ಸನ್ಮಾರ್ಗ ವಾರ್ತೆ
ಮಂಗಳೂರು: ಕುದ್ರೋಳಿಯ ಜಾಮಿಯಾ ಮಸೀದಿಯ ಆಡಳಿತ ಸಮಿತಿ, ಕುದ್ರೋಳಿ ಮುಸ್ಲಿಮ್ ಐಕ್ಯತಾ ವೇದಿಕೆ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 14 ರಂದು ರವಿವಾರ ಸಾರ್ವಜನಿಕರಿಗೆ ಮಸೀದಿಯನ್ನು ವೀಕ್ಷಿಸಲು ‘ಕುದ್ರೋಳಿ ಜಾಮಿಯಾ ಮಸೀದಿ ನೋಡ ಬನ್ನಿ’ ಶಿರ್ಷಿಕೆಯಡಿಯಲ್ಲಿ ಮಸೀದಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 10.30 ರಿಂದ ಆರಂಭಗೊಂಡು ಸಾಯಂಕಾಲ 7ರ ವರೆಗೆ ಲಭಿಸಿದ ಈ ಮುಕ್ತ ಅವಕಾಶವನ್ನು ಸರ್ವಧರ್ಮಿಯ ಸ್ತ್ರೀ ಮತ್ತು ಪುರುಷರು ಸದುಪಯೋಗಿಸಿಕೊಂಡರು. ಹಲವರು ತಮಗಿರುವ ಸಂಶಯವನ್ನು ಕೇಳಿ ನಿವಾರಿಸಿಕೊಂಡರು. ಕೆಲವರು ತೀವ್ರ ಕುತೂಹಲದಿಂದ ವೀಕ್ಷಿಸಿ ಅವಕಾಶ ಕಲ್ಪಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.

ಮಸೀದಿ ಮತ್ತು ಪ್ರಾರ್ಥನೆಗಳ ಬಗ್ಗೆ ಸಾರ್ವಜನಿಕರಿಗೆ ಇರುವ ತಪ್ಪುಕಲ್ಪನೆಗಳನ್ನು ದೂರ ಮಾಡಿ ಸೂಕ್ತ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ‘ಕುದ್ರೋಳಿ ಜಾಮಿಯಾ ಮಸೀದಿ ನೋಡ ಬನ್ನಿ-ಸಾರ್ವಜನಿಕ ಮಸೀದಿ ಕಾರ್ಯಕ್ರಮ’ಕ್ಕೆ ಉತ್ತಮ ಸ್ಪಂದನ ವ್ಯಕ್ತವಾಯಿತು.
ಆಗಮಿಸಿದ ಸರ್ವರಿಗೂ ಖರ್ಜೂರ, ಕಲ್ಲಂಗಡಿ ಜೂಸ್, ಚಹಾ, ತಿಂಡಿ, ಮಧ್ಯಾಹ್ನ ಊಟ, ಸಾಹಿತ್ಯಗಳು, ಸುಗಂಧ ದ್ರವ್ಯ ನೀಡುವ ಮೂಲಕ ಭವ್ಯ ಸ್ವಾಗತ ನೀಡಲಾಯಿತು.
ಕುರ್ಆನ್ ಮತ್ತು ಪ್ರವಾದಿ ಸಂದೇಶ ಸಾರುವ ನಾನಾ ಫಲಕಗಳು, ಕುದ್ರೋಳಿ ಮಸೀದಿ ಹಳೆಯ ಕಟ್ಟಡ, ಹೊಸ ಕಟ್ಟಡ ನಿರ್ಮಾಣ ಹಂತ, ಉದ್ಘಾಟನೆಯ ಛಾಯಾಚಿತ್ರಗಳು, ವೀಡಿಯೊ ಪ್ರದರ್ಶನ, ಹಲವು ಭಾಷೆಗಳಲ್ಲಿ ಅನುವಾದಗೊಂಡ ಕುರ್ಆನ್ ಗ್ರಂಥಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು.

ಧರ್ಮಗುರುಗಳು ನಿಲ್ಲುವ ವೇದಿಕೆ, ಪ್ರಾರ್ಥನೆಗೆ ನೇತೃತ್ವ ನೀಡುವ ಜಾಗಕ್ಕೆ ಏನು ಹೇಳುತ್ತಾರೆ? ನಮಾಝ್ ಮಾಡುವಾಗ ಇಷ್ಟೂ ನಿಶ್ಯಬ್ದ ಇರುತ್ತದೆಯೇ? ಎಲ್ಲಾ ದಿನಗಳಲ್ಲೂ ಒಂದು ನಿಮಿಷವೂ ತಡವಾಗದೆ ಪ್ರಾರ್ಥನೆ ಮಾಡುತ್ತಿರಾ? ಹೊರಗೆ ಮಾತ್ರ ಕನ್ನಡ ಬರಹವಿದೆ. ಒಳಗೆ ಯಾಕಿಲ್ಲ? ಶ್ರೀಮಂತರು- ಬಡವರು ಎಂಬ ಪಂಕ್ತಿ ಇಲ್ಲಿಲ್ಲವೇ? ಆಝಾನ್ ಜೋರಾಗಿ ಯಾಕೆ ಹೇಳುವುದು? ಅಝಾನ್ ನ ಅರ್ಥವೇನು? ಧರ್ಮಗುರುಗಳಿಗೆ ನೀವು ಕೊಡುವ ಸೌಲಭ್ಯಗಳು ಏನು? ಮಸೀದಿಯ ಖರ್ಚು-ವೆಚ್ಚ ನಿರ್ವಹಣೆಗೆ ಆದಾಯದ ಮೂಲವೇನು? ಜಮಾಅತ್ ಅಂದರೇನು?… ಹೀಗೆ ಕೇಳಿಬಂದ ಸಾರ್ವಜನಿಕರ ಪ್ರಶ್ನೆಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ ಅದಕ್ಕೆ ತಕ್ಕ ಉತ್ತರವನ್ನು ನೀಡಲಾಗುತ್ತಿತ್ತು.
ಕುದ್ರೋಳಿ ಜಾಮಿಯಾ ಮಸೀದಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಉದ್ಘಾಟಿಸಿದರು. ಅತಿಥಿಯಾಗಿ ರೊಸಾರಿಯೊ ಚರ್ಚ್ ನ ಧರ್ಮಗುರು ಫಾ.ವಲೇರಿಯನ್ ಡಿಸೋಜ ಭಾಗವಹಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಸ್ಥಾನೀಯ ಅಧ್ಯಕ್ಷ ಇಸ್ಟಾಕ್ ಪುತ್ತೂರು ಪ್ರವಾದಿ ಸಂದೇಶ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್., ಯುಎಇ ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗರೆ, ಖಾಝಿ ಮುಫ್ತಿ ಶೇಕ್ ಮುತಪ್ಪರ್ ಹುಸೈನ್ ಖಾಸ್ಮಿ, ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾಂಶುಪಾಲ ಬಿ.ಎಸ್.ಶರ್ಪುದ್ದೀನ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭ ಕುದ್ರೋಳಿಯ ಶಾಹ್ ಅಮೀರ್ ಮಸೀದಿಯ ಖತೀಬ್ ರಿಯಾಝುಲ್ ಹಕ್ ರಷಾದಿ, ಕಾರ್ಯಕ್ರಮ ಸಂಚಾಲಕ ಅಬ್ದುಲ್ ಅಝೀಝ್, ಕುದ್ರೋಳಿ ಕಾರ್ಪೊರೇಟರ್ ಶಂಶುದ್ದೀನ್, ಕುದ್ರೋಳಿ ಜಾಮಿಯಾ ಮಸೀದಿಯ ಕಾರ್ಯದರ್ಶಿ ಎಸ್. ಎ.ಖಲೀಲ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ಯಾಸೀನ್ ಕುದ್ರೋಳಿ, ಮುಸ್ಲಿಮ್ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಮೌಲಾನ ಶಫೀವುಲ್ಲಾ ಕಿರಾಅತ್ ಪಠಿಸಿದರು. ಆಸಿಫ್ ಹುಸೈನ್ ಅದರ ಅನುವಾದ ವಾಚಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಂ.ಅಶ್ರಫ್ ಸ್ವಾಗತಿಸಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.













