✍️ ಮಿಷಲ್
ಹಿಜಾಬ್ ಮತ್ತೆ ಸದ್ದು ಮಾಡ್ತಾ ಇದೆ. ರಾಜ್ಯದ ಹಾವೇರಿಯಲ್ಲಿ ಹಿಜಾಬ್ ಗೆ ವಿರುದ್ಧವಾಗಿ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿರುವುದರ ನಡುವೆಯೇ ಮಹಾರಾಷ್ಟ್ರದಲ್ಲಿ ಇದಕ್ಕೆ ಭಿನ್ನವಾದ ಬೆಳವಣಿಗೆ ನಡೆದಿದೆ. ಇಲ್ಲಿನ ಗೋರ್ಗಾವ್ ಎಂಬಲ್ಲಿಯ ವಿವೇಕ್ ವಿದ್ಯಾಲಯ ಅಂಡ್ ಜೂನಿಯರ್ ಕಾಲೇಜಿನ ಕ್ಯಾಂಪಸ್ ನಲ್ಲಿ ಮತ್ತು ತರಗತಿಯಲ್ಲಿ ಹಿಜಾಬ್ ಮತ್ತು ನಿಕಾಬ್ ಗೆ ಇದ್ದಕ್ಕಿದ್ದಂತೆ ನಿಷೇಧ ಹೇರಲಾಯಿತು. ಗೇಟಿನ ಹೊರಗಡೆ ಹಿಜಾಬ್ ಮತ್ತು ನಿಕಾಬನ್ನು ಕಳಚಿ ಕ್ಯಾಂಪಸ್ ಒಳಗೆ ಬರಬೇಕು ಎಂದು ಆಡಳಿತ ಸಮಿತಿ ನಿರ್ದೇಶನ ನೀಡಿತು. ಈ ದಿಡೀರ್ ಆದೇಶದಿಂದ ವಿದ್ಯಾರ್ಥಿನಿಯರು ಗೊಂದಲಕ್ಕೆ ಒಳಗಾದರು. ವಿದ್ಯಾರ್ಥಿನಿಯರು ಕ್ಯಾಂಪಸ್ ನ ಹೊರಗಡೆ ಪ್ರತಿಭಟನೆಗೆ ಇಳಿದರು. ಈವರೆಗೆ ಈ ಕಾಲೇಜಿನಲ್ಲಿ ಹಿಜಾಬ್ ಮತ್ತು ನಿಕಾಬ್ ಗೆ ವಿರೋಧ ಇರಲಿಲ್ಲ. ವಿದ್ಯಾರ್ಥಿನಿಯರು ಇವೆರಡನ್ನೂ ಧರಿಸಿಯೇ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು . ಹೀಗಿರುವಾಗ ಯಾವ ಸೂಚನೆಯನ್ನೂ ನೀಡದೆ ದಿಡೀರಾಗಿ ಯಾಕೆ ನಿಷೇಧ ಹೇರಲಾಗಿದೆ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದರು. ಇವರಿಗೆ ವಿದ್ಯಾರ್ಥಿ ಸಂಘಟನೆಯಾದ ಎಸ್ಐಒ ಬೆಂಬಲ ನೀಡಿತು.
ಪ್ರತಿಭಟನೆ ತೀವ್ರವಾದಂತೆ ಎರಡು ದಿನಗಳ ಕಾಲಾವಕಾಶವನ್ನು ಕೊಡಿ ಎಂದು ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿಯರಲ್ಲಿ ವಿನಂತಿಸಿತು. ವಿದ್ಯಾರ್ಥಿನಿಯರು ಒಪ್ಪಿದ್ರು. ಆದರೆ ಎರಡು ದಿನಗಳಾದ ಬಳಿಕವೂ ಮ್ಯಾನೇಜ್ಮೆಂಟ್ ಯಾವುದೇ ಸೂಚನೆ ನೀಡದೆ ಇರುವಾಗ ವಿದ್ಯಾರ್ಥಿನಿಯರು ಮತ್ತೆ ಪ್ರತಿಭಟನೆಗೆ ಇಳಿದರು.
ಇದರ ಬಳಿಕ ಮ್ಯಾನೇಜ್ಮೆಂಟ್ ತನ್ನ ನಿರ್ಧಾರವನ್ನು ಬದಲಿಸಿತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಬಹುದು ಆದರೆ ಮುಖ ಮುಚ್ಚುವ ನಿಕಾಬ್ ಧರಿಸಬಾರದು ಎಂದು ಶರತ್ತು ವಿಧಿಸಿತು. ಈ ಮೂಲಕ ಈ ವಿವಾದ ಕೊನೆಗೊಂಡಿತು. ನಿಕಾಬ್ ಧರಿಸುವುದಕ್ಕೆ ಅನುಮತಿ ಬೇಕು ಎಂಬುದು ನಮ್ಮ ಆಗ್ರಹವಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದರು.
ಇದೆ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾದ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅನುಮತಿ ಇಲ್ಲದೆ ಗುಂಪು ಸೇರಿದ ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಆರೋಪವನ್ನು ಹೊರಿಸಿ ಇವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜಾಬ್ ವಿವಾದ ಉಂಟಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಜಾಬ್ ವಿರುದ್ಧ ನಿಂತರು. ಅನೇಕ ವಿದ್ಯಾರ್ಥಿನಿಯರ ಶಿಕ್ಷಣವೇ ಇದರಿಂದಾಗಿ ಮೊಟಕುಗೊಂಡಿತು. ಇದೀಗ ಹಾವೇರಿಯಲ್ಲಿ ಮತ್ತೆ ಹಿಜಾಬನ್ನು ವಿವಾದ ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಜಾಬ್ ಗೆ ವಿರುದ್ಧವಾಗಿ ಕೇಸರಿ ಶಾಲನ್ನು ಧರಿಸಿಕೊಂಡು ವಿದ್ಯಾರ್ಥಿಗಳು ತರಗತಿಗೆ ಬಂದಿದ್ದಾರೆ. ಇನ್ನೊಂದೆಡೆ ಹಿಜಾಬ್ ಧರಿಸುವುದು ಹೆಣ್ಣು ಮಕ್ಕಳು, ಇದಕ್ಕೆ ಗಂಡು ಮಕ್ಕಳು ಕೇಸರಿ ಶಾಲು ಧರಿಸಿ ಬರುವುದಕ್ಕೆ ಅರ್ಥವಿಲ್ಲ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ದಿಢೀರ್ ಆಗಿ ಹಿಜಾಬ್ ಗೆ ನಿಷೇಧ ಹೇರಿ ಆ ಬಳಿಕ ಹಿಂಪಡೆದುಕೊಳ್ಳಲಾಗಿದೆ.
ಇಷ್ಟು ವರ್ಷಗಳವರೆಗೆ ಶಾಲಾ ಆಡಳಿತಕ್ಕಾಗಲಿ ಕಲಿಕೆಗಾಗಲಿ ತೊಂದರೆ ಎನಿಸದಿದ್ದ ಹಿಜಾಬ್ ಇತ್ತಿತ್ತಲಾಗಿ ವಿವಾದಕ್ಕೆ ಒಳಗಾಗುತ್ತಿರುವುದರ ಹಿಂದೆ ಧರ್ಮ ದ್ವೇಷದ ಸಂಚಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.












