎಂದೇ ಕಾಣಿಸುತ್ತದೆ. ರಾಜಕೀಯ ಮೈಲೇಜ್ ಪಡಕೊಳ್ಳುವುದು ಅಷ್ಟೇ ಅದರ ಗುರಿ ಎಂಬುದು ಅದರ ವರ್ತನೆಯಿಂದ ಸ್ಪಷ್ಟವಾಗುತ್ತೆ. ಕನಿಷ್ಠ ಪಕ್ಷದೊಳಗಿನ ಜಗಳವನ್ನು ಜನರ ಕಣ್ಣಿಗೆ ಕಾಣದಂತೆ ಅಡಗಿಸಿ ಡುವುದಕ್ಕೂ ಅದಕ್ಕೆ ಸಾಧ್ಯ ಆಗ್ತಾ ಇಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಕನಿಷ್ಠ ಜೊತೆ ಕರೆದುಕೊಂಡು ಬರಲೂ ಬಿಜೆಪಿಗೆ ಸಾಧ್ಯ ಆಗ್ತಾ ಇಲ್ಲ. ಒಂದು ಬಗೆಯ ಅಸಮಾಧಾನದ ಹೊಗೆ ಬಿಜೆಪಿಯ ಒಳಗಡೆ ಇದೆ. ಅದನ್ನು ಮರೆಮಾಚುವುದಕ್ಕಾಗಿ ಅದು ಭಾನು ಮುಸ್ತಾಕರನ್ನು ಎಸ್ಐಟಿಯನ್ನು ಧರ್ಮಸ್ಥಳವನ್ನು ಪರದೆಯಾಗಿ ಬಳಸಿಕೊಳ್ಳುತ್ತಾ ಇದೆ ಎಂದೇ ಕಾಣಿಸುತ್ತದೆ.

ಒಂದು ವೇಳೆ ಜನರ ಬಗ್ಗೆ ನಿಜಕ್ಕೂ ಅದಕ್ಕೆ ಕಾಳಜಿ ಇರುತ್ತಿದ್ದರೆ ಅದು ಧರ್ಮಸ್ಥಳದವರೆಗೆ ಬಂದ ನಿಯೋಗವನ್ನು ಮಂಗಳೂರಿನವರೆಗೆ ಮುಂದುವರಿಸುತ್ತಿತ್ತು. ಪ್ರಮುಖ ನಾಯಕರನ್ನು ಹೊಂದಿದ್ದ ಆ ನಿಯೋಗ ಮಂಗಳೂರಿನಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿ ಜನಸಾಮಾನ್ಯರ ಸಮಸ್ಯೆಗಳತ್ತ ಬೆಳಕು ಚೆಲ್ತಾ ಇದ್ರೆ , ಸಾವಿರಾರು ಕುಟುಂಬಗಳು ಖುಷಿಪಡ್ತಾ ಇತ್ತು. ಮರಳು ಮತ್ತು ಕೆಂಪು ಕಲ್ಲಿನ ವಿಷಯದಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ಬೀಳ್ತಾ ಇತ್ತು. ದುರ್ಬಲರು ಕಾರ್ಮಿಕರು ಮತ್ತು ಜನಸಾಮಾನ್ಯರು ಇವರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡ್ತಾ ಇದ್ದರು.

ಆದರೆ ಬಿಜೆಪಿ ಸೌಜನ್ಯ ಮನೆಯಿಂದ ನೇರ ಬೆಂಗಳೂರಿಗೆ ಹೊರಟು ಹೋಗುವ ಮೂಲಕ ತನ್ನದು ರಾಜಕೀಯ ಮೈಲೇಜ್ ನ ಚಲೋ ಎಂಬುದನ್ನು ಸಾಬೀತುಪಡಿಸಿತು.