ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಫತಹ್ ನಾಯಕ ಮರ್ವಾನ್ ಬರ್ಗುತಿ ಬಿಡುಗಡೆಗೆ ಇಸ್ರೇಲ್ ನಕಾರ: ವರದಿ

0
437

ಸನ್ಮಾರ್ಗ ವಾರ್ತೆ

ಕದನ ವಿರಾಮದ ಭಾಗವಾಗಿ ಕೈದಿಗಳ ಬಿಡುಗಡೆಯ ಪಟ್ಟಿಯನ್ನು ಈಗಾಗಲೇ ಇಸ್ರೇಲ್ಗೆ ಹಮಾಸ್ ಹಸ್ತಾಂತರಿಸಿದೆ. ಈ ಪಟ್ಟಿಯಲ್ಲಿ ಪತಹ್ ನಾಯಕ ಮರ್ವಾನ್ ಬರ್ಗೂತಿ ಸಹಿತ ಕೆಲವರ ಹೆಸರು ಇದ್ದು ಅವರನ್ನು ಬಿಡುಗಡೆಗೊಳಿಸಲು ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ. ಬರ್ಗುತಿಯ ಹೊರತಾಗಿ ಹಮಾಸ್ ಸೇನಾ ವಿಭಾಗವಾದ ಅಲ್ ಕಸ್ಸಾಂ ಬ್ರಿಗೇಡ್ ನ ಕೆಲವು ಉನ್ನತ ಕಮಾಂಡರುಗಳ ಹೆಸರೂ ಈ ಪಟ್ಟಿಯಲ್ಲಿತ್ತು . ಇವರನ್ನು ಬಿಡುಗಡೆಗೊಳಿಸುವುದಕ್ಕೆ ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 10 ಮಂದಿ ಫೆಲಸ್ತೀನ್ ಕೈದಿಗಳ ಹೆಸರನ್ನು ಸೇರ್ಪಡೆಗೊಳಿಸಲು ಇಸ್ರೇಲ್ ಸಿದ್ದವಾಗಿದೆ ಎಂದು ವರದಿ ಇದೆ. ಕದನ ವಿರಾಮ ಒಪ್ಪಂದದಂತೆ ತನ್ನ ವಶದಲ್ಲಿರುವ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಬೇಕಾಗಿದೆ. ಇದಕ್ಕೆ ಪ್ರತಿಯಾಗಿ ಸುಮಾರು 2,000 ದಷ್ಟು ಫೆಲೆಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಬೇಕಿದೆ. 250 ಮಂದಿಯ ಹೆಸರನ್ನು ಈಗಾಗಲೇ ಇಸ್ರೇಲ್ ಹಮಾಸ್‌ಗೆ ಹಸ್ತಾಂತರಿಸಿದೆ ಎಂದು ವರದಿಯಾಗಿದೆ.

ಇದರಲ್ಲಿ ಮರ್‌ವಾನ್‌ ಬರ್‌ಗೂತಿ ಅವರ ಹೆಸರು ಇರಲಿಲ್ಲ. ಫೆಲೆಸ್ತೀನಿ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರ ಉತ್ತರಾಧಿಕಾರಿಯಾಗಿ ಬರ್ಗುತಿ ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ಅವರು ಬಿಡುಗಡೆಗೊಂಡರೆ ಫೆಲಸ್ತೀನಿನ ಮುಂದಿನ ಅಧ್ಯಕ್ಷರಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇಸ್ರೇಲ್ ಜೈಲಿನಲ್ಲಿ ಹಲವು ವರ್ಷಗಳಿಂದ ಬರ್ಗುತಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲೆಸ್ತೀನ್ ನಾಯಕ ಅಹಮದ್ ಸಾದತ್, ಹಮಾಸ್ ನಾಯಕರಾದ ಇಬ್ರಾಹಿಂ ಸಾಮಿದ್, ಹಸನ್ ಸಲಾಮ ಮುಂತಾದವರನ್ನು ಬಿಡುಗಡೆಗೊಳಿಸಬೇಕು ಎಂದು ಹಮಾಸ್ ಬೇಡಿಕೆ ಇಟ್ಟಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 250 ಫೆಲಸ್ತೀನಿ ಕೈದಿಗಳ ಪೈಕಿ 100 ಮಂದಿಗೆ ಆಕ್ರಮಿತ ಪಶ್ಚಿಮ ದಂಡೆಗೆ ಹೋಗಲು ಮತ್ತು ಐದು ಮಂದಿಗೆ ಜರುಸಲೇಮಿಗೆ ಹೋಗಲು ಇಸ್ರೇಲ್ ಅನುಮತಿ ನೀಡಿರುವುದಾಗಿ ತಿಳಿದು ಬಂದಿದೆ.

ಹಮಾಸ್ ನ ವಶದಲ್ಲಿ 48 ಇಸ್ರೇಲ್ ಒತ್ತೆಯಾಳುಗಳು ಇದ್ದರೂ ಅವರ ಪೈಕಿ 20 ಮಂದಿ ಮಾತ್ರ ಬದುಕಿ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ ಇದೇ ವೇಳೆ 11, 100ಕ್ಕಿಂತಲೂ ಅಧಿಕ ಫೆಲಸ್ತೀನಿ ಕೈದಿಗಳು ಇಸ್ರೇಲ್ ಜೈಲಿನಲ್ಲಿದ್ದಾರೆ.