ಸನ್ಮಾರ್ಗ ವಾರ್ತೆ
ಒಂದು ಕಡೆ ಧರ್ಮದ ನೆಲೆಯಲ್ಲಿ ಜನರನ್ನು ರಾಜಕೀಯ ನಾಯಕರು ವಿಭಜಿಸುತ್ತಿರುವಾಗ ಮತ್ತೊಂದು ಕಡೆ ಜನರು ಈ ವಿಭಜನೆಯನ್ನೇ ತಿರಸ್ಕರಿಸಿ ಪರಸ್ಪರ ಸಹಕಾರ ಮನೋಭಾವ ಪ್ರದರ್ಶಿಸುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ . ಇಂತದ್ದೇ ಒಂದು ಘಟನೆ ಪಂಜಾಬಿನ ಫತೇಘರ್ ಸಾಹೇಬ್ ಜಿಲ್ಲೆಯ ಜಕವಾಲಿ ಗ್ರಾಮದಿಂದ ವರದಿಯಾಗಿದೆ. ಮಸೀದಿನ ನಿರ್ಮಿಸುವುದಕ್ಕಾಗಿ ಸಿಖ್ ಮಹಿಳೆಯೋರ್ವರು ಭೂಮಿಯನ್ನು ದಾನ ಮಾಡಿದ ಘಟನೆ ಇದು. ದಿವಂಗತ ಜರ್ನಲ್ ಸಿಂಗ್ ಅವರ ಪತ್ನಿ ರಾಜೇಂದ್ರ ಕೌರ್ ಅವರು ಮಸೀದಿ ನಿರ್ಮಿಸುವುದಕ್ಕಾಗಿ ಭೂಮಿಯನ್ನು ದಾನ ಮಾಡಿದ ಮಹಿಳೆಯಾಗಿದ್ದಾರೆ.
ಸ್ಥಳೀಯ ಮುಸ್ಲಿಮರು ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವುದನ್ನು ಕಂಡು ಈ ನಿರ್ಧಾರ ತಳೆದಿದ್ದೇವೆ ಎಂದು ಕುಟುಂಬ ತಿಳಿಸಿದೆ.
ಈ ಗ್ರಾಮದಲ್ಲಿ ಸಿಖ್ ಸಮುದಾಯದ ಸಂಖ್ಯೆಯೇ ಅಧಿಕವಿದೆ. ಅವರು ನೀಡಿದ ಈ ಭೂಮಿಗೆ ಪಂಜಾಬ್ನ ಶಾಹಿ ಇಮಾಮ್ ಮೌಲಾನ ಮೊಹಮ್ಮದ್ ಉಸ್ಮಾನ ರಹಮನಿ ಲೂಧಿಯಾನಿ ಅವರು ಅಡಿಗಲ್ಲು ಹಾಕಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಭಾವುಕರಾಗಿದ್ದರು ಎಂದು ವರದಿಯಾಗಿದೆ.
ನಾವು ಹೇಗೆ ಬದುಕಬೇಕು ಎಂಬುದನ್ನು ಈ ಘಟನೆ ನಮಗೆ ತಿಳಿಸುತ್ತಿದೆ. ಇತರ ನಂಬಿಕೆಗಳನ್ನು ಗೌರವಿಸುತ್ತಾ ತಮ್ಮ ನಂಬಿಕೆಗಳನ್ನು ಪಾಲಿಸಬೇಕು ಎಂದು ಮೌಲಾನ ಕರೆ ನೀಡಿದ್ದಾರೆ.
ಸಿಖ್ ಸಮುದಾಯದ ಉದಾರ ಭಾವವನ್ನು ನಾವು ಸದಾ ನಮ್ಮ ನೆನಪಿನಲ್ಲಿ ಇರಿಸಿಕೊಳ್ಳುತ್ತೇವೆ ಎಂದು ಸ್ಥಳೀಯ ಮುಸ್ಲಿಮರು ಘೋಷಿಸಿದ್ದಾರೆ.












