ಹೊಸದಿಲ್ಲಿ, ಜೂ. 26: ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪಾಲಿಸುತ್ತಿದ್ದಾರೆ ಎಂದು ಆಲ್ ಇಂಡಿಯ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಬಾಬರಿ ಮಸೀದಿ ಕೆಡವಿದ್ದಕ್ಕೆ ಹೊಣೆಗಾರ ನರಸಿಂಹ ರಾವ್ ಆಗಿದ್ದಾರೆ. ಅದರಂತೆ ಮುಸ್ಲಿಮರ ಮೇಲೆ ನಡೆಯುವ ದಾಳಿಯ ಕುರಿತು ಮೋದಿ ಏನು ಮಾತಾಡುವುದಿಲ್ಲ. ಪ್ರಧಾನಿಯ ಆಶಯಗಳು, ಕೆಲಸಗಳಲ್ಲಿ ದೊಡ್ಡ ಅಂತರವಿದೆ. ಬಿಜೆಪಿಗೆ ಒಬ್ಬ ಮುಸ್ಲಿಂ ಸಂಸದ ಕೂಡ ಇಲ್ಲ. ಮುಸ್ಲಿಮರನ್ನು ಹಿಂದಿನ ಸಾಲಲ್ಲಿಡುತ್ತಿರುವುದು ಯಾರು ಎಂದು ಉವೈಸಿ ಪ್ರಶ್ನಿಸಿದರು. ಪ್ರಧಾನಿಯವರು ಶಾಹಬಾನುರನ್ನು ಸ್ಮರಿಸಿಕೊಳ್ಳಲಿ. ಅವರದೇ ಜನರ ಗುಂಪು ಕೊಲೆ ಮಾಡಿದ ತಬ್ರೀಸ್ ಅನ್ಸಾರಿ, ಅಖ್ಲಾಕ್ , ಫೆಹ್ಲೂ ಖಾನ್ ನೆನಪಿದೆಯಾ? ಅಲಿಮುದ್ದೀನ್ ಅನ್ಸಾರಿಯನ್ನು ಕೊಲೆ ಮಾಡಿದವರನ್ನು ಹಾರಹಾಕಿ ಸ್ವಾಗತಿಸಿದ ಬಿಜೆಪಿ ಸಚಿವನನ್ನು ಅವರು ಮರೆತಿದ್ದಾರೆ. ಯಾಕೆ ನೀವು ಮುಸ್ಲಿಮರಿಗೆ ಮೀಸಲಾತಿ ನೀಡುವುದು ಎಂದು ಉವೈಸಿ ಪ್ರಶ್ನಿಸಿದರು.
ಜೂನ್ ಹದಿನೆಂಟರಂದು ಝಾರ್ಕಂಡಿನ ಸರಾಯ್ ಖೆಲ ಸದರ್ ಜಿಲ್ಲೆಯಲ್ಲಿ ತಬ್ರೀಸ್ ಅನ್ಸಾರಿಯೆನ್ನುವ 24 ವರ್ಷದ ಮುಸ್ಲಿಂ ಯುವಕನನ್ನು ಜನರ ಗುಂಪು ಜೈಶ್ರೀರಾಂ, ಜೈಹನುಮಾನ್ ಎಂದು ಹೇಳಿಸಿ ಗಂಟೆಗಳ ಕಾಲ ಹೊಡೆದರು. ನಂತರ ತಬ್ರೀಸ್ ಮೃತಪಟ್ಟರು. ಲೋಕಲ್ ರೈಲಿನಲ್ಲಿ ಮದ್ರಸಾ ಅಧ್ಯಾಪಕನಿಗೆ ಜೈಶ್ರೀರಾಂ ಕೂಗಲು ಹೇಳಿ ಒಂದು ತಂಡ ಹೊಡೆದಿದೆ.












