ಸನ್ಮಾರ್ಗ ವಾರ್ತೆ
ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ ಅಂಗೀಕಾರಗೊಂಡಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಈ ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್ ಅವರು.
ಕರಾವಳಿಗೆ ಬೆಂಕಿ ಹಚ್ಚಿದ್ದೀರ, ಇಲ್ಲಿಯೂ ಬೆಂಕಿ ಹಚ್ಚುತ್ತಿದ್ದೀರಾ ಎಂದು ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಗದ್ದಲಕ್ಕೂ ಕಾರಣವಾಗಿದೆ.
ಕರಾವಳಿ ಭಾಗದಿಂದ ಆರಿಸಿ ಬಂದ ಬಿಜೆಪಿಯ ಎಲ್ಲ ಸದಸ್ಯರು ಭೈರತಿ ಸುರೇಶ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಅವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.
ಸಚಿವ ಬೈರತಿ ಸುರೇಶ್ ಹೇಳಿದ್ದ ಮಾತನ್ನು ಕಡತದಿಂದ ವಾಪಸ್ ತೆಗೆಯುತ್ತೇನೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬಿಜೆಪಿ ಸದಸ್ಯರ ಮನವೊಲಿಸಿದರು. ಆದರೆ ತೀವ್ರ ಆಕ್ರೋಶಗೊಂಡ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹರೀಶ್ ಪೂಂಜ ರಾಜೇಶ್ ನಾಯಕ್ ಮುಂತಾದವರು ಸಭಾಧ್ಯಕ್ಷರ ಪೀಠದ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಅಶೋಕ್ ಅವರು ಮಸೂದೆಯ ಪ್ರತಿಯನ್ನು ಹರಿದು ಎಸೆದರು.
ಈ ಮಧ್ಯೆ ಸಚಿವ ಪರಮೇಶ್ವರ ಅವರು ಮಸೂದೆಗೆ ಸದನದ ಅನುಮೋದನೆ ಪಡೆದರು.












