ತೃಶೂರ್, ಜೂ. 28: ಸ್ವಂತ ಮನೆ ಕಟ್ಟಲು ಮೂರು ಸೆಂಟ್ ಸ್ಥಳ ಖರೀದಿಸಲು ಸಾಧ್ಯವಾಗದೆ ಒಂದು ಇಡೀ ಕುಟುಂಬ ಮಾನಸಿಕ ಅಸ್ವಾಸ್ಥ್ಯಗೊಂಡ ದಾರುಣ ಘಟನೆ ಕೇರಳದಲ್ಲಿ ನಡೆದಿದೆ. ಎರಡೂವರೆ ವರ್ಷ ಕತ್ತಲು ಮತ್ತು ಹೆದರಿಕೆಯಿಂದ ಬದುಕಿದ ಐವರು ಸದಸ್ಯರಿದ್ದ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿಗಳು ಕೊನೆಗೂ ಬೆಳಕು ನೀಡಲು ಯಶಸ್ವಿಯಾಗಿದ್ದಾರೆ.
ಪೂತ್ತೋಲಿಯಲ್ಲಿ ಕೇಂದ್ರ ಸರಕಾರದ ಸಂಸ್ಥೆಯ ಕ್ವಾಟ್ರರ್ಸ್ನಲ್ಲಿ ಅಪ್ಪುಕುಟ್ಟ ಮತ್ತು ಪತ್ನಿ ಮೂವರು ಮಕ್ಕಳ ಕುಟುಂಬ ವಾಸವಿದೆ. ಅಪ್ಪುಕುಟ್ಟನ್ ಅಲ್ಲದೆ ಅವರ ಹಿರಿಯ ಪುತ್ರಿಗೂ ಕೆಲಸ ಸಿಕ್ಕಿತ್ತು. ಅವರ ಮಗ ಮನೆಯಲ್ಲಿಯೇ ಅಂಗಡಿ ಆರಂಭಿಸಿದ್ದನು. ಕೊನೆಯ ಮಗಳೂ ಪದವೀಧರೆ.
ಅಪ್ಪುಕುಟ್ಟ ನ್ರಿಗೆ ನಿವೃತ್ತಿಯ ಬಳಿಕ ಸಿಕ್ಕಿದ ಹಣವನ್ನು ಉಪಯೋಗಿಸಿ ಮನೆ ಕಟ್ಟಲು ಜಮೀನು ಖರೀದಿಸಲು ತೀರ್ಮಾನಿಸಿದರು. ಅಲ್ಲಿಂದ ಕುಟುಂಬದ ಪತನ ಆರಂಭವಾಯಿತು. ಎಲ್ಲರೂ ಮಾನಸಿಕ ಅಸ್ವಸ್ಥಗೊಂಡರು. ನಗರದಲ್ಲಿ ಮೂರು ಸೆಂಟ್ ಸ್ಥಳವನ್ನು ಎಂಟು ಲಕ್ಷಕ್ಕೆ ಖರೀದಿಸುವ ಮಾತುಕತೆ ನಡೆಯಿತು. ಐದು ಲಕ್ಷ ಅಡ್ವಾನ್ಸ್ ಕೊಡಲಾಯಿತು. ರಿಜಿಸ್ತ್ರೀ ಮಾಡಿಸಿರಲಿಲ್ಲ. ನಿಗದಿತ ಸಮಯ ಕಳೆದರೂ ಬಾಕಿ ಹಣ ಕೊಡಲು ಸಾಧ್ಯವಾಗಲಿಲ್ಲ. ಸಾಲ ಕೊಡುತ್ತೇವೆ ಎಂದು ಹೇಳಿದ ಬ್ಯಾಂಕು ಹಿಂದೆ ಸರಿಯಿತು. ಜಮೀನು ಮಾರಿದವರು ಬಾಕಿ ಹಣಕ್ಕೆ ಬಂದಾಗ ಅಪ್ಪುಕುಟ್ಟನ್ ಅಡಗಿ ಕುಳಿತರು. ಫೋನ್ ಎತ್ತಲಿಲ್ಲ. ಜಮೀನು ಮಾರಿದವರು ಅಂಗಡಿಗೆ ಬರತೊಡಗಿದ್ದರಿಂದ ಮಗನೂ ಅಂಗಡಿಗೆ ಹೋಗುವುದನ್ನು ನಿಲ್ಲಿಸಿದ. ಮಗಳನ್ನು ಕೆಲಸಕ್ಕೆ ಹೋಗದಂತೆ ತಂದೆ ತಡೆದರು. ಯಾರೂ ಮನೆಯಿಂದ ಹೊರಗೆ ಹೋಗದಂತೆ ಹೇಳಿದರು.
ಅಡ್ವಾನ್ಸ್ ಹಣದ ಕುರಿತು ತೀರ್ಮಾನ ಮಾಡಲು ಸ್ಥಳ ಮಾರಿದವರು ಬಂದಾಗ ಕ್ವಾಟ್ರರ್ಸ್ನ ಬಾಗಿಲು ತೆರೆಯಲಿಲ್ಲ. ನಿವೃತ್ತರಾದ್ದರಿಂದ ಕ್ವಾಟ್ರರ್ಸ್ ಬಿಟ್ಟುಕೊಡಬೇಕೆಂದು ನೋಟಿಸು ಬಂತು. ಪುನಃ ಕುಟುಂಬದ ಸ್ಥಿತಿ ಗಂಭೀರವಾಯಿತು. ಎರಡು ದಿವಸಕ್ಕೊಮ್ಮೆ ಮಾತ್ರ ಅಪ್ಪುಕುಟ್ಟನ್ ಯಾರಿಗೂ ಗೊತ್ತಾಗದಂತೆ ಸಾಮಾನು ಖರೀದಿಸಿ ಹೋಗತೊಡಗಿದರು. ಹೀಗೆ ಯಾಕೆಂದು ಕೇಳಿದಾಗ ಮನೆಯವರಿಗೆ ಜ್ವರ ಎಂದು ಅಪ್ಪುಕುಟ್ಟನ್ ಹೇಳತೊಡಗಿದರು. ಹಣಕ್ಕೆ ಕಷ್ಟ ಆದಾಗ ವಿದ್ಯುತ್ ಬಿಲ್ ಪಾವತಿಸಲಿಲ್ಲ. ಆದ್ದರಿಂದ ವಿದ್ಯುತ್ ಸಂಪರ್ಕ ಕಡಿಯಲಾಯಿತು. ಸಹಾಯ ಮಾಡಲು ಯಾರೇ ಬಂದರೂ ಮನೆಯ ಬಾಗಿಲು ತೆರೆಯಲಿಲ್ಲ. ವಿಷಯ ಜಿಲ್ಲಾಧಿಕಾರಿಯ ಗಮನಕ್ಕೆ ಬಂದಾಗ ಸಾಮಾಜಿಕ ನ್ಯಾಯ ಇಲಾಖೆಯ ಅಧಿಕಾರಿಗಳು ಗುರುವಾರ ಅಪ್ಪುಕುಟ್ಟನ್ರ ಮನೆಗೆ ಹೋದರು. ಎಲ್ಲರೂ ಮಾನಸಿಕ ಸ್ವಾಸ್ಥ್ಯವನ್ನು ಕಳಕೊಂಡ ಸ್ಥಿತಿಯಲ್ಲಿದ್ದರು. ಇವರು ಸ್ನಾನ ಮಾಡದೆ ತಿಂಗಳುಗಳೇ ಕಳೆದು ಹೋಗಿದ್ದವು. ಉಗುರು ಉದ್ದವಾಗಿ ಬೆಳೆದಿತ್ತು. ಕೂದಲು ಜಡೆಯಾಗಿತ್ತು. ಬೆಳಕಿಗೆ ಹೆದರುತ್ತಿದ್ದರು. ಪಾತ್ರೆಯನ್ನು ತೊಳೆಯುತ್ತಿರಲಿಲ್ಲ. ಹಳೆಯ ಬಟ್ಟೆಗಳು ಹರಿದು ಹೋಗಿತ್ತು. ಇವರನ್ನು ಸ್ನಾನಮಾಡಿಸಿ ಹೊಸ ಬಟ್ಟೆ ತೊಡಿಸಿ ಆಹಾರವನ್ನು ನೀಡಿ ಪೊಲೀಸರ ಸಹಾಯದಲ್ಲಿ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.












