ದೇವಾಲಯದಲ್ಲಿ ಕಾಳಿ ವಿಗ್ರಹಕ್ಕೆ ‘ಮೇರಿ-ಯೇಸು’ ರೂಪದ ವೇಷ: ಅರ್ಚಕನ ಬಂಧನ

0
327

ಸನ್ಮಾರ್ಗ ವಾರ್ತೆ

ಮುಂಬೈ: ಮುಂಬೈನ ದೇವಾಲಯವೊಂದರಲ್ಲಿ ಕಾಳಿ ವಿಗ್ರಹವನ್ನು ಮಗು ಯೇಸುವನ್ನು ಹಿಡಿದಿದ್ದ ತಾಯಿ ಮೇರಿ ಅವರ ರೂಪಕ್ಕೆ ಹೋಲುವ ರೀತಿಯಲ್ಲಿ ಅಲಂಕರಿಸಲಾಗಿದೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ. ದೇವತೆ ತನ್ನ ಕನಸಿನಲ್ಲಿ ಕಾಣಿಸಿಕೊಂಡು, ವಿಗ್ರಹಕ್ಕೆ ಆ ರೀತಿಯಲ್ಲಿ ಉಡುಗೆ ತೊಡಿಸುವಂತೆ ಸೂಚಿಸಿದ್ದಾಗಿ ಅರ್ಚಕ ಹೇಳಿಕೊಂಡಿದ್ದಾನೆ.

ಘಟನೆ ಚೆಂಬೂರಿನ ಕಾಳಿ ಮಾತಾ ದೇವಾಲಯದಲ್ಲಿ ಸಂಭವಿಸಿದೆ. ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು, ಕಾಳಿ ದೇವಿಯ ವಿಗ್ರಹವನ್ನು ತಾಯಿ ಮೇರಿ ಶೈಲಿಯ ಉಡುಪಿನಲ್ಲಿ, ಮಗು ಯೇಸುವನ್ನು ತಬ್ಬಿಕೊಂಡಿರುವಂತೆ ಅಲಂಕರಿಸಿರುವುದನ್ನು ನೋಡಿ ಆಶ್ಚರ್ಯಚಕಿತರಾದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕಾಳಿ ವಿಗ್ರಹಕ್ಕೆ ತಾಯಿ ಮೇರಿ ವೇಷಧಾರಣೆ ಮಾಡಿಸಿರುವುದನ್ನು ತೋರಿಸುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.