ಎಸ್ಐಆರ್ ನೆಪದಲ್ಲಿ ಇಸ್ಲಾಮೋ ಫೋಬಿಯ: ದೆಹಲಿ ಬಿಜೆಪಿ ಘಟಕದ ವಿರುದ್ಧ ಆರೋಪ

0
377

ಸನ್ಮಾರ್ಗ ವಾರ್ತೆ

ಬಿಜೆಪಿಯ ದೆಹಲಿ ಘಟಕವು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಮೀಮ್‌ಗಳು, ಚಿತ್ರಗಳು ವಿವಾದಕ್ಕೆ ಒಳಗಾಗಿವೆ. ಮತದಾರರ ಪಟ್ಟಿ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ಮುಸ್ಲಿಮರನ್ನು ನುಸುಳು ಕೋರರಂತೆ ಮತ್ತು ದೇಶದ ವೈರಿಗಳಂತೆ ಬಿಂಬಿಸುವ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದೆ. ಮುಸ್ಲಿಮರು ಧರಿಸುವ ಟೋಪಿ ಬುರ್ಖಾವನ್ನು ವ್ಯಂಗ್ಯ ಚಿತ್ರಕ್ಕೆ ಬಳಸಲಾಗಿದೆ. ಮುಸ್ಲಿಮರನ್ನು ಇಲಿಗಳು ಹಂದಿಗಳು ಮತ್ತು ಸೊಳ್ಳೆಗಳಿಗೆ ಹೋಲಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲದ ತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ನುಸುಳುಕೋರರನ್ನು ಭಾರತದಿಂದ ಹೊರಕ್ಕಟ್ಟುವುದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಸಾಧ್ಯವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಮೇಲಿಂದ ಮೇಲೆ ದೆಹಲಿಯಲ್ಲಿ ಕೇಳಿಸಿಕೊಳ್ಳತೊಡಗಿವೆ. ಇದೇ ವೇಳೆ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದು ಎಷ್ಟು ಮಂದಿ ವಿದೇಶಿಯರನ್ನು ಪಟ್ಟಿಯಿಂದ ಹೊರಹಾಕಲಾಗಿದೆ ಎಂಬ ನಿರ್ದಿಷ್ಟ ಲೆಕ್ಕವನ್ನು ಇನ್ನೂ ಕೊಟ್ಟಿಲ್ಲ.

ಆದರೆ ನಂಬಲರ್ಹ ವರದಿಯ ಪ್ರಕಾರ ಬಿಹಾರದಲ್ಲಿ 0.012 ಶೇಕಡ ವಿದೇಶಿ ಮತದಾರರೂ ಚುನಾವಣಾ ಪಟ್ಟಿಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.

ಆದರೆ ಈ ಸತ್ಯವನ್ನು ಅಡಗಿಸಿ ಎಸ್ಐಆರ್ ಎಂಬುದು ವಿದೇಶಿ ನುಸುಳು ಕೋರರನ್ನು ಹೊರಗಟ್ಟುವ ಅದ್ಭುತ ಪ್ರಯೋಗ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಆ ಮೂಲಕ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪರೋಕ್ಷ ಪ್ರಯತ್ನದಲ್ಲೂ ನಿಬಿಡವಾಗಿದೆ.