ಕೊಲ್ಕತಾ, ಜೂ. 26: ನಗರದ ಹೃದಯ ಭಾಗದಲ್ಲಿ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮದ್ರಸಾ ಅದ್ಯಾಪಕನಿಗೆ ಜೈಶ್ರೀರಾಂ ಹೇಳಲು ಬಲವಂತಪಡಿಸಿ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಕಾನಿಂಗಿನಿ೦ದ ಹುಗ್ಲಿಗೆ ರೈಲಿನಲ್ಲಿ ಹೋಗುತ್ತಿದ್ದ ಮುಹಮ್ಮದ್ ಶಾರುಕ್ ಹಲ್ದಾರ್ ಎಂಬ ಇಪ್ಪತ್ತು ವರ್ಷದ ವ್ಯಕ್ತಿಯನ್ನು ಟೋಪಿ ಧರಿಸಿದ್ದಕ್ಕೆ ಮತ್ತು ಗಡ್ಡ ಬಿಟ್ಟದ್ದಕ್ಕಾಗಿ ಗುಂಪೊಂದು ಹಲ್ಲೆ ನಡೆಸಿ ಜೈಶ್ರೀರಾಂ ಹೇಳಲು ಬಲವಂತಪಡಿಸಿದೆ.
ಕಾನಿಂಗ್ನಿಂದ ಹುಗ್ಲಿಯ ಮದ್ರಸಾಕ್ಕೆ ಹೊರಟಿದ್ದೆ. ಧಕ್ಕುರಿಗೆ ತಲುಪಿದಾಗ ಕೆಲವು ಮಂದಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ರೈಲಿಗೆ ಹತ್ತಿದರು. ಹಿಂದೂ ಸಂಹಿತಿ ಕಾರ್ಯಕರ್ತರೆಂದು ಯಾವುದೋ ರಾಲಿಗೆ ಹೋಗುತ್ತಿದ್ದಾರೆ ಎಂದು ಅನಿಸಿತು. ರೈಲು ಬಿಲ್ಲಿಗಂಜಿಗೆ ತಲುಪಿದ ಸಮಯದಲ್ಲಿ ಟೋಪಿ, ಗಡ್ಡ ಬಿಟ್ಟವರಿಗೆ ಅವರು ಕಿರುಕುಳ ನೀಡಲು ತೊಡಗಿದರು. ಟೋಪಿ ಇಟ್ಟದ್ದೇಕೆ, ಗಡ್ಡಬಿಟ್ಟದ್ದೇಕೆ ಎಂದು ಅವರು ನನ್ನನ್ನು ಪ್ರಶ್ನಿಸಿದರು.
ಜೈಶ್ರೀರಾಂ ಕೂಗಲು ಹೇಳಿದರು. ಅದಕ್ಕೆ ನಾನು ಉತ್ತರ ನೀಡಲಿಲ್ಲ. ಅವರು ನನಗೆ ಹೊಡೆದರು. ಈ ಸಮಯದಲ್ಲಿ ರೈಲು ಪಾರ್ಕ್ ಸರ್ಕಲ್ಗೆ ಬಂದಿತ್ತು. ಅವರು ನನ್ನನ್ನು ರೈಲಿನಿಂದ ಹೊರಗೆ ಹಾಕಿದರು. ಆಗ ಸ್ಥಳೀಯ ಕೆಲವರು ತನಗೆ ರಕ್ಷಣೆ ನೀಡಿದರು. ನಂತರ ತೋಪ್ಸಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆ. ಆದರೆ ಈವರೆಗೂ ಆರೋಪಿಗಳಲ್ಲಿ ಯಾರನ್ನೂ ಪೊಲೀಸರು ಬಂಧಿಸಿಲ್ಲ ಎಂದು ಶಾರುಕ್ ಹಲ್ದಾರ್ ಹೇಳಿದರು. ವಾರದ ಹಿಂದೆ ತಬ್ರೇಜ್ ಎಂಬ ಝಾರ್ಖಂಡಿನ ಮದುಮಗನನ್ನು ಜೈಶ್ರೀ ರಾಮ್ ಎಂದು ಹೇಳಲು ಬಲವಂತಪಡಿಸಲಾಗಿತ್ತು. ಅವರು ಬಳಿಕ ಸಾವಿಗೀಡಾಗಿದ್ದರು.












