ಮುಸ್ಲಿಮ್ ಸಮುದಾಯಕ್ಕೆ ಇನ್ನೊಂದು `ಬಾಬರಿ ಮಸೀದಿ’ಯ ಅಗತ್ಯ ಇದೆಯೇ?

0
690

ಸನ್ಮಾರ್ಗ ಸಂಪಾದಕೀಯ

ಮುಸ್ಲಿಮರಿಗೆ ಬಾಬರನ ಹೆಸರಲ್ಲಿ ಇನ್ನೊಂದು ಮಸೀದಿಯ ಅಗತ್ಯ ಇದೆಯೇ?

ಇಂಥದ್ದೊಂದು ಪ್ರಶ್ನೆಗೆ ತೃಣಮೂಲ ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ವೇದಿಕೆ ನಿರ್ಮಿಸಿದ್ದಾರೆ. ಪಶ್ಚಿಮ ಬಂಗಾಲದ ಮುರ್ಶಿದಾಬಾದ್‌ನ ಬೆಲ್ಡಂಗಾದಲ್ಲಿ ಇವರು ತದ್ರೂಪ ಬಾಬರಿ ಮಸೀದಿಗೆ ಡಿಸೆಂಬರ್ 6 ರಂದು ಅಡಿಗಲ್ಲು ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯದ ಮೌಲಾನರೂ ಸಹಿತ ಸಾಕಷ್ಟು ಮಂದಿ ಭಾಗವಹಿಸಿದ್ದಾರೆ. ಮೂರು ಅಂತಸ್ತುಗಳಿರುವ ಈ ಮಸೀದಿಯಲ್ಲಿ ಶಾಲೆ, ಆಸ್ಪತ್ರೆ, ಹೆಲಿಪ್ಯಾಡ್ ಸಹಿತ ವಿವಿಧ ಸೌಲಭ್ಯಗಳಿರಲಿವೆ ಎಂದು ಹೇಳಿರುವ ಅವರು, ಇದಕ್ಕೆ 300 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದೂ ಹೇಳಿದ್ದಾರೆ. ಈಗಾಗಲೇ ಓರ್ವ ವ್ಯಕ್ತಿಯೊಂದಿಗೆ 80 ಕೋಟಿ ರೂಪಾಯಿಗಾಗಿ ಒಪ್ಪಂದ ನಡೆದಿದೆ ಎಂದೂ ಹೇಳಿದ್ದಾರೆ. ಇದೇವೇಳೆ,

ಇದೇ ಮುರ್ಶಿದಾಬಾದ್‌ನಲ್ಲಿ ಬಿಜೆಪಿ ನಾಯಕ ಸಖರೋವ್ ಸರ್ಕಾರ್ ಎಂಬವರು ಡಿ. 6 ರಂದೇ ತದ್ರೂಪು ರಾಮಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮ ಬಂಗಾಲದಲ್ಲಿ ಇದೀಗ ಬಾಬರಿ ಮಸೀದಿ ಮತ್ತು ರಾಮಮಂದಿರಗಳೇ ಚರ್ಚೆಯ ಕೇಂದ್ರಬಿಂದುವಾಗಿ ಬಿಟ್ಟಿದೆ. ಹಾಗಂತ,

ಈ ಹುಮಾಯೂನ್ ಕಬೀರ್ ಅವರು ಸಾಮಾನ್ಯರಲ್ಲ. ಅವರ ಈವರೆಗಿನ ನಡವಳಿಕೆಯೇ ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೇಳುತ್ತದೆ. 2011-12ರಲ್ಲಿ ಇವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾದರು. ಬಳಿಕ ರಾಜಿನಾಮೆ ನೀಡಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಮಾತ್ರವಲ್ಲ, ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವರೂ ಆದರು. 2015ರಲ್ಲಿ ಇವರನ್ನು ತೃಣಮೂಲ ಕಾಂಗ್ರೆಸ್ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಿತು. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.

2016ರಲ್ಲಿ ಇವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸಿದರು. ಆದರೆ ಗೆಲ್ಲಲು ವಿಫಲರಾದರು. 2018ರಲ್ಲಿ ಬಿಜೆಪಿಯನ್ನು ಸೇರಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಮುರ್ಶಿದಾಬಾದ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಮೂರನೇ ಸ್ಥಾನವನ್ನು ಪಡೆಯುವುದಕ್ಕೆ ಮಾತ್ರ ಸಫಲರಾದರು. 2021ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮತ್ತೆ ಸೇರ್ಪಡೆಯಾದರು ಮತ್ತು ಭರತ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಇದೀಗ ಪುನಃ ಟಿಎಂಸಿಯಿಂದ ಉಚ್ಛಾಟನೆಗೊಂಡಿದ್ದಾರೆ. ಬಾಬರಿ ಮಸೀದಿ ನಿರ್ಮಿಸುವುದಾಗಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಈ ಹೇಳಿಕೆಗಿಂತ ಮೊದಲು ಬಿಜೆಪಿ ಬೆಂಬಲಿಗರನ್ನು ನದಿಗೆ ಎಸೆಯುವುದಾಗಿ ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಮತಾರನ್ನು ಸೋಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಡಿ. 22ರಂದು ಹೊಸ ಪಕ್ಷ ಘೋಷಣೆ ಮಾಡುವುದಾಗಿಯೂ ಒಟ್ಟು 135 ಸ್ಥಾನಗಳಿಗೆ ತನ್ನ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿಯೂ ಹೇಳಿದ್ದಾರೆ. ಅಸದುದ್ದೀನ್ ಓವೈಸಿ ಪಕ್ಷದೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸುವುದಾಗಿಯೂ ಹೇಳಿದ್ದಾರೆ. ನಿಜವಾಗಿ,

ಈ ಇಡೀ ಬೆಳವಣಿಗೆಯನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುವ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ.

ಅಂದಹಾಗೆ, ಬಾಬರಿ ಎಂಬ ಹೆಸರಿನ ಮಸೀದಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮುಸ್ಲಿಮ್ ಸಮುದಾಯ ಹೋರಾಡಿರಲಿಲ್ಲ. ಬಾಬರ್ ನಿರ್ಮಿಸಿದ ಮಸೀದಿ ಎಂಬ ಕಾರಣಕ್ಕಾಗಿ ಬಾಬರಿ ಮಸೀದಿ ಎಂಬ ನಾಮಕರಣ ಆಗಿದೆಯೇ ಹೊರತು ಬಾಬರ್ ಎಂಬ ಹೆಸರಿಗೆ ಇನ್ನಾವ ಮಹತ್ವವೂ ಇಲ್ಲ. ಆದ್ದರಿಂದಲೇ, ಬಾಬರಿ ಮಸೀದಿ ಇದ್ದ ಜಾಗವನ್ನು 2019ರಲ್ಲಿ ಸುಪ್ರೀಮ್ ಕೋರ್ಟ್ ಹಿಂದೂಗಳಿಗೆ ಒಪ್ಪಿಸಿದಾಗ ಪರ್ಯಾಯ ಬಾಬರಿ ಮಸೀದಿಯನ್ನು ನಿರ್ಮಿಸುವುದಾಗಿ ಮುಸ್ಲಿಮ್ ಸಮುದಾಯ ಘೋಷಿಸಲಿಲ್ಲ. ಬಾಬರಿ ಮಸೀದಿಯ ಬದಲಿಗೆ ಇನ್ನೊಂದು ಮಸೀದಿಯನ್ನು ಕಟ್ಟುವುದಕ್ಕೆ ಸುಪ್ರೀಮ್ ಕೋರ್ಟ್ 5 ಎಕರೆ ಭೂಮಿಯನ್ನು ಮಂಜೂರು ಮಾಡಿದರೂ ಅದರಲ್ಲಿ ಮುಸ್ಲಿಮ್ ಸಮುದಾಯ ಆಸಕ್ತಿಯನ್ನೂ ತಾಳಲಿಲ್ಲ. ಬಾಬರಿ ಮಸೀದಿಯನ್ನು ಉಳಿಸಿಕೊಳ್ಳುವುದಕ್ಕಾಗಿ 1949 ರಿಂದ ತೊಡಗಿ 2019ರ ವರೆಗೆ ಹೋರಾಡಿದ್ದ ಉತ್ತರ ಪ್ರದೇಶದ ಹಾಶಿಮ್ ಅನ್ಸಾರಿ ಕುಟುಂಬವಾಗಲಿ ಭಾರತೀಯ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಆಗಲಿ ಆ 5 ಎಕರೆ ಭೂಮಿಯನ್ನು ಸ್ವೀಕರಿಸಲೂ ಮುಂದಾಗಲಿಲ್ಲ.

ಕೊನೆಗೆ ಉತ್ತರ ಪ್ರದೇಶದ ಸರಕಾರದ ಒತ್ತಡದಿಂದ ಸುನ್ನಿ ವಕ್ಫ್ ಬೋರ್ಡ್ ಈ ಭೂಮಿಯನ್ನು ಸ್ವೀಕರಿಸಿತು. ಮಾತ್ರವಲ್ಲ, ನಿರ್ಮಾಣವಾಗಲಿರುವ ಮಸೀದಿಯನ್ನು ಬಾಬರಿ ಮಸೀದಿ ಎಂದು ಕರೆಯದೇ ಮುಹಮ್ಮದ್ ಬಿನ್ ಅಬ್ದುಲ್ಲಾ ಎಂದು ನಾಮಕರಣ ಮಾಡಿತು. ಆದರೆ, ಸುಪ್ರೀಮ್ ಕೋರ್ಟ್ ತೀರ್ಪು ಬಂದು ಇದೀಗ 6 ವರ್ಷಗಳೇ ಕಳೆದಿದ್ದರೂ ಈ ಮಸೀದಿ ಇನ್ನೂ ತಲೆ ಎತ್ತಿಲ್ಲ. ಅಡಿಗಲ್ಲು ಹಾಕಿರುವುದನ್ನು ಬಿಟ್ಟರೆ ಇನ್ನಾವ ಪ್ರಗತಿಯನ್ನೂ ಕಂಡಿಲ್ಲ. ಒಂದುವೇಳೆ,

ಮುಸ್ಲಿಮ್ ಸಮುದಾಯ ಮನಸ್ಸು ಮಾಡಿರುತ್ತಿದ್ದರೆ ಆ 5 ಎಕರೆ ಪ್ರದೇಶದಲ್ಲಿ ತದ್ರೂಪು ಬಾಬರಿ ಮಸೀದಿಯನ್ನು ಯಾವಾಗಲೋ ನಿರ್ಮಿಸಬಹುದಿತ್ತು. ಆದರೆ ನಿರ್ಮಿಸಿಲ್ಲ ಎಂಬುದೇ ಮುಸ್ಲಿಮ್ ಸಮುದಾಯದ ಗುರಿ ಏನಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ನ್ಯಾಯವನ್ನು ಪಡಕೊಳ್ಳುವುದು ಗುರಿಯಾಗಿತ್ತೇ ಹೊರತು ಹೊಸ ಬಾಬರಿ ಮಸೀದಿಯನ್ನು ಕಟ್ಟುವುದಲ್ಲ. ಆದರೆ ಇದೀಗ,

ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿ ಎಂಬ ಹೊಸ ದಾಳವನ್ನು ಉರುಳಿಸಿದ್ದಾರೆ. ಹೀಗೆ ಘೋಷಿಸುವುದಕ್ಕಿಂತ ಮೊದಲು ಇವರು ಬಿಜೆಪಿಯನ್ನು ಸೇರಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಅವರಿಗೆ ಬಾಬರಿ ಮಸೀದಿ ನೆನಪಿಗೆ ಬರಬೇಕಿತ್ತು. ಬಾಬರಿ ಮಸೀದಿಯನ್ನು ಉರುಳಿಸಿದ ಮತ್ತು ಅದನ್ನು ಧರ್ಮದ್ವೇಷಕ್ಕಾಗಿ ಬಳಸಿಕೊಂಡ ಕಪ್ಪು ಇತಿಹಾಸವಿರುವ ಪಕ್ಷದಿಂದ ಸ್ಪರ್ಧಿಸುವಾಗ ಮತ್ತು ಅದಕ್ಕಾಗಿ ಕೆಲಸ ಮಾಡುವಾಗ ಇಲ್ಲದ ಮಸೀದಿ ಪ್ರೀತಿ 2026ರ ಅಸೆಂಬ್ಲಿ ಚುನಾವಣೆಗೆ ಪಶ್ಚಿಮ ಬಂಗಾಳ ಸಿದ್ಧವಾಗುವಾಗ ಯಾಕೆ ಉದ್ಭವಿಸಿತು ಎಂಬ ಪ್ರಶ್ನೆಗೆ ಮಹತ್ವ ಇದೆ. ಇವರಿಗೆ ಬಿಜೆಪಿಯಲ್ಲೂ ಗೆಳೆಯರಿದ್ದಾರೆ.

ಕಾಂಗ್ರೆಸ್‌ನಲ್ಲೂ ಇದ್ದಾರೆ. ಇನ್ಸ್ಪೆಕ್ಟರ್ ಜನರಲ್ (IG) ಆಗಿದ್ದ ಹುಮಾಯೂನ್ ಕಬೀರ್ ಅವರ ರಾಜಕೀಯ ಮಹತ್ವಾಕಾಂಕ್ಷೆಯೇ ಇಂಥದ್ದೊಂದು ಅಸಾಮಾನ್ಯ ಪ್ರಯತ್ನಕ್ಕೆ ಕೈ ಹಾಕಿಸಿದೆ ಎಂಬ ಮಾತಿದೆ. ಮಮತಾ ಅವರನ್ನು ಸೋಲಿಸುವುದಾಗಿ ಹೇಳಿರುವುದೇ ಅವರ ಈ ಬಾಬರಿ ಮಸೀದಿಗೂ ರಾಜಕೀಯಕ್ಕೂ ನಡುವೆ ಸಂಬಂಧ ಇರುವುದನ್ನು ಸ್ಪಷ್ಟಪಡಿಸುತ್ತದೆ. ಮಮತಾರ ಸೋಲು ಎಂಬುದು ಬಿಜೆಪಿಯ ಗೆಲುವು ಎಂದೇ ಅರ್ಥ. ಈಗಾಗಲೇ ಕಬೀರ್ ಅವರ ಬಾಬರಿ ಮಸೀದಿಗೆ ಪ್ರತಿರೋಧವಾಗಿ ಬಿಜೆಪಿ ಅವರದೇ ಮುರ್ಶಿದಾಬಾದ್‌ನಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದೆ. ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಬಾಬರಿ ಮಸೀದಿ v/s ರಾಮಮಂದಿರವಾಗಿ ಮಾರ್ಪಡಿಸುವುದಕ್ಕೆ ಬಿಜೆಪಿ ಈಗಿಂದಲೇ ಎಲ್ಲ ತಯಾರಿಯನ್ನೂ ಮಾಡತೊಡಗಿದೆ. ಇನ್ನೊಂದೆಡೆ,

ಬಾಬರ್ ಹೆಸರಲ್ಲಿ ನಿರ್ಮಾಣವಾಗುವ ಯಾವುದೇ ಮಸೀದಿಯನ್ನೂ ಬುಲ್ಡೋಜರ್ ಹರಿಸಿ ಉರುಳಿಸಲಾಗುವುದು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಹೇಳಿಕೆಗಳು ಬಿಡುಗಡೆಗೊಳ್ಳಬಹುದು. ಆ ಮೂಲಕ ಪಶ್ಚಿಮ ಬಂಗಾಳವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕೆ ದಾರಿ ಇನ್ನಷ್ಟು ಸುಲಭಗೊಳ್ಳಬಹುದು. ನಿಜ ಏನೆಂದರೆ,

ಮುಸ್ಲಿಮ್ ಸಮುದಾಯ ಮಸೀದಿಗಳ ಕೊರತೆಯಿಂದ ಬಳಲುತ್ತಿಲ್ಲ. ಬಾಬರಿ ಮಸೀದಿಯ ಪರ ಕಾನೂನು ಹೋರಾಟ ನಡೆಸುವುದಕ್ಕೆ ಮಸೀದಿಗಳ ಕೊರತೆ ಕಾರಣ ಅಲ್ಲ. ಆದ್ದರಿಂದ ಹುಮಾಯೂನ್ ಕಬೀರ್ ಅವರ ಬಾಬರಿ ಮಸೀದಿಯನ್ನು ಮುಸ್ಲಿಮ್ ಸಮುದಾಯ ಭಾವನಾತ್ಮಕವಾಗಿ ನೋಡಬೇಕಿಲ್ಲ.

ಈ ಮಸೀದಿ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುವ 300 ಕೋಟಿ ರೂಪಾಯಿಯನ್ನು ಅವರ ಕ್ಷೇತ್ರದಲ್ಲಿನ ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ ಮತ್ತು ಆರೋಗ್ಯ ಸುಧಾರಣೆಗೆ ಬಳಸಿದರೆ ಅದರಿಂದ ಸಮುದಾಯಕ್ಕೆ ಮಹದುಪಕಾರವಾಗಬಹುದು. ಮುಸ್ಲಿಮ್ ಸಮುದಾಯ ಇಂಥ ಜನಪ್ರಿಯ ಘೋಷಣೆಗಳಿಗೆ ಮರುಳಾಗದೇ ರಾಜಕೀಯ ಸಂಚುಗಳನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಯಾವ ವೇಷವನ್ನೂ ಹಾಕಿಕೊಳ್ಳ ಬಲ್ಲರು. ಸಮುದಾಯ ವೇಷದ ಸೌಂದರ್ಯಕ್ಕೆ ಬಲಿ ಬೀಳಬಾರದು.