ಸನ್ಮಾರ್ಗ ವಾರ್ತೆ
ಸಹರಾನ್ಪುರ, (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಹೋದ ಮುಸ್ಲಿಂ ತಂದೆಯ ಮೇಲೆಯೇ ನಿರ್ದಯವಾಗಿ ಹಲ್ಲೆ ನಡೆದಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹಲ್ಲೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ಮಗಳ ಮೇಲೆ ಶಾಲೆಯ ವಿದ್ಯಾರ್ಥಿಯೊಬ್ಬ ನಿರಂತರ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ, ಸಂತ್ರಸ್ತೆಯ ತಂದೆ ಪ್ರಾಂಶುಪಾಲರನ್ನು ಭೇಟಿಯಾಗಿದ್ದರು. ಆದರೆ, ದೂರು ಸ್ವೀಕರಿಸುವ ಬದಲು, ಪ್ರಾಂಶುಪಾಲರು ಹೊರಗಿನವರನ್ನು ಕರೆಸಿ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ತಂದೆ, ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಂಶುಪಾಲರು ಹಲ್ಲೆಯ ಆರೋಪವನ್ನು ನಿರಾಕರಿಸಿದರೂ, ಕುಟುಂಬವು ಪ್ರಾಂಶುಪಾಲರ ಹೇಳಿಕೆಯನ್ನು ತಳ್ಳಿಹಾಕಿದೆ. ಬಾಲಕಿ ಈ ಹಿಂದೆಯೇ ಕಿರುಕುಳದ ಬಗ್ಗೆ ದೂರು ನೀಡಿದ್ದರೂ, ಶಾಲಾ ಆಡಳಿತ ಮಂಡಳಿ ನಿರ್ಲಕ್ಷಿಸಿತ್ತು ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸ್ಥಳೀಯ ಸಮುದಾಯದಲ್ಲಿ ತೀವ್ರ ಕೋಪವನ್ನು ಹುಟ್ಟುಹಾಕಿದ್ದು, ಮಗಳ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರು ನೀಡಿದ ತಂದೆಯೇ ಹಲ್ಲೆಗೆ ಗುರಿಯಾದರೆ ಈ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಹೇಗೆ ಸುರಕ್ಷಿತರಾಗುತ್ತಾರೆ?” ಎಂದು ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ.
ಪೊಲೀಸರಿಗೆ ತಿಳಿಸದೆ ಸ್ವತಃ ಕ್ರಮ ಕೈಗೊಂಡ ಪ್ರಾಂಶುಪಾಲರ ನಡವಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಒಳಗಾಗಿದೆ.












