ಸನ್ಮಾರ್ಗ ವಾರ್ತೆ
2019 ಡಿಸೆಂಬರ್ 15ರಂದು ದೆಹಲಿಯ ಜಾಮಿಯಾ ಮಿಲ್ಲಿಯ ಇಸ್ಲಾಮಿಯ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಆರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಇದೀಗ ಈ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಶೋಕಾಸ್ ನೋಟಿಸ್ ಕಳುಹಿಸಿದೆ. ಎನ್ ಆರ್ ಸಿ ಮತ್ತು ಸಿಎಎ ವಿರುದ್ಧ ವಿದ್ಯಾರ್ಥಿಗಳು 2019 ಡಿಸೆಂಬರ್ 15ರಂದು ಪ್ರತಿಭಟಿಸುತ್ತಿದ್ದಾಗ ಪೊಲೀಸರು ಏಕಾಏಕಿ ನುಗ್ಗಿ ತೀವ್ರ ದೌರ್ಜನ್ಯ ನಡೆಸಿದ್ದರು. ಇದೀಗ ಕ್ಯಾಂಪಸ್ ಕಾನೂನನ್ನು ಮೀರಿ ಒಂದು ಕಡೆ ಗುಂಪು ಸೇರಿರುವುದಕ್ಕೆ ಕಾರಣವನ್ನು ಕೇಳಿ ನೋಟಿಸ್ ಕಳುಹಿಸಲಾಗಿದೆ.
2019ರಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿತ್ತು. ಓರ್ವ ವಿದ್ಯಾರ್ಥಿ ತನ್ನ ಒಂದು ಕಣ್ಣನ್ನೇ ಕಳಕೊಂಡಿದ್ದ.
ನಾವು 2019ರ ಕ್ರೌರ್ಯದ ನೆನಪಿಗಾಗಿ ಒಂದೆಡೆ ಸೇರಿದ್ದೆವು. ಅತ್ಯಂತ ಶಾಂತಿಯುತವಾಗಿ ಈ ಸಭೆ ನಡೆದಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪ್ರತಿಭಟನಾ ಧ್ವನಿಯನ್ನು ಅಡಗಿಸುವುದೇ ಆಡಳಿತ ಮಂಡಳಿ ನೀಡಿರುವ ನೋಟಿಸ್ ನ ಉದ್ದೇಶ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ.
ನಾವು ಪೊಲೀಸ್ ದಾಳಿಯನ್ನು ಪ್ರತಿಭಟಿಸಿ ಒಂದೆಡೆ ಸೇರಿದ್ದೇವೆ. ಇದೀಗ ಹೀಗೆ ಸೇರುವುದನ್ನೇ ಅಪರಾಧವೆಂದು ಬಿಂಬಿಸಿ ವಿದ್ಯಾರ್ಥಿಗಳನ್ನು ದಂಡಿಸುವುದು ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಂಡಂತೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಈ ನೋಟೀಸು ಹಿಂಪಡೆದುಕೊಳ್ಳಬೇಕು.. ಶಾಂತಿಯುತ ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.












