✍️ ಖುದ್ಸಿಯಾ ಬಾನು, ಲಿಂಗಸುಗೂರು
ಅನಾದಿಕಾಲದಿಂದಲೂ ಸ್ತ್ರೀ ಕುಲದ ಸ್ಥಿತಿ ಶೋಚನೀಯವಾಗಿದೆ. ಹೆಣ್ಣನ್ನು ಸಮಾಜ ಶೋಷಣೆ, ಅತ್ಯಾಚಾರ ಎಂಬ ಆಟಕ್ಕೆ ಕೈಗೆಟುಕಿದ ಗೊಂಬೆಯಂತೆ ನಡೆಸುತ್ತಾ ಬಂದಿದೆ.
ಪ್ರಾಚ್ಯ ಕಾಲಮಾನದಲ್ಲಿ ಜಗತ್ತಿನ ಬಹಳಷ್ಟು ಭಾಗಗಳಲ್ಲಿ ಹೆಣ್ಣಿಗೆ ಪುರುಷರಿಗಿಂತ ಕನಿಷ್ಠ ಸ್ಥಾನಮಾನ ಎಂದು ಪರಿಗಣಿಸಲಾಗುತ್ತಿತ್ತು. ಗ್ರೀಸ್ನ ತತ್ವಜ್ಞಾನಿ ಸಾಕ್ರೇಟಿಸ್ ಹೆಣ್ಣಿನ ಸ್ಥಾನದ ಬಗ್ಗೆ ಹೀಗೆ ಹೇಳಿದ್ದರು,
“ಹೆಣ್ಣು ಜಗತ್ತಿನ ಅತಿದೊಡ್ಡ ಅರಾಜಕತೆ, ಗೊಂದಲಗಳ ಉಗಮಸ್ಥಾನವಾಗಿದ್ದಾಳೆ. ಅವಳ ಉದಾಹರಣೆ `ದಫಾಲ’ ಮರದಂತಿದೆ. ಅದು ಬಾಹ್ಯ ನೋಟಕ್ಕೆ ಸುಂದರವಾಗಿ ಕಂಡರೂ ಗುಬ್ಬಚ್ಚಿಗಳು ತಿಂದಲ್ಲಿ ಖಂಡಿತ ಸಾಯುವವು.”
ಯುರೋಪ್ನಲ್ಲಿ ಮಹಿಳೆಯು ಸ್ವತಂತ್ರವಾಗಿ ಯಾವುದೇ ವ್ಯವಹಾರ ಮಾಡುವಂತಿರಲಿಲ್ಲ. ಆಕೆಗೆ ಸ್ವಂತ ದುಡಿದು ತಿನ್ನುವ ಮತ್ತು ತನ್ನಿಷ್ಟದಂತೆ ವಿವಾಹ ಮಾಡಿಕೊಳ್ಳುವ ಅಧಿಕಾರವೂ ಇರಲಿಲ್ಲ. ಹೆಣ್ಣನ್ನು ಹೆತ್ತವರ ಸ್ವತ್ತೆಂದು ಪರಿಗಣಿಸಲಾಗುತ್ತಿತ್ತು. ಆಕೆಯನ್ನು ಅವರು ಬಯಸಿದವನಿಗೆ ವಿವಾಹ ಮಾಡಿಕೊಡುತ್ತಿದ್ದರು. ಮದುವೆ ಒಂದು ವ್ಯಾಪಾರವಾಗಿತ್ತು. ಹೆತ್ತವರು ತಮ್ಮ ಮಗಳನ್ನು ಗಂಡಸರಿಗೆ ಮಾರುತ್ತಿದ್ದರು. ಪತಿ ಬಯಸಿದಾಗ ಪತ್ನಿಯನ್ನು ತೊರೆಯಬಹುದಾಗಿತ್ತು. ಆದರೆ ಪತ್ನಿಗೆ ಯಾವ ಪರಿಸ್ಥಿತಿಯಲ್ಲೂ ಬಿಡುಗಡೆ ಪಡೆಯುವ ಹಕ್ಕು ಹೊಂದಿರಲಿಲ್ಲ.
ಮಧ್ಯ ಏಶ್ಯಾ ಕಾನೂನಿನ ಪ್ರಕಾರ ಪುರುಷ ವಾರೀಸುದಾರನು ಇರುವಾಗ ಮಹಿಳೆಗೆ ವಾರೀಸು ಹಕ್ಕು ಇರುವುದಿಲ್ಲ. ಇದೇ ರೀತಿ ಮಹಿಳೆಗೆ ದ್ವಿತೀಯ ವಿವಾಹದ ಅವಕಾಶವಿರುವುದಿಲ್ಲ. (ಎನ್ಸೈ ಕ್ಲೋಪಿಡಿಯಾ ಬ್ರಿಟಾನಿಕಾ)
ಗ್ರೀಸ್ ಮತ್ತು ರೋಮ್ನಲ್ಲಿ ಸ್ತ್ರೀ ಕುಲವನ್ನು ಕುರಿತು ಹೀಗೆ ಹೇಳಲಾಗುತ್ತಿತ್ತು. “ಬೆಂಕಿ ತಾಗಿದರೆ ಮತ್ತು ಹಾವು ಕಚ್ಚಿದರೆ ಅದಕ್ಕೆ ಪರಿಹಾರವಿದೆ. ಆದರೆ ಮಹಿಳೆಯ ಕೇಡನ್ನು ನಿವಾರಿಸುವ ಮದ್ದಿಲ್ಲ.” ನಿಡೋರಾ ಎಂಬೋರ್ವ ಪೌರಾಣಿಕ ಮಹಿಳೆಯೇ ಎಲ್ಲ ಲೌಕಿಕ ವಿಪತ್ತು ಮತ್ತು ವಿಘ್ನಗಳ ಮೂಲವೆಂದು ಭಾವಿಸುತ್ತಿದ್ದರು.
ಮಧ್ಯಕಾಲೀನ ಭಾರತದಲ್ಲಿ ಪ್ರಚಲಿತವಿದ್ದ ಸತಿ ಪದ್ಧತಿ ಮಹಿಳೆಯ ಕೆಳಸ್ಥಾನದ ಬಗ್ಗೆ ತಿಳಿಸುತ್ತದೆ. ಈ ಪದ್ಧತಿಯ ಅನುಸಾರ ಪತಿಯ ಮರಣದ ಬಳಿಕ ಆಕೆಯ ಜೀವಿಸುವ ಹಕ್ಕನ್ನು ಕಸಿಯಲಾಗುತ್ತಿತ್ತು.
ಇತರ ದೇಶಗಳಂತೆ ಅರಬ್ ದೇಶದ ಸಮಾಜವೂ ಹೊರತಾಗಿರಲಿಲ್ಲ. ಸ್ತ್ರೀಯನ್ನು ನಿರ್ಜೀವ ವಸ್ತುವಿನಂತೆ ಕೀಳಾಗಿ ಕಾಣುತ್ತಿದ್ದರು. ಇಲ್ಲಿಯೂ ಕೂಡ ಮಹಿಳೆಯರನ್ನು ಪುರುಷರಿಗಿಂತ ಕೆಳ ದರ್ಜೆಯ ವರ್ಗವೆಂದು ಪರಿಗಣಿಸಲಾಗುತ್ತಿತ್ತು. ಹೆಣ್ಣು ಹುಟ್ಟಿದರೆ ಬೇಡವಾದ ವಸ್ತು, ತನ್ನ ತಲೆಯ ಭಾರವೆಂದು ತಿಳಿದು ಜೀವಂತವಾಗಿ ಹೂಳಿಬಿಡುತ್ತಿದ್ದರು. ಹೆಣ್ಣು ಮಗುವಿನ ಜನನ ಅಪಮಾನ ಹಾಗೂ ದುಃಖದ ಸಂಕೇತವಾಗಿತ್ತು.
ಬೇರೆ ದೇಶಗಳಂತೆ ಅರಬ್ ದೇಶದಲ್ಲಿಯೂ ಕೂಡ ಹೆಣ್ಣನ್ನು ದೈಹಿಕ ಆಸೆಯನ್ನು ಈಡೇರಿಸಿಕೊಳ್ಳುವ ಒಂದು ಸಂಭೋಗದ ವಸ್ತು ಎಂದು ತಿಳಿದುಕೊಳ್ಳುತ್ತಿದ್ದರೆ ವಿನಃ ಅವಳನ್ನು ಆತ್ಮ, ಜೀವ ಸಂವೇದನೆ, ನೋವು ನಲಿವು ಎಂಬ ಭಾವನೆಯಿರುವ ಒಂದು ಜೀವ ಎಂದು ಅರ್ಥಮಾಡಿಕೊಳ್ಳುವ ಕನಿಷ್ಠ ಸಂವೇದನೆ (ತಿಳುವಳಿಕೆ) ಸಮಾಜದಲ್ಲಿ ಇರಲಿಲ್ಲ.
ಪ್ರವಾದಿ ಮುಹಮ್ಮದ್(ಸ) ಆಗಮನ
ಇಂತಹ ಸಂದಿಗ್ಧ ಕಾಲಮಾನದಲ್ಲಿ ಮುಹಮ್ಮದ್ರ(ಸ) ಆಗಮನ ಆಯಿತು. ಅವರ ಈ ಆಗಮನ ಸ್ತ್ರೀ ಕುಲಕ್ಕೆ ಸಮಗ್ರ ವಿಮೋಚನೆಗೆ ನಾಂದಿ ಆಯಿತು. ಮಹಿಳೆಯ ಸ್ಥಾನವನ್ನು ಪಾತಾಳದಿಂದ ಆಕಾಶದೆತ್ತರಕ್ಕೇರಿಸಿದ ಮಹಾನ್ ದೇವ ಪ್ರವಾದಿ(ಸ) ಅವರು.
ವರ್ತಮಾನದಲ್ಲಿ ಮಹಿಳೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಳು ಎಂದು ಬಾಹ್ಯ ನೋಟಕ್ಕೆ ಕಂಡರು ಕೂಡ ಅವಳು ಆಂತರಿಕವಾಗಿ ಶೋಷಣೆಗೆ ಒಳಪಟ್ಟಿದ್ದಾಳೆ ಎಂಬುದಕ್ಕೆ ಒಂದು ಹೆಣ್ಣು ಭ್ರೂಣವನ್ನು ತಾಯಿಯ ಗರ್ಭದಲ್ಲಿದ್ದಾಗಲೇ ಅವಳ ಜನನದ ಹಕ್ಕನ್ನು ಕಸಿದು, ಅವಳ ಗರ್ಭವನ್ನೇ ಗೋರಿಯಾಗಿ ಪರಿವರ್ತಿಸುವ ಮೂಲಕ ಜಗತ್ತು ತನ್ನ ಆಧುನಿಕ ಅಜ್ಞಾನವನ್ನು ಪ್ರದರ್ಶಿಸುತ್ತಿದೆ.
ಹಿಂದಿನ ಅರಬರು ಜನನದ ನಂತರ ಹೂಳಿದರೆ ಆಧುನಿಕ ಜಗತ್ತು ಜನನದ ಮುಂಚೆಯೇ ಹೂಳುವ ಮಾರ್ಗ ಅನುಸರಿಸುತ್ತಿದೆ.
ಅರಬ್ ಅಜ್ಞಾನ ಕಾಲದ ಘಟನೆ ಯನ್ನು ವಿವರಿಸುತ್ತಾ ಒಬ್ಬನು ಪ್ರವಾದಿಯವರಲ್ಲಿ(ಸ) ಹೀಗೆ ಹೇಳಿದ್ದನು- “ನನಗೆ ಓರ್ವ ಮಗಳಿದ್ದಳು. ಆಕೆ ನನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. ನಾನು ಕರೆದಾಗಲೆಲ್ಲಾ ಸಂತೋಷದಿಂದ ನನ್ನ ಬಳಿ ಬರುತ್ತಿದ್ದಳು. ಒಂದು ದಿನ ನಾನು ಆಕೆಯನ್ನು ಕರೆದೆ. ಆಕೆ ಓಡೋಡಿ ಬಂದಳು. ನಾನು ಆಕೆಯನ್ನು ಕರೆದುಕೊಂಡು ಹೋಗಿ ಸಮೀಪದ ಬಾವಿಯೊಂದಕ್ಕೆ ದೂಡಿ ಬಿಟ್ಟೆ. ಆಗಲೂ ಆಕೆ ಅಪ್ಪಾ ಅಪ್ಪಾ ಎನ್ನುತ್ತಿದ್ದಳು.” ಇದನ್ನು ಕೇಳಿ ಪ್ರವಾದಿಯವರು(ಸ) ತಮ್ಮ ಗಡ್ಡ ತೊಯ್ದು ಹೋಗುವಷ್ಟು ಅತ್ತು ಬಿಟ್ಟರು. (ದಾರಿಮೀ)
ಹೀಗೆಯೇ ಇನ್ನೊಬ್ಬ ವ್ಯಕ್ತಿ ತನ್ನ ಮಗಳನ್ನು ಹೂಳಿದ ಪ್ರಸಂಗ ಹೇಳುತ್ತಿದ್ದ. ಪ್ರವಾದಿಯವರು(ಸ) ನನ್ನ ಕಣ್ಣಿಂದ ದೂರವಾಗು ಎಂದು ಶೋಕತಪ್ತರಾದರು.
ಪ್ರವಾದಿ(ಸ) ಸ್ತ್ರೀ ಕುಲವೆಂಬ ಶೋಷಿತ ವರ್ಗದ ಪರವಾಗಿ ನೀಡಿರುವ ಉಪದೇಶಗಳು ಇಂದಿಗೂ ಅನುಪಮವಾಗಿದೆ.
“ಒಬ್ಬನಿಗೆ ಹೆಣ್ಣು ಮಗುವಿದ್ದು ಅವನು ಅದನ್ನು ಜೀವಂತ ಹೂಳದೆ ಅದನ್ನು ಅಪಮಾನಕಾರಿಯೆಂದು ಪರಿಗಣಿಸದೆ ಮತ್ತು ಅದಕ್ಕಿಂತ ತನ್ನ ಗಂಡು ಮಗನಿಗೆ ಪ್ರಾಶಸ್ತ್ಯ ನೀಡದೆ ಇದ್ದರೆ ಅಲ್ಲಾಹನು ಅವನನ್ನು ಸ್ವರ್ಗದಲ್ಲಿ ಪ್ರವೇಶಗೊಳಿಸುವನು.” (ವರದಿ: ಹ. ಇಬ್ನು ಅಬ್ಬಾಸ್(ರ)- ಅಬೂದಾವೂದ್)
ಹೆಣ್ಣು ಮಕ್ಕಳನ್ನು ಹೊಂದಲು ದುಃಖಿಸುವವರನ್ನು ಕುರ್ಆನ್ ಹೀಗೆ (ಹೇಳುತ್ತದೆ) ಖಂಡಿಸುತ್ತದೆ,
“ಆವರಲ್ಲಿ ಒಬ್ಬನಿಗೆ ಹೆಣ್ಣು ಮಗುವಿನ ಜನನದ ಸುದ್ದಿ ತಿಳಿದಾಗ ಅವನ ಮುಖ ಕಪ್ಪಾಗುತ್ತದೆ ಮತ್ತು ಅವನು ದುಃಖವನ್ನು ನಿಗ್ರಹಿಸಿಕೊಳ್ಳುತ್ತಾನೆ. ತನಗೆ ತಿಳಿಸಲಾದದ್ದು ಕೆಟ್ಟ ಸುದ್ದಿ ಎಂಬ ಕಾರಣದಿಂದ ಜನರಿಂದ ತನ್ನನ್ನು ಮರೆ ಮಾಚಿಕೊಳ್ಳುತ್ತಾನೆ. ನಿಸ್ಸಂದೇಹವಾಗಿ ಅವರು ನಿರ್ಧರಿಸುವುದು ಕೆಟ್ಟದ್ದು. (ಸೂರಃ ಅನ್ನಹ್ಲ್: 58-59)
ಹೆಣ್ಣು ಹುಟ್ಟುವ ಹಾಗೂ ಜೀವಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ನಡೆಸುವವನು ಅಲ್ಲಾಹನ ವಿಚಾರಣೆಗೆ ಗುರಿಯಾಗುವನು ಎಂದು ಕುರ್ಆನ್ ಹೇಳುತ್ತದೆ,
“ಜೀವಂತವಾಗಿ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತೆಂದು ಕೇಳಲಾಗುತ್ತದೆ.” (ಪವಿತ್ರ ಕುರ್ಆನ್: 81: 8-9)
“ಅಲ್ಲಾಹನು ಭೂಮಿ-ಆಕಾಶಗಳ ಪ್ರಭುತ್ವದ ಒಡೆಯನು. ತಾನಿಚ್ಛಿಸಿದ್ದನ್ನೇ ಅವನು ಸೃಷ್ಟಿಸುತ್ತಾನೆ. ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ. ತಾನಿಚ್ಛಿಸಿದವರಿಗೆ ಗಂಡು-ಹೆಣ್ಣು ಎರಡನ್ನೂ ಕೊಡುತ್ತಾನೆ, ತಾನಿಚ್ಛಿಸಿದವರನ್ನು ಬಂಜೆಯಾಗಿ ಮಾಡುತ್ತಾನೆ. ಅವನು ಸರ್ವಜ್ಞನೂ ಸರ್ವ ಸಮರ್ಥನೂ ಆಗಿರುತ್ತಾನೆ.” (ಪವಿತ್ರ ಕುರ್ಆನ್- 49: 50)
ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಉದಾಹರಣೆಗೆ ಮಗಳಾಗಿ, ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ ಹೀಗೆ ಪ್ರತಿಯೊಂದು ಹಂತಗಳಿಗೆ ಪ್ರವಾದಿಯವರು(ಸ) ಅವರ ಹಕ್ಕು ಹಾಗೂ ಸ್ಥಾನಮಾನವನ್ನು ಒದಗಿಸಿಕೊಟ್ಟಿದ್ದಾರೆ.
ಪೈಗಂಬರ್ ದೃಷ್ಟಿಯಲ್ಲಿ ತಂಗಿ ಹಾಗೂ ಮಗಳು
ಇಂದು ಲಿಂಗ ಸಮಾನತೆ ಉತ್ತೇಜಿಸಲು ಹಾಗೂ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ, ಕಾಯ್ದೆಗಳನ್ನು ತಂದರೂ ದೇಶದಲ್ಲಿ ಹೆಣ್ಣು ಮಕ್ಕಳ ಜನನ ಅನುಪಾತ ಕಡಿಮೆಯಾಗುತ್ತಿರುವ ಸಮಸ್ಯೆ ಹಾಗೆಯೇ ಇದೆ. ಆದರೆ ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಪ್ರವಾದಿ(ಸ)ರು 1400 ವರ್ಷಗಳ ಹಿಂದೆಯೇ ಒಂದು ಕ್ರಾಂತಿ ತಂದರು.
“ಯಾರಿಗೆ ಮೂರು ಹೆಣ್ಣು ಮಕ್ಕಳು ಅಥವಾ ಮೂರು ಸಹೋದರಿಯರು ಅಥವಾ ಇಬ್ಬರು ಹೆಣ್ಣು ಮಕ್ಕಳು ಅಥವಾ ಇಬ್ಬರು ಸಹೋದರಿಯರು ಅಥವಾ ಒಬ್ಬ ಹೆಣ್ಣು ಮಗಳು ಅಥವಾ ಒಬ್ಬ ಸಹೋದರಿಯರಿದ್ದು ಮತ್ತು ಅವನು ಅವರನ್ನು ಚೆನ್ನಾಗಿ ಬೆಳೆಸುತ್ತಾನೋ ಮತ್ತು ನೋಡಿಕೊಳ್ಳುತ್ತಾನೋ ಮತ್ತು ಅವರ ವಿಷಯದಲ್ಲಿ ಅಲ್ಲಾಹನಿಗೆ ಭಯಪಡುತ್ತಾನೋ ಆ ವ್ಯಕ್ತಿಗೆ ಸ್ವರ್ಗವಿದೆ.” (ತಿರ್ಮಿದಿ)
ಪ್ರವಾದಿಯವರ(ಸ) ಪತ್ನಿ ಆಯಿಶಾ(ರ)ರ ಮನೆಗೆ ಓರ್ವ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬರುತ್ತಾರೆ. ಅವಳು ದಾನ ಕೇಳಿದಳು. ಆದರೆ ಆಯಿಶಾ(ರ)ರವರ ಬಳಿ ಒಂದು ಖರ್ಜೂರ ಮಾತ್ರವಿತ್ತು. ಅದನ್ನು ಅವಳಿಗೆ ಕೊಡಲಾಯಿತು. ಆ ಮಹಿಳೆ ಅದನ್ನು (ಖರ್ಜೂರ) ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿಕೊಟ್ಟಳು. ಈ ಘಟನೆಯನ್ನು ಪ್ರವಾದಿಯವರು(ಸ) ಬಂದ ನಂತರ ಆಯಿಶಾ(ರ)ರವರು ಅವರಿಗೆ ತಿಳಿಸಿದಾಗ,
“ಲೆಕ್ಕದ ದಿನ ಆ ಇಬ್ಬರು ಹೆಣ್ಣು ಮಕ್ಕಳು ನರಕದ ಬೆಂಕಿಯಿಂದ ಅವಳಿಗೆ (ತಾಯಿಗೆ) ಪರದೆಯಂತೆ ಇರುತ್ತಾರೆ” ಎಂದು ಹೇಳಿದರು. (ಸಹಿಯಾ: 134)
ವ್ಯಕ್ತಿಯೊಬ್ಬ ಪ್ರವಾದಿಯವರ(ಸ) ಬಳಿ ಕುಳಿತುಕೊಳ್ಳುತ್ತಾನೆ ಮತ್ತು ಅವನು ಮಗನನ್ನು ಎತ್ತಿ ಚುಂಬಿಸುತ್ತಾ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾನೆ ಮತ್ತು ಮಗಳನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವುದನ್ನು ಪ್ರವಾದಿ(ಸ)ರು ನೋಡಿ ನೀನೇಕೆ ಇವರ ಮಧ್ಯೆ ವ್ಯತ್ಯಾಸ ಮಾಡಿದೆ? ಇಬ್ಬರೂ ನಿನ್ನ ಮಕ್ಕಳು. ಇಬ್ಬರನ್ನೂ ಸಮಾನವಾಗಿ ಕಾಣು ಎಂದು ಉಪದೇಶಿಸಿದರು.
ಹೆಂಡತಿ ಕುರಿತು
ಇಂದಿನ ಕಾಲಮಾನದಲ್ಲಿ ಹೆಣ್ಣು ತನ್ನ ಗಂಡನ ಮನೆಯ ವರಿಂದ ವರದಕ್ಷಿಣೆಗಾಗಿ ಶೋಷಣೆಗೊಳಗಾಗುತ್ತಿರುವುದನ್ನು ಮತ್ತು ಹೆಣ್ಣು ಹುಟ್ಟಿಸುವುದಕ್ಕಾಗಿ ಅಪಮಾನಿತಳಾಗುತ್ತಿರುವುದು ನಾವು ಆಗಾಗ ಕೇಳುತ್ತಲಿರುತ್ತೇವೆ ಹಾಗೂ ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಹೊಡೆಯುವುದು, ಅವಮಾನಿಸುವುದು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ. ಆದರೆ ಪತ್ನಿಯರ ಸ್ಥಾನದ ಕುರಿತು ಪ್ರವಾದಿ(ಸ) ಈ ರೀತಿ ಉಪದೇಶಿಸಿದರು,
“ನಿಮ್ಮಲ್ಲಿ ಯಾರು ಹೆಂಡತಿ ಜೊತೆಗೆ ಒಳ್ಳೆಯದಾಗಿ ನಡೆದುಕೊಳ್ಳುತ್ತಾರೋ ಅವರೇ ನಿಮ್ಮಲ್ಲಿ ಉತ್ತಮರು.”
“ನೀವು ತಿನ್ನುವುದನ್ನೇ ನಿಮ್ಮ ಮಹಿಳೆಯರಿಗೂ ತಿನ್ನಿಸಿ ನೀವು ಉಡುವುದನ್ನೇ ಉಡಿಸಿ. ಅವಳ ಮುಖಕ್ಕೆ ಹೊಡೆಯಬೇಡಿ. ಜನರ ಮುಂದೆ ಅವಮಾನಿಸದಿರಿ.” (ಅಬೂದಾವೂದ್)
“ಹೆಣ್ಣು ನಿಮ್ಮ ಹಿತೈಷಿಯಾಗಿದ್ದಾಳೆ. ಅವಳು ನಿಮ್ಮನ್ನು ಕೆಡುಕುಗಳಿಂದ ಕೋಟೆಯಂತೆ ರಕ್ಷಿಸುತ್ತಾಳೆ.” (ಪವಿತ್ರ ಕುರ್ಆನ್- 4: 24)
“ದಂಪತಿಗಳು ಪರಸ್ಪರ ಉಡುಪುಗಳಾಗಿದ್ದಾರೆ.” (ಪವಿತ್ರ ಕುರ್ಆನ್- 2: 187)
ಹೇಗೆ ಉಡುಪು ಪವಿತ್ರತೆ ಮತ್ತು ರಕ್ಷಣೆಯ ರೂಪಕವಾಗಿದೆಯೋ ಹಾಗೆಯೇ ಪರಸ್ಪರ ಪ್ರೀತಿ ದಾಂಪತ್ಯವನ್ನು ಸುಂದರ ಗೊಳಿಸುತ್ತದೆ.
ಯಶಸ್ವಿ ದಾಂಪತ್ಯ ಮತ್ತು ಆನಂದದಾಯಕ ಕುಟುಂಬಕ್ಕೆ ಗಂಡ-ಹೆಂಡತಿಯ ನಡುವಿನ ಆರೋಗ್ಯಕರ ಸಂಬಂಧವೇ ಮುಖ್ಯ ಎಂದು ಪ್ರವಾದಿ(ಸ) ಹೇಳಿದ್ದಲ್ಲದೆ ಸ್ವತಃ ತನ್ನ ಜೀವನ ದಲ್ಲಿ ತಮ್ಮ ಪತ್ನಿಯರೊಂದಿಗೆ ಸಮಾನವಾಗಿ ವರ್ತಿಸಿ ತೋರಿಸಿದರು ಮತ್ತು ಯಾರೊಂದಿಗೂ ಪಕ್ಷಪಾತ ತೋರಿಸಲಿಲ್ಲ.
ಪ್ರವಾದಿಯವರು(ಸ) ಪತ್ನಿಯರನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಎಂದರೆ ಒಮ್ಮೆ ಪ್ರವಾದಿ(ಸ) ಪತ್ನಿಯರು ಒಂಟೆಯ ಮೇಲೆ ಸವಾರಿ ಮಾಡಿದ್ದರು. ಒಂಟೆ ನಡೆಸುವವನಲ್ಲಿ ಅವರು ಹೀಗೆ ಹೇಳಿದರು, “ರತ್ನಗಳನ್ನು ಸ್ವಲ್ಪ ಜಾಗ್ರತೆ ಯಿಂದ ಕೂರಿಸಿಕೊಂಡು ಹೋಗಿರಿ.” (ಮುಸ್ಲಿಮ್)
ಪ್ರವಾದಿ(ಸ) ಮಹಿಳೆಯರ ಸ್ಥಾನ ಎಷ್ಟು ಉನ್ನತೀಕರಿಸಿದ್ದರೆಂಬುದಕ್ಕೆ ಉಮರ್(ರ)ರ ಹೇಳಿಕೆಯೇ ಸಾಕ್ಷಿಯಾಗಿದೆ.
ಪ್ರವಾದಿ(ಸ) ಅವರ ಕಾಲದಲ್ಲಿ ನಾವು ನಮ್ಮ ಮಹಿಳೆಯರೊಂದಿಗೆ ಮಾತನಾಡಲು ಮತ್ತು ನಿಸ್ಸಂಕೋಚವಾಗಿ ವರ್ತಿಸಲು ಹೆದರುತ್ತಿದ್ದೆವು. ನಮ್ಮ ಕುರಿತು ಏನಾದರೂ ಅಲ್ಲಾಹನವಾಣಿ ಅವತೀರ್ಣಗೊಳ್ಳುವುದೋ ಎಂದು ನಾವು ಹೆದರುತ್ತಿದ್ದೆವು. ಪ್ರವಾದಿ(ಸ) ಅವರ ನಿಧನ ನಂತರವೇ ನಾವು ಅವರೊಂದಿಗೆ ನಿಸ್ಸಂಕೋಚವಾಗಿ ಇರಲು ಆರಂಭಿಸಿದೆವು. (ಬುಖಾರಿ)
ತಾಯಿ ಕುರಿತು
ತಾಯಂದಿರ ದಿನವನ್ನು ನಾವು ವಿಶ್ವದಲ್ಲೇಡೆ ಆಚರಿಸುವುದನ್ನು ಕಾಣುತ್ತೇವೆ. ನಾವು ಎಷ್ಟು ಸ್ವಾರ್ಥಿಗಳೆಂದರೆ ತಾಯಿಯ ಗುಣಗಾನದಲ್ಲಿ ನಮ್ಮ ಪ್ರಾಮುಖ್ಯತೆ ಹೇಳುತ್ತೇವೆಯೇ ವಿನಃ ನಾವು ಅವಳಿಗಾಗಿ ಏನು ಮಾಡಬೇಕು, ಅವಳು ನಮ್ಮ ಮೇಲೆ ಯಾವ ಹಕ್ಕು ಹೊಂದಿದ್ದಾಳೆ, ಅವಳಿಗಾಗಿ ನಾವು ಮಾಡುವಂತಹ ಕರ್ತವ್ಯಗಳೇನು ಎಂಬುದು ಹೇಳುವುದು ಸ್ವಲ್ಪ ಕಡಿಮೆನೇ.
ಆದರೆ ತಾಯಿಗೆ ಕೃತಜ್ಞತೆ, ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಕೇವಲ ಒಂದು ನಿರ್ದಿಷ್ಟ ದಿನಕ್ಕೆ ಸೀಮಿತವಾಗಿಲ್ಲ. ಅದು ನಿರಂತರವಾಗಿ ಮಾಡುವ ಕರ್ತವ್ಯ ಎಂದು ಇಸ್ಲಾಂ ಹೇಳುತ್ತದೆ.
ಮನುಷ್ಯನಿಗೆ ತನ್ನ ದಯೆ ತೋರಿಸಬೇಕೆಂದು ಆಜ್ಞಾಪಿಸಿದೆವು. ಅವನ ತಾಯಿ ಅವನನ್ನು ಕಷ್ಟದಿಂದ ಹೆತ್ತಳು ಮತ್ತು ಕಷ್ಟದಿಂದ ಅವನಿಗೆ ಜನ್ಮ ನೀಡಿದಳು. (ಅಲ್ ಕಹ್ಫ್: 46: 15)
ಪ್ರವಾದಿ(ಸ) ಬಳಿಗೆ ಒಬ್ಬ ವ್ಯಕ್ತಿ ಬಂದು ನನ್ನ ಒಳ್ಳೆಯ ನಡವಳಿಕೆಗೆ ಯಾರು ಹೆಚ್ಚು ಹಕ್ಕುದಾರರು ಎಂದು ಕೇಳಿದಾಗ ಪ್ರವಾದಿ(ಸ) ನಿನ್ನ ತಾಯಿ ಎಂದರು. ತಾಯಿಯ ನಂತರ ಯಾರು ಎಂದು ಕೇಳಿದಾಗ, ಮತ್ತೆ ನಿನ್ನ ತಾಯಿ ಎಂದರು. ಆ ಬಳಿಕ ಯಾರು ಎಂದಾಗಲೂ ಅವರು ನಿನ್ನ ತಾಯಿ ಎಂದೇ ಹೇಳಿದರು. ತದನಂತರ ಯಾರ ಹಕ್ಕು ಎಂದು ಕೇಳಿದಾಗ, ಅವರು ನಿನ್ನ ತಂದೆ ಎಂದರು.” (ಸಹೀಹ್ ಬುಖಾರಿ)
ಈ ಹದೀಸ್ನಲ್ಲಿಯೂ ನಮಗೆ ಸ್ತ್ರೀ ಮಹತ್ವ ಎತ್ತಿ ಹಿಡಿದಿದ್ದು ಕಂಡು ಬರುತ್ತದೆ.
“ಓರ್ವ ಅನುಯಾಯಿ ಪ್ರವಾದಿ(ಸ)ರ ಬಳಿ ಬಂದು ಯುದ್ಧಕ್ಕೆ ಹೋಗಲು ಸಮ್ಮತಿ ನೀಡಿ ಎಂದರು. ನಿಮಗೆ ತಾಯಿ ಇದ್ದಾರೆಯೇ? ಎಂದು ಪ್ರವಾದಿ(ಸ) ಕೇಳಿದರು. ಹೌದು ಎಂದಾಗ, ಅವರೊಂದಿಗೆ ಇದ್ದು ಸೇವೆ ಮಾಡಿ. ಏಕೆಂದರೆ “ಸ್ವರ್ಗ ಅವಳ ಪಾದದ ಕೆಳಗೆ ಇದೆ” ಎಂದರು.
(ಇಬ್ನು ಮಾಜಃ)
ಚಿಕ್ಕಮ್ಮ (ತಾಯಿಯ ತಂಗಿ) ತಾಯಿಯ ಪ್ರತಿರೂಪವಾಗಿದ್ದಾರೆ ಎಂದು ಪ್ರವಾದಿ(ಸ) ಕಲಿಸಿಕೊಟ್ಟರು. (ತಿರ್ಮಿದಿ)
“ನಿಮ್ಮ ಪೋಷಕರನ್ನು ಚೆನ್ನಾಗಿ ನೋಡಿ ಕೊಳ್ಳಿ ಅವರ ಬಗ್ಗೆ `ಛೆ’ ಎಂದೂ ಹೇಳ ಬೇಡಿ.” (ಕುರ್ಆನ್- 17: 23-24)
ವಿವಾಹ ಕುರಿತು
ಮದುವೆ ಎನ್ನುವುದು ಅಲ್ಲಾಹನ ಸನಿಹದಲ್ಲಿ ಒಂದು ಸಂತೋಷದ ಕಾರ್ಯವಾಗಿದೆ. ಇದು ಪರಸ್ಪರ ಒಪ್ಪಿಗೆಯ ಮತ್ತು ಸಮ್ಮತಿಯ ಸಂಬಂಧವಾಗಿದೆ.
ಇಸ್ಲಾಮ್ನಲ್ಲಿ ಮಹಿಳೆಯರಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ವಿವಾಹ ಪ್ರಸ್ತಾಪಕ್ಕೆ ಮಹಿಳೆಯರ ಪೂರ್ಣ ಮತ್ತು ಮುಕ್ತ ಒಪ್ಪಿಗೆಯು ಇಸ್ಲಾಮಿಕ್ ವಿವಾಹದ ಒಪ್ಪಂದದ ಪ್ರಮುಖ ಅಂಶವಾಗಿದೆ.
ಉದಾಹರಣೆಗೆ ನೋಡುವುದಾದರೆ ಪ್ರವಾದಿ(ಸ)ರ ಕಾಲದಲ್ಲಿ ಒಬ್ಬ ಮಹಿಳೆ ಬಂದು “ನನ್ನ ತಂದೆ ತಮ್ಮ ಸ್ಥಾನಮಾನ ಹೆಚ್ಚಿಸಲು ನನ್ನ ಸಹೋದರ ಸಂಬಂಧಿಗಳಿಗೆ ನನ್ನನ್ನು ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದಾರೆ ಎಂದಾಗ ಪ್ರವಾದಿ(ಸ)ರವರು ಆ ಹೆಣ್ಣಿಗೆ ನಿಖಾಹ್ನಲ್ಲಿ ಉಳಿಯುವ ಅಥವಾ ಮದುವೆ ರದ್ದುಮಾಡುವ ಆಯ್ಕೆ ನೀಡಿದರು.
ಇಸ್ಲಾಮ್ ಮಹಿಳೆ ವಧುಗೆ ಧನದ (ಮಹರ್) ಹಕ್ಕು ನೀಡಿದೆ. ಅವು ವಿವಾಹದ ಮಹತ್ವದ ಮತ್ತು ಪವಿತ್ರ ಅಂಶವಾಗಿದೆ.
“ಮದುವೆಯಾದ ನಂತರ ಮಹಿಳೆಯರಿಗೆ ಅವರ ಉಡುಗೊರೆಗಳನ್ನು ಉದಾರವಾಗಿ ನೀಡಿ.” (ಅನ್ನಿಸಾ- 4: 4)
ಈ ಉಡುಗೊರೆಯು ಹೆಂಡತಿಯ ಕಡೆಗೆ ಪತಿಯ ಬದ್ಧತೆ ಮತ್ತು ಜವಾಬ್ದಾರಿಯ ಸಂಕೇತವಾಗಿದೆ ಮತ್ತು ಇದು ವೈವಾಹಿಕ ಜೀವನದಲ್ಲಿ ಅವಳ ಘನತೆ ಮತ್ತು ಸ್ಥಾನವನ್ನು ಗೌರವಿಸುವ ಸಂಕೇತವಾಗಿದೆ.
“ಅತ್ಯಂತ ಅಶೀರ್ವಾದ ಪಡೆದ ಮದುವೆ ಅತ್ಯಂತ ಕಡಿಮೆ ವೆಚ್ಚದ ವಿವಾಹಕವಾಗಿದೆ.” (ಮಿಶ್ಕಾತ್)
ಯಾವುದೇ ವೆಚ್ಚವಿಲ್ಲದೆ ಸರಳ ನಿಖಾಹ್ನ್ನು ಪ್ರೋತ್ಸಾಹಿಸಲಾಗಿದೆ.
ವಿಧವೆ ಅಥವಾ ವಿಚ್ಛೇದಿತೆಯು ದಾಂಪತ್ಯದಿಂದ ವಂಚಿತರಾದರೆ ಅಂತಹ ಮಹಿಳೆಯರನ್ನು ಮರುವಿವಾಹದ ಆದ್ಯತೆ ಕಲ್ಪಿಸುವುದಕ್ಕೆ ಇಸ್ಲಾಮ್ ಆದೇಶಿಸುತ್ತದೆ.
ವಿಚ್ಛೇದನೆ
ತಲಾಕ್ ನೀಡುವುದು ಯಾಕೆಂದರೆ ದಂಪತಿಯರಲ್ಲಿ ಪರಸ್ಪರ ಸಂಧಾನದ ಎಲ್ಲ ಸಾಧ್ಯತೆಗಳು ಕೊನೆಗೊಂಡ ಪರಿಸ್ಥಿತಿಯಲ್ಲಿ. ಏಕೆಂದರೆ ಇಸ್ಲಾಮ್ನಲ್ಲಿ ತಲಾಕ್ ಅವಕಾಶವನ್ನು ಕೇವಲ ಅನಿವಾರ್ಯ ಆವಶ್ಯಕತೆಗಾಗಿ ಇರಿಸಲಾಗಿದೆ.
“ಅಲ್ಲಾಹನು ಅನುಮತಿಸಿರುವ ವಿಷ ಯದ ಪೈಕಿ ತಲಾಕ್ನಷ್ಟು ಅಪ್ರಿಯಾವಾದ ವಸ್ತು ಬೇರೆ ಇಲ್ಲ” ಎಂದು ಪ್ರವಾದಿ(ಸ) ಹೇಳಿದರು. (ಅಬೂದಾವೂದ್)
“ಒಬ್ಬ ಮುಸ್ಲಿಮ್ ತನ್ನ ಹೆಂಡತಿಯನ್ನು ದ್ವೇಷಿಸಬಾರದು ಮತ್ತು ಅವನು ಅವಳಲ್ಲಿರುವ ಒಂದು ಕೆಟ್ಟ ಗುಣದಿಂದ ಅಸಂತೋಷಗೊಂಡರೆ ಅವನು ಒಳ್ಳೆಯ ದರಲ್ಲಿ ಸಂತೋಷ ಪಡೆಯಬೇಕು. ಅಲ್ಲಾಹನು ನಿಮ್ಮಲ್ಲಿ ಒಳ್ಳೆಯದನ್ನು ಬಯಸುತ್ತಾನೆ.” (ತಿರ್ಮಿದಿ)
“ಒಬ್ಬ ವ್ಯಕ್ತಿ ಒಬ್ಬ ಮಹಿಳೆಯನ್ನು ವಿವಾಹವಾಗಿ ತನ್ನ ಬಯಕೆಯನ್ನು ಈಡೇರಿಸಿಕೊಂಡ ನಂತರ ಆಕೆಯ ಮಹರ್ ಕಬಳಿಸಿ ಆಕೆಗೆ ತಲಾಕ್ ನೀಡುವುದು ಅಲ್ಲಾಹನ ಬಳಿ ಅತೀ ದೊಡ್ಡ ಅಪರಾಧವಾಗಿದೆ.” (ಹಾಕಿಮ್)
ಹಾಗೆಯೇ ಒಬ್ಬ ಮಹಿಳೆ ನೈಜ ಕಾರಣವೇನೂ ಇಲ್ಲದೆ ತನ್ನ ಪತಿಯಿಂದ ವಿಚ್ಛೇದನೆ ಬಯಸಿದರೆ ಆಕೆಯ ಪಾಲಿಗೆ ಸ್ವರ್ಗದ ಸುವಾಸನೆಯೂ ನಿಷಿದ್ಧವಾಗಿದೆ. (ತಿರ್ಮಿದಿ)
ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಒಮ್ಮೆಗೆ ಮೂರು ತಲಾಕ್ ನೀಡಿರುವೆನೆಂದು ಹೇಳಿದಾಗ ಪ್ರವಾದಿ(ಸ) ಕೋಪದಿಂದ ಎದ್ದು ನಿಂತು ಈ ರೀತಿ ಹೇಳಿದರು, “ನಾನು ನಿಮ್ಮ ಮಧ್ಯೆ ಇರುವಾಗಲೇ ಅಲ್ಲಾಹನ ಗ್ರಂಥದೊಂದಿಗೆ ಆಟವಾಡುತ್ತೀರಾ?”
ತನ್ನ ಗಂಡನಿಂದ ಶೋಷಣೆ ಹಾಗು ಅವಮಾನಕ್ಕೊಳಗಾಗುತ್ತಿರುವ ಹೆಣ್ಣು ಗಂಡನಿಂದ ಖುಲಾ ಮತ್ತು ಫಸ್ಕ್ ಎಂಬ ಎರಡು ರೀತಿಯ ವಿಧಾನದ ಮೂಲಕ ವಿಚ್ಛೇದನ ಪಡೆಯುವ ಹಕ್ಕು ಹೊಂದಿದ್ದಾಳೆ.
ಆಸ್ತಿಯ ಹಕ್ಕು
ಇಸ್ಲಾಮ್ ಮಹಿಳೆಯರಿಗೆ ತಮ್ಮ ಆಸ್ತಿಯನ್ನು ಸ್ವತಂತ್ರವಾಗಿ ಹೊಂದುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ.
“ಮಾತಾಪಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪಾಲಿದೆ.” (ಅನ್ನಿಸಾ: 4: 7)
ಮಹಿಳೆಯರು ತನ್ನ ಕುಟುಂಬದ ಆರ್ಥಿಕ ಜವಾಬ್ದಾರಿ ಪೂರೈಸಲು ಬದ್ಧರಲ್ಲ; ಬಯಸಿದರೆ ಆರ್ಥಿಕ ಚುಟವಟಿಕೆಗಳಲ್ಲಿ ಭಾಗವಹಿಸುವಲ್ಲಿ ಸ್ವತಂತ್ರರು ಮತ್ತು ಸಂಪತ್ತಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವರು.
ಶೈಕ್ಷಣಿಕ ಹಕ್ಕು
ಪ್ರವಾದಿ(ಸ) ಮಹಿಳೆಯರಿಗೆ ಪುರುಷನಂತೆಯೇ ಜ್ಞಾನಾರ್ಜನೆ (ಪಡೆಯುವ) ಹೊಂದುವ ಹಕ್ಕು ಕಲ್ಪಿಸಿದರು ಮತ್ತು ಅವರ ನಡುವೆ ಯಾವ ವ್ಯತ್ಯಾಸವನ್ನೂ ಮಾಡಲಿಲ್ಲ.
“ಜ್ಞಾನ ಸಂಪಾದನೆ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ ಎಂದು ಅವರು ಹೇಳಿದರು.” (ಇಬ್ನು ಮಾಜಃ)
“ಪತಿಯು ತನ್ನ ಹೆಂಡತಿಗೆ ಸ್ವತಃ ಶಿಕ್ಷಣ ನೀಡಬೇಕು ಅಥವಾ ಆಕೆಗೆ ಮನೆಯಿಂದ ಹೊರಗೆ ಹೋಗಿ ಶಿಕ್ಷಣ ಪಡೆ ಯುವ ಅನುಮತಿ ನೀಡಬೇಕಾದುದು ಆಕೆಯ ಹಕ್ಕಾಗಿದೆ.” (ಇಬ್ನು ಮಾಜಃ)
ಹೀಗೆ ಪ್ರವಾದಿ(ಸ) ಮಹಿಳೆಯ ವೈಚಾರಿಕ ಪ್ರಗತಿಗೆ ಯಾವ ಅಡ್ಡಿಯಿಲ್ಲದೆ ಶಿಕ್ಷಣಗಳಿಕೆಗೆ ಸಾಮಾಜಿಕ ಸೌಲಭ್ಯಗಳನ್ನು ಒದಗಿಸಿದರು.
ಪ್ರವಾದಿ ಪತ್ನಿಯರಾದ ಆಯಿಶಾ(ರ) ಮತ್ತು ಝೈನಬ್(ರ) ತನ್ನ ಕಾಲದ ಅತಿ ದೊಡ್ಡ ವಿದ್ವಾಂಸೆಯರಾಗಿದ್ದರು.
ವೃತ್ತಿ ರಂಗದಲ್ಲಿ
ಮುಹಮ್ಮದ್(ಸ)ರು ಮಾರ್ಗದರ್ಶನದಲ್ಲಿ ಸ್ತ್ರೀಯು ಕೇವಲ ವಿದ್ಯೆ ಬುದ್ಧಿಯ ಕ್ಷೇತ್ರಕ್ಕೆ ಸೀಮಿತವಾಗದೆ ಬೇಸಾಯ, ವ್ಯಾಪಾರ, ಕೈಗಾರಿಕ ಕ್ಷೇತ್ರದಲ್ಲಿ ಮತ್ತು ಯುದ್ಧರಂಗದಲ್ಲಿ ತನ್ನ ಸಾಹಸವನ್ನು ಪ್ರದರ್ಶಿಸುವ ಅವಕಾಶಗಳು ಕಲ್ಪಿಸಲಾಯಿತು.
ಸಹಲ್ ಬಿನ್ ಸಅದ್(ರ)ರವರು ತಮ್ಮ ಹೊಲದಲ್ಲಿ ಕೃಷಿ ಮಾಡುತ್ತಿದ್ದರು.
ಅಸ್ಮಾ ಬಿನ್ತಿ ಮುಬಝಮ್(ರ) ಅವರು ಸುಗಂಧ ವ್ಯಾಪಾರ ಮಾಡುತ್ತಿದ್ದರು.
ಖಿವ್ಲಾ ಬಿಂತ್ ಅಲ್ ಅಜ್ಜರ್ರವರು ಅಸಾಧಾರಣಾ ಯೋಧೆಯಾಗಿದ್ದರು. ಯುದ್ಧ ಭೂಮಿಯಲ್ಲಿ ವಿರೋಧಿಗಳು ಅವರ ಪರಾಕ್ರಮವನ್ನು ನೋಡಿ ಖಾಲಿದ್ ಬಿನ್ ವಲೀದ್ಗೆ ಹೋಲಿಸುತ್ತಿದ್ದರು.
ಕತ್ತಲಲ್ಲಿದ್ದ ಮಹಿಳೆಯರಿಗೆ ಪ್ರವಾದಿ(ರ) ಸ್ವತಂತ್ರ ಆರ್ಥಿಕ ಅಸ್ತಿತ್ವವನ್ನು ನೀಡಿದರು. ಯಾರ ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪವಿಲ್ಲದೆ ಸ್ವಯಂ ಸಂಪಾದಿಸುವ, ವ್ಯವಹರಿಸುವ ಹಾಗೂ ನೇರ ವಾಗಿ ವಹಿವಾಟು ನಡೆಸುವ ಹಕ್ಕು ಕಲ್ಪಿಸಿದರು.
ಮಹಿಳೆಯರಿಗೆ ಪ್ರವಾದಿ(ಸ) 1,400 ವರ್ಷಗಳ ಹಿಂದೆ ನೀಡಿರುವ ಹಕ್ಕುಗಳು ಮತ್ತು ಗೌರವ ಜಗತ್ತಿನ ಯಾವ ಧರ್ಮವೂ ನೀಡಿಲ್ಲ.
ಇಂದು ಮಹಿಳೆ ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಇದ್ದಾಳೆ. ಸಬಲಳಾಗಿದ್ದಾಳೆ ಹಾಗೂ ತನ್ನ ಭವಿಷ್ಯ ತಾನೇ ರೂಪಿಸಿಕೊಳ್ಳುವಷ್ಟು ಶಕ್ತಳಾಗಿದ್ದಾಳೆ ಎಂದು ಬಹಳಷ್ಟು ನಾವು ಕೇಳುತ್ತೇವೆ. ಆದರೆ ಶಿಕ್ಷಣ ಕ್ಷೇತ್ರಗಳಲ್ಲಾಗಲಿ, ಉದ್ಯೋಗ ಕ್ಷೇತ್ರಗಳಲ್ಲಾಗಲಿ ಸುರಕ್ಷತೆ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ಜೀವಿಸುವ ಸ್ವಾತಂತ್ರ್ಯ ಕೂಡ ನಿರಾಕರಿಸುತ್ತಿದ್ದೇವೆ. ಹೆಣ್ಣು ಭ್ರೂಣ ಹತ್ಯೆ ಘಟನೆಗಳು ಇಂದು ಸಾಮಾನ್ಯವಾಗಿವೆ. ವರದಕ್ಷಿಣೆ ಕಿರುಕುಳ, ಬಲಾತ್ಕಾರ, ಆತ್ಮಹತ್ಯೆಗಳು ಮಹಿಳಾ ಶೋಷಣೆಯ ಕಥೆಗಳನ್ನು ಹೇಳುತ್ತಿವೆ.
ಆಧುನಿಕ ಮಹಿಳೆಯನ್ನು ಸಮಾನತೆ ನೆಪದಲ್ಲಿ ಶೋಷಿಸಲಾಗುತ್ತಿದೆ. ರಾಷ್ಟ್ರದ ಭವಿಷ್ಯ ನಿರ್ಧರಿಸುವ ಕುಟುಂಬ ವ್ಯವಸ್ಥೆ ಚದುರಿ ಹೋಗುತ್ತಿದೆ. ವೈವಾಹಿಕ ಜೀವನ ಜೀವನದಿಂದ ಶಾಂತಿ ಕಳಚಿ ಹೋಗುತ್ತಿದೆ. ಪಾಶ್ಚಾತ್ಯ ಜೀವನ ಶೈಲಿಗೆ ಮೊರೆ ಹೋಗಿ ಮಹಿಳೆ ತನ್ನ ಸ್ಥಾನ, ಘನತೆ ಕಳೆದುಕೊಳ್ಳುತ್ತಿದ್ದಾಳೆ.
ಜಗತ್ತು ಮತ್ತು ಜಗತ್ತಿನಲ್ಲಿರುವ ಎಲ್ಲವೂ ಅಮೂಲ್ಯವಾದುದು. ಆದರೆ ಜಗತ್ತಿನ ಅತ್ಯಂತ ಅಮೂಲ್ಯವಾದ ವಸ್ತು ಸದ್ಗುಣಶೀಲ ಮಹಿಳೆ ಎಂದು ಪ್ರವಾದಿ(ಸ) ಹೇಳಿದ್ದರು.
ಪ್ರತಿಸ್ಪರ್ಧೆಯೇ ಸಮಾನತೆ, ಅಭಿವೃದ್ಧಿಯ ಮೆಟ್ಟಿಲಾಗದು. ಬದಲಿಗೆ ಇಸ್ಲಾಮ್ ನೀಡುವ ಪ್ರತ್ಯೇಕ ಪಾತ್ರಗಳಲ್ಲಿ ಸಾಧಿಸುವುದೇ ಸಮಾನ ಹಕ್ಕು ಲಭಿಸುವುದೇ ಸಮಾನತೆಯಾಗಿದೆ. ಮಹಿಳೆಯರ ನಿಜವಾದ ಹಕ್ಕುಗಳನ್ನು ಕೊಡಿಸುವುದಕ್ಕಾಗಿ ಪ್ರವಾದಿ(ಸ) ಪ್ರತಿ ಪಾದಿಸಿದ ಬೋಧನಾ ನಿಯಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಆವಶ್ಯಕತೆ ಇದೆ.












