ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಹ್ಯೂಮನ್ ವೆಲ್ಫೇರ್ ಫೌಂಡೇಶನ್ (HWF) ತನ್ನ ವಾರ್ಷಿಕೋತ್ಸವವನ್ನು ಶನಿವಾರ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರಿನಲ್ಲಿ ನಡೆಸಿತು. ದೆಹಲಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 75 ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಸನ್ಮಾನಿಸಿತು. ಈ ಕಾರ್ಯಕ್ರಮವು ಹಿಂದುಳಿದ ವರ್ಗದ ಯುವಕರಿಗೆ ಶಿಕ್ಷಣ ಮತ್ತು ಸಬಲೀಕರಣ ಒದಗಿಸುವಲ್ಲಿ ಸಂಸ್ಥೆಯ ದೀರ್ಘಕಾಲದ ಬದ್ಧತೆಯ ಇನ್ನೊಂದು ಮೈಲುಗಲ್ಲಾಗಿದೆ.
ಭಾರತದ ಮಾಜಿ ಕೇಂದ್ರ ಸಚಿವರು ಹಾಗೂ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರಿನ ಅಧ್ಯಕ್ಷರಾದ ಸಲ್ಮಾನ್ ಖುರ್ಷಿದ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದುಳಿದ ಸಮುದಾಯಗಳ ಜೀವನವನ್ನು ಬದಲಾಯಿಸುವ ಶಕ್ತಿ ಶಿಕ್ಷಣ ಪಡೆಯುವುದಲ್ಲಿದೆ ಎಂದು ಒತ್ತಿ ಹೇಳಿದರು.
“ಶಿಕ್ಷಣವೇ ಹಿಂದುಳಿದ ವರ್ಗಗಳನ್ನು ಗೌರವಾನ್ವಿತ ಜೀವನದತ್ತ ಕೊಂಡೊಯ್ಯುವ ಏಕೈಕ ಶಕ್ತಿಯಾಗಿದೆ” ಎಂದು ಖುರ್ಷಿದ್ ಅವರು ಹೇಳಿದರು. HWFನ ಈ ಕಾರ್ಯವನ್ನು, “ಇದು ಸಾಮಾಜಿಕ ನ್ಯಾಯದ ಪ್ರಾಯೋಗಿಕ ನೋಟ” ಎಂದೂ ಅವರು ಶ್ಲಾಘಿಸಿದರು. ಕಲ್ಯಾಣ ಸಂಸ್ಥೆಗಳ ಜವಾಬ್ದಾರಿ ಕೇವಲ ಆರ್ಥಿಕ ನೆರವನ್ನು ಒದಗಿಸುದರಲ್ಲಿ ಸೀಮಿತವಾಗಿಲ್ಲ; ಯುವಕರಲ್ಲಿ ಆತ್ಮವಿಶ್ವಾಸ, ಗುರಿ ಮತ್ತು ಸ್ವಾಭಿಮಾನದ ಭಾವನೆಗಳನ್ನು ಬೆಳೆಸುವ ಮೂಲಕ ನೈಜ ಸಬಲೀಕರಣವು ಬರುತ್ತದೆ ಎಂದು ಅವರು ಹೇಳಿದರು.
HWFನ ಪ್ರಧಾನ ಕಾರ್ಯದರ್ಶಿ ಸಾಜಿದ್ ಎಂ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಯಾವುದೇ ಬಗೆಯ ಭೇದ ಭಾವವಿಲ್ಲದೆ ನೆರವು ನೀಡುವುದು ಸಂಸ್ಥೆಯ ಮೂಲ ಬದ್ಧತೆಯಾಗಿದೆ. ಜಾತಿ, ಧರ್ಮ, ರಾಜಕೀಯ… ಈ ಎಲ್ಲವನು ಮೀರಿ, ಕೇವಲ ಅಗತ್ಯವನ್ನೇ ಆಧಾರವನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ನೆರವು ಒದಗಿಸುವುದು ನಮ್ಮ ಕರ್ತವ್ಯ ಆಗಿದೆ” ಎಂದು ಹೇಳಿದರು. ಸಂಸ್ಥೆಯ ವಿದ್ಯಾರ್ಥಿವೇತನದ ಯೋಜನೆಗಳು ಸಾವಿರಾರು ಮಕ್ಕಳಿಗೆ ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ನೆರವಾಗಿವೆ ಎಂದು ಅವರು ಮಾತಿನಲ್ಲಿ ಹೆಮ್ಮೆ ವ್ಯಕ್ತವಾಯಿತು. “ಕಳೆದ ಹದಿನೆಂಟು ವರ್ಷಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದಿದ್ದಾರೆ” ಎಂದರು.
ಮೆಡಿಕಲ್ ಸರ್ವಿಸ್ ಸೊಸೈಟಿಯ ಪ್ರೊ. ಡಾ. ಮುಹಮ್ಮದ್ ಫಾರುಕ್ ಅವರು ತಮ್ಮ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡುತ್ತ, ಈ ಸಹಾಯವನ್ನು ತಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪ್ರೇರಣೆ ಮಾಡಬೇಕು ಎಂದು ಕಿವಿಮಾತು ನೀಡಿದರು. ಸಮಾಜ ಸೇವೆಯ ಮನೋಭಾವದೊಂದಿಗೆ ಮುಂದೆ ಸಾಗಬೇಕು ಹಾಗೂ ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು.
HWF ಕಾರ್ಯದರ್ಶಿಯಾದ ಮಲಿಕ್ ಮೊತಾಸಿಂ ಖಾನ್ ಅವರು, ವಿದ್ಯಾರ್ಥಿವೇತನ ಪಡೆದವರು ಸಾಮಾಜಿಕ ಅಭಿವೃದ್ಧಿಗೆ ಬದ್ಧವಾದ ಹೊಣೆಗಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. “ಈ ಸಹಕಾರವು ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ಸಹಾಯಕವಾಗಬೇಕು”
ಈ ಸಂಸ್ಥೆಯು ಸದ್ಯಕ್ಕೆ 2,200ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಪ್ರತಿ ವರ್ಷ 500ಕ್ಕೂ ಹೆಚ್ಚು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಒದಗಿಸಲಾಗುತ್ತಿದೆ. ಪ್ರಮುಖ ಯೋಜನೆಗಳಲ್ಲಿ ಅನಾಥ ಮಕ್ಕಳಿಗೆ ‘ಪತ್ರತ್ ವಿದ್ಯಾರ್ಥಿವೇತನ’, ಯುಜಿಯು/ಪಿಜಿಯು ವಿದ್ಯಾರ್ಥಿವೇತನಗಳು ಹಾಗೂ ‘ಪ್ರೊ. ಕೆ.ಎ. ಸಿದ್ದೀಕ್ ಹಸನ್ ವಿದ್ಯಾರ್ಥಿವೇತನ’ಗಳು ಸೇರಿವೆ.
ಈ ಕಾರ್ಯಕ್ರಮವನ್ನು ಶಿಕ್ಷಣ ವಿಭಾಗದ ಮ್ಯಾನೇಜರ್ ಶಾರಿಕ್ ಅನ್ಸಾರ್ ಅವರು ನಡೆಸಿ, HWFನ ಸಿಇಒ ನೌಫಲ್, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯದವರು ಭಾಗವಹಿಸಿದ್ದರು. ‘ವಿಷನ್ 2026’ನಡಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಜಾಗೃತ ಸಮಾಜವನ್ನು ನಿರ್ಮಿಸುವ ಸಂಸ್ಥೆಯ ವಿಶಾಲ ದೃಷ್ಟಿಕೋನವನ್ನು ಈ ಸಮಾರಂಭ ಪ್ರತಿಬಿಂಬಿಸಿತು.












