ಗೃಹಿಣಿ ಮತ್ತು ಪುತ್ರಿಯ ಆತ್ಮಹತ್ಯೆ: ಮಂತ್ರವಾದ, ಮಾಟ ವಿರುದ್ಧ ಕೇರಳದಲ್ಲಿ ಹೊಸ ಕಾನೂನು

0
817

ತಿರುವನಂತಪುರಂ, ಜೂ. 26: ಕೇರಳದಲ್ಲಿ ಮಂತ್ರವಾದ, ಮಾಟಗಳಿಗೆ ಸಂಬಂಧಿಸಿದ ಅಪರಾಧಗಳು ಹೆಚ್ಚುತ್ತಿದ್ದು ಇದನ್ನು ತಡೆಯಲು ಸರಕಾರ ಕಾನೂನು ರಚಿಸುತ್ತಿದೆ. ಇತ್ತೀಚೆಗೆ ನೆಯ್ಯಾಟ್ಟಿಕರ ಎಂಬಲ್ಲಿ ಗೃಹಿಣಿ ಮತ್ತು ಪುತ್ರಿ ಆತ್ಮಹತ್ಯೆ ಮಾಡಿದ ಘಟನೆಯಲ್ಲಿ ಮಂತ್ರವಾದದ ಕರಾಳ ಹಸ್ತವಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸ ಕಾನೂನು ರಚನೆಗೊಳ್ಳುತ್ತಿದ್ದು ಇದಕ್ಕೆ ಸಂಬಂಧಿಸಿದ ಫೈಲುಗಳು ಕಾನೂನು ಸುಧಾರಣಾ ಆಯೋಗದ ಪರಿಗಣನೆಯಲ್ಲಿದೆ.

ಮಂತ್ರವಾದಕ್ಕೆ ಸಂಬಂಧಿಸಿದ ಹತ್ತೊಂಬತ್ತು ವಂಚನೆ ಪ್ರಕರಣಗಳು ಕೆಲವು ತಿಂಗಳೊಳಗೆ ಕೇರಳದಲ್ಲಿ ದಾಖಲಾಗಿದೆ. ಹೆಚ್ಚು ಮಂದಿ ವಂಚನೆಗೊಳಗಾಗಿದ್ದರೂ ದೂರು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ನಕಲಿ ಜಾಹೀರಾತು ನೀಡಿ ವಂಚನೆ ನಡೆಸಲಾಗುತ್ತಿದೆ. ಮಂತ್ರವಾದ-ಮಾಟಕ್ಕೆ ಸಂಬಂಧಿಸಿದ ಭಾರತದ ದಂಡಸಂಹಿತೆ ಪ್ರಕಾರ ವಂಚನೆ ಅಪರಾಧ 1954ರ ಡ್ರಗ್ ಆಂಡ್ ಮಯಾಜಿ ರೆಮಡೀಸ್ ಆಕ್ಟ್ ಪ್ರಕಾರ ಈಗ ಕಾನೂನು ಕ್ರಮ ಜರಗಿಸಲಾಗುತ್ತಿದೆ. ಆದರೆ ಕಾನೂನು ಪ್ರಕಾರ ಇದು ಹೆಚ್ಚು ಗಟ್ಟಿಯಾದ ಕ್ರಮವಲ್ಲ. ಈ ಪರಿಸ್ಥಿತಿಯಲ್ಲಿ ಕಠಿಣ ಶಿಕ್ಷೆಯನ್ನು ಸೇರ್ಪಡೆಗೊಳಿಸಿ ಕಾನೂನು ತರಲು ಕೇರಳ ಸರಕಾರ ಉದ್ದೇಶಿಸಿದೆ. ವಿಶ್ವಾಸ ವಂಚನೆ , ಮೋಸ, ಸಂಚು ಹೆಣೆಯುವುದು ಇತ್ಯಾದಿ ಅಪರಾಧಗಳಿಗೆ ಇರುವ ಕಠಿಣ ಶಿಕ್ಷೆಯನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ. ಮಂತ್ರವಾದದಂತಂಹ ಕ್ರಿಯೆಗಳಿಗೆ ಉತ್ತೇಜನ ನೀಡುವವರ ವಿರುದ್ಧ ಕ್ರಮ ಜರಗಿಸಲು ಶಿಫಾರಸು ಮಾಡುವ ವ್ಯವಸ್ಥೆಗಳು ಕೂಡ ಹೊಸ ಕಾನೂನಿನಲ್ಲಿ ಇರಲಿದೆ.