✍️ ಇಷಲ್
ಪರೀಕ್ಷೆ ಅಂದ್ರೆ ಮಕ್ಕಳ ಪಾಲಿಗೂ ಟೆನ್ಶನ್ನು. ಹೆತ್ತವರ ಪಾಲಿಗೂ ಟೆನ್ಶನ್ನು. ಅದರಲ್ಲೂ ಮಕ್ಕಳು ಮೆಡಿಕಲ್ ಓದುತ್ತಿದ್ದಾರೆಂದರೆ ಹೇಳುವುದೇ ಬೇಡ. ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಮೆಡಿಕಲ್ ಪರೀಕ್ಷೆ ಒಂದು ಎಂದು ಗುರುತಿಸಿಕೊಂಡಿದೆ. ಮಣಭಾರದ ಪುಸ್ತಕಗಳು, ನಿರಂತರ ಪರೀಕ್ಷೆಗಳು ಅದರಿಂದಾಗಿ ಅನಿಯಂತ್ರಿತ ನಿದ್ದೆ ಆಹಾರ ಸೇವನೆ ಇತ್ಯಾದಿಗಳೆಲ್ಲ ಮೆಡಿಕಲ್ ಓದುವ ಮಕ್ಕಳ ಪಾಲಿಗೆ ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಮಕ್ಕಳ ಮನಸ್ಸು ಚಂಚಲ ಗೊಳ್ಳುವುದಿದೆ. ಮುಂದುವರಿಯಬೇಕೊ ಬೇಡವೋ ಎಂಬ ಪ್ರಶ್ನೆ ಎದುರಾಗುವುದಿದೆ. ಹೆತ್ತವರು ಏನೆಂದುಕೊಳ್ಳುತ್ತಾರೋ ಎಂಬ ನೋವು ಮಕ್ಕಳನ್ನು ಕಾಡುವುದಿದೆ. ಇಂಥದ್ದೇ ಒಂದು ಘಟನೆ ಮುಂಬೈಯಲ್ಲಿ ನಡೆದಿದ್ದು ಸಾಕಷ್ಟು ಸದ್ದು ಮಾಡಿದೆ.
ಪರೀಕ್ಷೆಗಾಗಿ ಓದುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿ ರಾತ್ರಿ 2 ಗಂಟೆಗೆ ತನ್ನ ತಂದೆಗೆ ಕರೆ ಮಾಡುತ್ತಾಳೆ. ಪರೀಕ್ಷೆಯ ಒತ್ತಡವನ್ನು ತಾಳಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿಯೇ ಹೇಳುತ್ತಾಳೆ. ಈ ಸಂದರ್ಭದಲ್ಲಿ ತಂದೆ ಸಮಾಧಾನ ಪಡಿಸುವ ಮಾತುಗಳು ಹೃದಯವನ್ನು ತಟ್ಟುತ್ತದೆ.
ಮಗಳೇ ಡಾಕ್ಟರ್ ಆಗುವುದು ಬದುಕಿನ ಅತಿ ದೊಡ್ಡ ಸಾಧನೆ ಏನೂ ಅಲ್ಲ. ಜಗತ್ತಿನಲ್ಲಿ ಧಾರಾಳ ಉದ್ಯೋಗಗಳಿವೆ . ನೀನು ಈಗ ಚಿಕ್ಕವಳು . ಈ ಒತ್ತಡದ ಭಾರವನ್ನು ನೀನೊಬ್ಬಳೇ ಹೊತ್ತುಕೊಳ್ಳಬೇಕಿಲ್ಲ. ನಿನಗೆ ಕಷ್ಟ ಅನಿಸುತ್ತಿದ್ದರೆ ಈ ಕಲಿಕೆಯನ್ನು ನೀನು ನಿಲ್ಲಿಸಿ ಬಿಡು. ನಾನು ಈಗಲೂ ಆರೋಗ್ಯವಂತನಾಗಿದ್ದೇನೆ . ನಾನು ಸಂಪಾದಿಸಬಲ್ಲೆ. ಹಣದ ಬಗ್ಗೆ ನೀನು ಆಲೋಚಿಸಬೇಕಿಲ್ಲ. ನೀನು ಆರಾಮವಾಗಿರು. ಸಂತೋಷವಾಗಿರು ಎಂದು ತಂದೆ ಮಗಳಿಗೆ ಉಪದೇಶ ಮಾಡುತ್ತಾರೆ.
ದೇಶದ ಹಲವು ರಾಜ್ಯಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಅದರಲ್ಲೂ ನೀಟ್ ಪರೀಕ್ಷೆ ತಯಾರಿಗಾಗಿ ಕೋಚಿಂಗ್ ಸೆಂಟರ್ ನಲ್ಲಿ ಇರುವ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳು ಇವುಗಳಲ್ಲಿ ಬಹಳವೇ ಹೆಚ್ಚುರುತ್ತದೆ. ಡಾಕ್ಟರ್ ಆಗಬೇಕು ಎಂದು ಹೆತ್ತವರು ಬಯಸುವುದು ಮತ್ತು ಮಕ್ಕಳನ್ನು ಅದಕ್ಕಾಗಿ ತಯಾರಿ ಗೊಳಿಸುವ ದಾವಂತದಲ್ಲಿ ಒತ್ತಡವನ್ನು ತಡಕೊಳ್ಳಲಾಗದೆ ಮಕ್ಕಳು ಬದುಕಿಗೆ ವಿದಾಯ ಕೋರುತ್ತಿರುತ್ತಾರೆ . ಇಂಥ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕಾದದ್ದು ಬಹಳ ಮುಖ್ಯ. ಕಲಿಕೆ ಗಿಂತ ನೀನು ನಮಗೆ ಬಹಳ ಮುಖ್ಯ ಎಂಬ ಸಂದೇಶವನ್ನು ಮಕ್ಕಳಿಗೆ ಹೆತ್ತವರು ತಲುಪಿಸಬೇಕು. ಕಲಿಯದಿದ್ದರೆ ಅಥವಾ ನೀಟ್ ಪರೀಕ್ಷೆ ಪಾಸ್ ಆಗದಿದ್ದರೆ ಹೆತ್ತವರು ನೊಂದುಕೊಳ್ಳುತ್ತಾರೋ ಎಂಬ ಭಯ ಮಕ್ಕಳಲ್ಲಿ ಉಂಟಾಗದಂತೆ ಅವರಿಗೆ ಕಾವಲು ನಿಲ್ಲುವ ಹೊಣೆಗಾರಿಕೆ ಹೆತ್ತವರದು.
ಈ ಹಿನ್ನೆಲೆಯಲ್ಲಿ ತನ್ನ ಮಗಳನ್ನು ಸಾಂತ್ವನ ಪಡಿಸಿದ ಆ ತಂದೆ ನಿಜಕ್ಕೂ ಮಾದರಿ ಯೋಗ್ಯರಾಗಿದ್ದಾರೆ.












